ಉಡುಪಿ: ನಾಲ್ಕು ದಶಕಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿ ಆರಂಭಗೊಂಡ ನಿಶ್ಚಿತ ಗುರಿಯ ಆಂದೋಲನ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆಗೊಂಡು ರಾಜಾಂಗಣದಲ್ಲಿಯೇ ಕೃಷ್ಣಾರ್ಪಣಗೊಳ್ಳುತ್ತಿದೆ.
ಅದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂರನೆಯ ಪರ್ಯಾಯ ಕಾಲ. 1985ರ ಅಕ್ಟೋಬರ್ 31- ನವೆಂಬರ್ 1ರಂದು ರಾಜಾಂಗಣದಲ್ಲಿ ವಿಶ್ವ ಹಿಂದೂ ಪರಿಷದ್‌ನ 2ನೇ ಧರ್ಮಸಂಸದ್ ಅಧಿವೇಶನ ಆಯೋಜನೆಗೊಂಡಿತ್ತು. ಆಗ ಅಯೋಧ್ಯೆ ರಾಮಮಂದಿರಕ್ಕೆ ಬೀಗವಿತ್ತು. ಅಧಿವೇಶನದಲ್ಲಿ “ತಾಲಾ ಖೋಲೋ’ ಮತ್ತು “ಮಂದಿರ್ ವಹೀ ಬನಾಯೇಂಗೇ’ ಎಂಬೆರಡು ಉದ್ಘೋಷಗಳು ನಿರ್ಣಯ ರೂಪದಲ್ಲಿ ಹೊರಬಿದ್ದವು. “ಮಂದಿರ್ ವಹೀ ಬನಾಯೇಂಗೇ’ ಘೋಷಣೆ ಇಡೀ ದೇಶದಲ್ಲಿ ಅನುರಣಿಸಿತು. ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರಕಾರ ಮಂದಿರದ ಬೀಗವನ್ನು ತೆರೆಸಿತು.
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದನೆಯ ಪರ್ಯಾಯ ಅವಧಿಯಲ್ಲಿ 2017ರ ನವೆಂಬರ್ 24ರಿಂದ 26ರ ವರೆಗೆ ಮತ್ತೆ ಧರ್ಮಸಂಸದ್‌ನ 12ನೆಯ ಅಧಿವೇಶನ ನಡೆಯಿತು. ನ. 2ರಂದು ಆಶಯ ಭಾಷಣ ಮಾಡಿದ ಶ್ರೀಪಾದರು “2019ರ ಒಳಗೆ ಸಮಸ್ಯೆ ಇತ್ಯರ್ಥವಾಗಲಿದೆ’ ಎಂದು ಭವಿಷ್ಯ ನುಡಿದಿದ್ದರು. 2019ರ ನವೆಂಬರ್ 9ರಂದು ಸರ್ವೋಚ್ಚ ನ್ಯಾಯಾಲಯದ ಪೀಠ ಮಂದಿರ ನಿರ್ಮಾಣಕ್ಕೆ ಪೂರಕವಾದ ತೀರ್ಪು ನೀಡಿದಾಗ ಅದನ್ನು ಟಿವಿಯಲ್ಲಿ ನೋಡಿ ಶ್ರೀಪಾದರು ಸಂತಸಗೊಂಡರು. ಡಿಸೆಂಬರ್ 19ರಂದು ಅಸ್ವಸ್ಥಗೊಂಡ ಅವರು 29ರಂದು ಇಹಲೋಕ ತ್ಯಜಿಸಿದರು. ಅವರ ಶಿಷ್ಯರಾಗಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ರಸ್ಟಿಯಾಗಿ ನೇಮಕಗೊಂಡು ಮಂದಿರ ನಿರ್ಮಾಣದಲ್ಲಿ ಸಕ್ರಿಯರಾದರು.
1992ರ ಡಿಸೆಂಬರ್ 6ರಂದು ನಡೆದ ಕರಸೇವೆಯ ಸಮಯದಲ್ಲಿ ಪಾಲ್ಗೊಂಡಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮರುದಿನ (ಡಿ.7) ಬೆಳಗ್ಗೆ ಅಚಾನಕ್ಕಾಗಿ ರಾಮಲಲ್ಲಾ ಮೂರ್ತಿಯನ್ನು ತುರ್ತು ಪ್ರತಿಷ್ಠೆ ಮಾಡಿದ್ದರು. ಆಗ ಶ್ರೀಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 2ನೇ ಪರ್ಯಾಯ ಅವಧಿ. ಈಗ 2024ರ ಜನವರಿ 18ರಂದು ಪುತ್ತಿಗೆ ಮಠಾಧೀಶರ 4ನೇ ಪರ್ಯಾಯ ಪೂಜೆ ಆರಂಭದ ದಿನವೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠೆ ಆರಂಭಗೊಂಡು ಜ. 22ರಂದು ಮೂರ್ತಿಯನ್ನು ಪ್ರಧಾನಿ ಮೋದಿ ಪ್ರತಿಷ್ಠಾಪಿಸಿದರೆ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಾಣಪ್ರತಿಷ್ಠೆ ನೆರವೇರಿಸಿದರು.
ಇಂದು ಪೇಜಾವರ ಶ್ರೀ ಉಡುಪಿಗೆ
ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವ ಪೂರ್ಣಗೊಳಿಸಿದ ಪೇಜಾವರ ಶ್ರೀಪಾದರು ಮಾ. 17ರಂದು ಉಡುಪಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 11ಕ್ಕೆ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ 100ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಜಾಥಾದೊಂದಿಗೆ ಶ್ರೀ ಕೃಷ್ಣಮಠಕ್ಕೆ ಬರಲಿದ್ದಾರೆ. ನಾಲ್ಕು ದಶಕಗಳ ಹಿಂದೆ ಚಳವಳಿ ಆರಂಭಗೊಂಡ ರಾಜಾಂಗಣದಲ್ಲಿಯೇ ಪುತ್ತಿಗೆ ಶ್ರೀಗಳು ಪೇಜಾವರ ಶ್ರೀಗಳನ್ನು ಅಭಿನಂದಿಸಲಿದ್ದಾರೆ.