ನಗರದ ಪಾರ್ಕಿಂಗ್ ಸಮಸ್ಯೆ ಎಷ್ಟು ಹೇಳಿದರೂ ಸಾಲದು. ವ್ಯವಸ್ಥಿತ, ಸುಸಜ್ಜಿತ ಪಾರ್ಕಿಂಗ್ ಎನ್ನುವ ಪರಿಕಲ್ಪನೆಯೇ ಇನ್ನೂ ಜಾರಿಗೆ ಬಂದಿಲ್ಲ. ವಾಹನಗಳನ್ನು ಎಲ್ಲೆಂದರಲ್ಲಿ, ಹೇಗೆಂದರಲ್ಲಿ ನಿಲ್ಲಿಸುವುದು ಒಂದು ಸಮಸ್ಯೆ ಯಾದರೆ, ಜನದಟ್ಟಣೆ ಇರುವ ಅವಧಿಯಲ್ಲಿ, ರಜಾ ದಿನಗಳಲ್ಲಿ, ಉತ್ಸವದ ಸಂದರ್ಭದಲ್ಲಿ ಪೇಟೆಗೆ ಬರದೇ ಇರುವುದು ವಾಸಿ ಎನ್ನುವಂತಾಗಿದೆ. ಇದು ನಗರದ ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ನಗರದಲ್ಲಿನ ವಾಹನ ನಿಲುಗಡೆ ಸಮಸ್ಯೆಯನ್ನು ಯಥಾವತ್ತಾಗಿ ವಿವರಿಸಿ ಪರಿಹಾರಕ್ಕೆ ಪ್ರೇರೇಪಿಸುವುದೇ “ಸ್ವಾಮಿ, ಸ್ವಲ್ಪ ಜಾಗ ಬಿಡಿ’ ಅಭಿಯಾನದ ಉದ್ದೇಶ.
ಘಟನೆ 01 : ಶುಕ್ರವಾರ ಸಂಜೆ 7 ಗಂಟೆ. ಒಂದು ಕುಟುಂಬ ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್‌ಸ್ಟಾಂಡ್‌ನ ಹಿಂದಿನ ರಸ್ತೆ (ಶೂ ಅಂಗಡಿಯಿಂದ ಹಿಡಿದು ಗಿಫ್ಟ್ ಸ್ಟೋರ್ ಇರುವಂಥ ಜನನಿಬಿಡ ರಸ್ತೆ) ರಿಲಯನ್ಸ್ ಮಾಲ್‌ಗೆ
ಭೇಟಿಕೊಡಲು ಕಾರಿನಲ್ಲಿ ಬರುತ್ತದೆ. ಕುಟುಂಬದ ಮುಖ್ಯಸ್ಥ ಕುಟುಂಬವನ್ನು ಕೆಳಗಿಳಿಸಿ ಕಾರು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಅಕ್ಕಪಕ್ಕದಲ್ಲಿ ಸ್ಥಳವಿಲ್ಲ. ಅಷ್ಟರಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್‌ನ ಹಾರ್ನ್ ಜೋರಾಗುತ್ತದೆ. ಮುಂದೆಲ್ಲಾದರೂ ನಿಲ್ಲಿಸೋಣ ಎಂದು ಮುಂದಕ್ಕೆ ಚಲಿಸಿದ ಕಾರಿನ ಚಾಲಕ ಬಲಕ್ಕೆ ತೆಗೆದುಕೊಂಡು ಚಿತ್ತರಂಜನ್ ಸರ್ಕಲ್ ವರೆಗೂ ಹೋಗಿ ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ನಿಟ್ಟುಸಿರು ಬಿಡುತ್ತಾನೆ.
ಘಟನೆ 02: ಶ್ರೀ ಕೃಷ್ಣ ಮಠದಲ್ಲಿ ಚೂರ್ಣೋತ್ಸವ. ಹೊರ ಊರಿನಿಂದ ಬಂದವರೊಬ್ಬರು ಕಲ್ಸಂಕ ರಸ್ತೆಯಲ್ಲಿ ಬಂದು ರಾಜಾಂಗಣದಲ್ಲಿ ವಾಹನ ನಿಲ್ಲಿಸಲು ಅಣಿ ಯಾ ಗುತ್ತಾರೆ. ಸ್ಥಳ ಖಾಲಿಯಿಲ್ಲ. ಏನೂ ಮಾಡುವಂತಿಲ್ಲ. ಮುಂದೆಲ್ಲಾದರೂ ಎಂದು ಮುಂದಕ್ಕೆ ಚಲಿಸುತ್ತಾರೆ. ಸ್ವಲ್ಪ ದೂರ ಬರುವಷ್ಟರಲ್ಲೇ ಟ್ರಾಫಿಕ್ ಜಾಮ್. ಆ ಕಡೆಯೂ ಹೋಗುವಂತಿಲ್ಲ, ಈ ಕಡೆಯೂ ಬರುವಂತಿಲ್ಲ. ಸರಿ, ಮುಂದಕ್ಕೆ ಚಲಿಸುವ ಇನ್ನಿತರ ವಾಹನಗಳ ಸಾಲಿನಲ್ಲಿ ನಿಂತು ಅನಿವಾರ್ಯವಾಗಿ ಜಾಗ ಸಿಗದೇ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಮುನ್ನಡೆದು, ಬಲಕ್ಕೆ ತೆಗೆದುಕೊಂಡು ಮುಂದಕ್ಕೆ ಚಲಿಸಿ ಚಿತ್ತರಂಜನ್ ಸರ್ಕಲ್‌ಗೆ ಬಂದರೆ ಅಲ್ಲೆಲ್ಲ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗಿದೆ. ಏನೂ ಮಾಡಲಿಕ್ಕಾಗದೇ ಕೈ ಚೆಲ್ಲಿ ವಾಹನದಲ್ಲೇ ಸಮಯ ಕಳೆಯುತ್ತಾನೆ.
ಘಟನೆ 03: ಒಂದು ದಿನದ ಸಂಜೆ ಹೊತ್ತು. ಸಿಟಿ ಬಸ್‌ಸ್ಟಾಂಡ್‌ನ ಬಳಿ ಬೈಕ್‌ನ್ನು ಬಲಕ್ಕೆ ತೆಗೆದುಕೊಳ್ಳುವಾಗಲೇ ಟ್ರಾಫಿಕ್ ಜಾಮ್. ಕಷ್ಟಪಟ್ಟು ಚೂರು ಚೂರು ಮುಂದಕ್ಕೆ ಹೋಗಿ ತತ್‌ಕ್ಷಣ ಬಲಕ್ಕೆ ತೆಗೆದುಕೊಂಡು ಮುನ್ನುಗ್ಗಲು ಹೋದರೆ ಅಲ್ಲೂ ಟ್ರಾಫಿಕ್ ಜಾಮ್. ಎಲ್ಲೂ ಹೋಗುವಂತಿಲ್ಲ. ವಾಹನವನ್ನೂ ನಿಲ್ಲಿಸಿ ನಡೆದು ಹೋಗುವಂತಿಲ್ಲ. ಬೇಸರದಲ್ಲಿ ನಗರಸಭೆಗೆ, ಪೊಲೀಸರಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ, “ಈ ವ್ಯವಸ್ಥೆಯನ್ನೊಂದು ಸರಿ ಮಾಡಲಿಕ್ಕಾಗದಾ?’ ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ.
ಈ ಮೂರು ಪ್ರಸಂಗ ವಿವರಿಸುವುದು ಬೆಳೆಯುತ್ತಿರುವ ಉಡುಪಿ ನಗರದಲ್ಲಿನ ವಾಹನ ನಿಲುಗಡೆಯ ಹಾಗೂ ಸುಗಮ ಸಂಚಾರದ ಸಮಸ್ಯೆಗಳನ್ನು. ಒಂದೇ ಸಾಲಿನಲ್ಲಿ ಹೇಳುವುದಾದರೆ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆತರುವ ಪತಿ ತಾನು ಕಾರಿನಲ್ಲೇ ಕುಳಿತು, ಉಳಿದವರಿಗೆ ಶಾಪಿಂಗ್ ಮಾಡಲು ಹೇಳಬೇಕು. ಆ ಬಳಿಕ ಕುಟುಂಬವನ್ನು ಕರೆದುಕೊಂಡು ಹೊರಡಬೇಕು.
ಈ ಮೂರು ಪ್ರಸಂಗ ವಿವರಿಸುವುದು ಬೆಳೆಯುತ್ತಿರುವ ಉಡುಪಿ ನಗರದಲ್ಲಿನ ವಾಹನ ನಿಲುಗಡೆಯ ಹಾಗೂ ಸುಗಮ ಸಂಚಾರದ ಸಮಸ್ಯೆಗಳನ್ನು. ಒಂದೇ ಸಾಲಿನಲ್ಲಿ ಹೇಳುವುದಾದರೆ ತನ್ನ ಪತ್ನಿ ಮತ್ತು ಮಕ್ಕಳನ್ನು ಕರೆತರುವ ಪತಿ ತಾನು ಕಾರಿನಲ್ಲೇ ಕುಳಿತು, ಉಳಿದವರಿಗೆ ಶಾಪಿಂಗ್ ಮಾಡಲು ಹೇಳಬೇಕು. ಆ ಬಳಿಕ ಕುಟುಂಬವನ್ನು ಕರೆದುಕೊಂಡು ಹೊರಡಬೇಕು.
ಉಡುಪಿ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ವಾಹನಗಳ ಸಂಖ್ಯೆ : 4,69,835
ದ್ವಿಚಕ್ರ ವಾಹನಗಳು : 3,47,004
ಕಾರುಗಳ ಸಂಖ್ಯೆ : 64,944
ಆಟೋ ರಿಕ್ಷಾಗಳು : 21,287
ಇತರ ವಾಹನಗಳು : 35,613
ಸ್ಕೂಲ್ ಬಸ್‌ಗಳು : 987
ನೀವು ಎದುರಿಸಿದ ಸಮಸ್ಯೆ ನಮ್ಮಲ್ಲಿ ಹೇಳಿ
ಉಡುಪಿ ನಗರದಲ್ಲಿ ವಾಹನ ನಿಲುಗಡೆಯ ಸಮಸ್ಯೆಯ ತೀವ್ರತೆ ನಿಮಗೆ ತಿಳಿದೇ ಇದೆ. ನೀವು ಈ ಕುರಿತು ಎದುರಿಸಿರುವ ಘಟನೆ, ಸಮಸ್ಯೆ ಇದ್ದರೆ (
7618774529) ನಮಗೆ ತಿಳಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.