Advertisement

ಸಿಟಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಗೋಳು ಕೇಳುವವರಿಲ್ಲ

01:00 AM Feb 08, 2019 | Team Udayavani |

ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಪುರುಷ ಹಾಗೂ ಮಹಿಳಾ ಶೌಚಾಲಯ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಪ್ರಯಾಣಿಕರು, ಬಸ್‌ ಸಿಬಂದಿ ಪರ್ಯಾಯ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ.

Advertisement

ಎರಡು ಮೂರು ದಿನದಲ್ಲಿ ಮುಗಿಸಬಹುದಾದ ಕಾಮಗಾರಿ 7 ದಿನ ಕಳೆದರೂ ಮುಗಿಸುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಯಾಣಿಕರ ಗೋಳು ನಗರಸಭಾ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ. ಕೆಲವು ಪ್ರಯಾಣಿಕರು ರಾತ್ರಿಯಲ್ಲಿ ಖಾಲಿ ಇರುವ ಆವರಣ ಜಾಗ ಹಾಗೂ ಗೋಡೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಬಸ್‌ ನಿಲ್ದಾಣ ಗಬ್ಬೆದ್ದು ನಾರುತ್ತಿದೆ. ಬಸ್‌ಗೆಕಾಯುವ, ಬಸ್‌ನಿಂದ ಇಳಿಯುವ ಪ್ರಯಾಣಿಕರು ಮೂಗು ಮುಚ್ಚದೆ ಬೇರೆ ವಿಧಿಯಿಲ್ಲದಾಗಿದೆ.

ಕಾಮಗಾರಿ ನಿಧಾನಗತಿ ಬಗ್ಗೆ ಸ್ಥಳಿಯಾಡಳಿತ ಅಧಿಕಾರಿಗಳ ಬಳಿ ಕೇಳಿದರೆ ಜನರ ಸಮಸ್ಯೆ ಆಲಿಸಲು ಅವರ ಬಳಿ ಸಮಯವೇ ಇಲ್ಲವಾಗಿದೆ. 2008ರಲ್ಲಿ ಸಿಟಿ ಬಸ್‌ ನಿಲ್ದಾಣವನ್ನು ಹೊಸತಾಗಿ ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ನಗರಸಭೆಯೂ ಶೌಚಾಲಯ ಜವಾಬ್ದಾರಿ ಯನ್ನು ಖಾಸಗಿ ಸಂಸ್ಥೆಗೆ ನೀಡಿತು. ಇದೀಗ ಖಾಸಗಿ ಸಂಸ್ಥೆ ಯಾವುದೇ ಸಂಚಾರಿ ಶೌಚಾಲಯ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಮಾಡದೆ ಶೌಚಾಲಯ ದುರಸ್ತಿಗೆ ಮುಂದಾಗಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಸ್‌ ನಿಲ್ದಾಣಕ್ಕೆ ಪ್ರತಿನಿತ್ಯ 93 ಬಸ್‌ಗಳು ಬಂದು ಹೋಗುತ್ತವೆ. ನಿಲ್ದಾಣಕ್ಕೆ ಅಂಟಿಕೊಂಡು ಹೊಟೇಲ್‌ ಸೇರಿದಂತೆ 10ಕ್ಕೂ ಅಧಿಕ ಅಂಗಡಿಗಳಿವೆ. ಇವರಿಗೂ ಶೌಚಾಲಯ ದುರಸ್ತಿಯಿಂದ ತೊಂದರೆಯಾಗಿದೆ. ನಗರಸಭೆ ಅಧಿಕಾರಿ ಗಳು ಖಾಸಗಿ ಸಂಸ್ಥೆಗೆ ಪರ್ಯಾಯ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿ ಕಾಮಗಾರಿ ಮುಂದುವರಿಸುವಂತೆ ನಿರ್ದೇಶನ ನೀಡಬೇಕಾಗಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.

ಪರಸ್ಥಳದವರಿಗೆ ತೊಂದರೆ

Advertisement

ಸರ್ವಿಸ್‌ ಬಸ್‌ ನಿಲ್ದಾಣದ ಹೊರಗೆ ಶೌಚಾಲಯವಿರುವ ಬಗ್ಗೆ ಪರಸ್ಥಳದಿಂದ ಬರುವ ಪ್ರಯಾಣಿಕರಿಗೆ ಗೊತ್ತಿರುವುದಿಲ್ಲ. ಕೇಳಿ ತಿಳಿದು ಹೊರಕ್ಕೆ ಹೋಗಿ ಬರುವವರೆಗೆ ಬಸ್‌ ನಿಲ್ಲವುದಿಲ್ಲ.

-ವಿಜಯ ಶೆಟ್ಟಿ, ಪ್ರಯಾಣಿಕ

ಪರ್ಯಾಯ ವ್ಯವಸ್ಥೆ ಅಗತ್ಯ

ಪ್ರತಿನಿತ್ಯ ಬಸ್‌ಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತವೆ. ಒಮ್ಮೆ ನಿಲ್ದಾಣಕ್ಕೆ ಆಗಮಿಸಿದರೆ ಸಿಬಂದಿಗೆ ಕೇವಲ 2 ನಿಮಿಷ ಮಾತ್ರ ಅವಕಾಶವಿರುತ್ತದೆ. ಈ ಹೊತ್ತಿನಲ್ಲಿ ಅವರ ಅಗತ್ಯ ಕೆಲಸ ಮಾಡಿಕೊಳ್ಳಬೇಕಾಗುತ್ತದೆ. ದುರಸ್ತಿಯ ಹೆಸರಿನಲ್ಲಿ ಆರಂಭಿಸಿದ ಕಾಮಗಾರಿ ಒಂದು ವಾರ ಕಳೆದರೂ ಸಂಪೂರ್ಣವಾಗಿಲ್ಲ . ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದವರು ಕಣ್ಣು ಮುಚ್ಚಿ ಕೂತಿದ್ದಾರೆ.

-ರಾಬರ್ಟ್‌ ಪಾಯಸ್‌, ಸಿಟಿ ಬಸ್‌ ತುರ್ತು ಸೇವಾ ಸಂಘಟನೆಯ ಕಾರ್ಯದರ್ಶಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next