ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯುವ ಮತದಾರರ ಪಾತ್ರವೂ ಮಹತ್ವದ್ದಾಗಿದೆ.
ಕ್ಷೇತ್ರದಲ್ಲಿ ಈ ವರ್ಷ 29 ಸಾವಿರಕ್ಕೂ ಅಧಿಕ ಯುವ ಮತದಾರರಿದ್ದಾರೆ.ಹೊರ ಜಿಲ್ಲೆ, ವಿದೇಶಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಯುವ ಜನತೆ ನೆಲೆಸಿದ್ದಾರೆ.
ಇದರಲ್ಲಿ ಶೇ. 20-30ರಷ್ಟು ಪಕ್ಷಗಳ ಜತೆಗೆ ಗುರುತಿಸಿಕೊಂಡು ಪ್ರಚಾರ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಳಿದವರು ಮತದಾರರಾಗಿ ಮಗುಮ್ಮಾಗಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ನೆಚ್ಚಿನ ನಾಯಕರ ಫೋಟೊ, ವೀಡಿಯೋ ದೃಶ್ಯಾವಳಿಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮಂದಿ ಯುವ ಮತದಾರರಿದ್ದಾರೆ. ವೋಟರ್ ಹೆಲ್ಪ್ಲೈನ್‌ಗಳಲ್ಲಿ ಮತದಾರರ ಪಟ್ಟಿ ವೀಕ್ಷಣೆ, ಆನ್‌ಲೈನ್‌ನಲ್ಲಿ ಹೆಸರು, ಸರ್ ನೇಮ್ ಸರಿಪಡಿಸುವುದು, ವಿಳಾಸ ತಿದ್ದುಪಡಿ ಸಹಿತ ಮೊದಲಾದ ಪ್ರಕ್ರಿಯೆಗಳನ್ನು ಉತ್ಸಾಹದಿಂದ ಮಾಡುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಮತದಾನದ ಚರ್ಚೆ, ಚುನಾವಣೆ ಮಹತ್ವ, ಓಟು ಹಾಕುವ ಸಂತಸದ ಬಗ್ಗೆ ಹರಟೆ ಹೊಡೆಯುವ ದೃಶ್ಯವೂ ಸಾಮಾನ್ಯವಾಗಿದೆ.
ಉಡುಪಿ ಜಿಲ್ಲೆಯ ಸಾಕಷ್ಟು ಮಂದಿ ಯುವಜನರು ವಿದೇಶ, ಹೊರ ರಾಜ್ಯ, ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೆಡೇ ಐಪಿಎಲ್, ಇನ್ನೊಂದೆಡೆ ಲೋಕಸಭಾ ಚುನಾವಣೆ ಎರಡನ್ನೂ ಆಸಕ್ತಿಯಿಂದ ನೋಡುತ್ತಿದ್ದೇವೆ. ಮತದಾನದ ದಿನಕ್ಕೆ ಕಾತರದಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ ನಗರದ ಕಾಲೇಜಿನ ವಿದ್ಯಾರ್ಥಿಗಳು.
ಬಸ್, ಟ್ರೈನ್ ಬುಕ್ಕಿಂಗ್ ಆರಂಭ
ಕ್ಷೇತ್ರದಲ್ಲಿ ಎ. 26ರಂದು ಮತದಾನ ನಡೆಯಲಿದ್ದು, ಮತ ದಾನಕ್ಕಾಗಿ ಊರಿಗೆ ಮರಳಲು ಬಹುತೇಕರು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿರುವ ಬಹುತೇಕ ಯುವ ಮತದಾರರು ಈಗಾಗಲೇ ಬಸ್, ರೈಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಿಸಿದ್ದಾರೆ. ಈ ಬಾರಿ ಯುವ ಮತದಾರರ ಶೇಕಡಾವಾರು ಮತದಾನ ಹೆಚ್ಚಾ ಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಚುನಾವಣೆ: ಬಸ್ ಸಂಚಾರ ವ್ಯತ್ಯಯ
ಸುಳ್ಯ: ಲೋಕಸಭಾ ಚುನಾವಣೆ ಕರ್ತವ್ಯದ ನಿಮಿತ್ತ ಮತ ಪೆಟ್ಟಿಗೆ ಹಾಗೂ ಚುನಾವಣೆ ಸಿಬಂದಿಯನ್ನು ಮತಗಟ್ಟೆಗಳಿಗೆ ಸಾಗಿಸುವ ಸಲುವಾಗಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ನಿಯೋಜಿಸಿರುವುದರಿಂದ ಎ. 25, 26, 27ರಂದು ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಆಗಬಹುದು ಎಂದು ಕೆಎಸ್ಸಾರ್ಟಿಸಿ ಸುಳ್ಯ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.