Advertisement
ಭಾರತೀಯ ಜನಸಂಘ, ಪಿಎಸ್‌ಪಿ 1975ರ ತುರ್ತು ಪರಿಸ್ಥಿತಿಯಲ್ಲಿ ಜತೆ ಸೇರಿ 1977ರಲ್ಲಿ ಲೋಕದಳದ ಹೆಸರಿನಲ್ಲಿ ಸ್ಪರ್ಧಿಸಿದ್ದರೂ 1980ರಲ್ಲಿ ಜನತಾ ಪಾರ್ಟಿ ಆಯಿತು. 1980ರ ದಶಕದ ಕೊನೆ ಭಾಗದಲ್ಲಿ ಕರ್ನಾಟಕ ಮತ್ತು ಕರಾವಳಿ ನಾಡಿನಲ್ಲಿ ಜನತಾದಳವೂ ಸಾಕಷ್ಟು ಪ್ರಭಾವ ಹೊಂದಿತ್ತು. 1990ರ ಬಳಿಕ ಜನತಾದಳ ಕ್ಷೀಣಿಸುತ್ತ ಬಂತು. ಇತ್ತೀಚಿನ ವರೆಗೂ ಕಾಂಗ್ರೆಸ್‌ಗೆ ಬಿಜೆಪಿ, ಜನತಾದಳ ಸ್ಪರ್ಧೆ ನೀಡುತ್ತಿದ್ದರೆ, ಈಗ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧೆ ನೀಡುತ್ತಿವೆ.
1951ರ ಮೊದಲ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ (ಸೌತ್ ಕೆನರಾ ನಾರ್ತ್) ಗೆದ್ದ ಯು. ಶ್ರೀನಿವಾಸ ಮಲ್ಯರಿಗೆ 98,122 ಮತ, ಕೆ.ಬಿ. ಜಿನರಾಜ ಹೆಗ್ಡೆ (ಕೆಎಂಪಿಪಿ- ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ) ಅವರಿಗೆ 86,268 ಮತ, ಬಿ.ಜೆ. ಭಂಡಾರಿ (ಎಸ್‌ಪಿ- ಸೋಶಿಯಲಿಸ್ಟ್ ಪಾರ್ಟಿ) ಅವರಿಗೆ 36,371 ಮತಗಳು ದೊರಕಿದವು.
ಆಗ ಕಾಂಗ್ರೆಸ್‌ಗೆ ಎರಡು ಪಕ್ಷಗಳು ಪ್ರಧಾನವಾಗಿ ಸಡ್ಡು ಹೊಡೆದಿದ್ದವು. ಕೆಎಂಪಿಪಿ ಅನಂತರ ಸೋಶಲಿಸ್ಟ್ ಪಾರ್ಟಿಯೊಂದಿಗೆ ವಿಲೀನಗೊಂಡು ಪ್ರಜಾ ಸೋಶಲಿಸ್ಟ್ ಪಾರ್ಟಿ (ಪಿಎಸ್‌ಪಿ) ಆಯಿತು. 1957ರಲ್ಲಿ ಮತ್ತು 1962ರಲ್ಲಿ ಯು. ಶ್ರೀನಿವಾಸ ಮಲ್ಯ (ಕಾಂಗ್ರೆಸ್) ಅವರಿಗೆ ಸಡ್ಡು ಹೊಡೆದದ್ದು ಪಿಎಸ್‌ಪಿಯ ಮೋಹನ ರಾವ್ ಡಿ. 1967ರಲ್ಲಿ ಸ್ವತಂತ್ರ ಪಾರ್ಟಿಯ ಜೆ.ಎಂ.ಲೋಬೋ ಪ್ರಭು ಗೆದ್ದಾಗ ಕಾಂಗ್ರೆಸ್‌ನ ಎಸ್.ಎಸ್. ಕೊಳ್ಕೆಬೈಲ್ ಬಳಿಕದ ಸ್ಥಾನ ಪಿಎಸ್‌ಪಿಯ ವಿ.ಎಸ್. ಶೆಟ್ಟಿ ಅವರಿಗೆ ಇತ್ತು.
Related Articles
Advertisement
ಜೆಡಿಎಸ್ ಪ್ರಾಬಲ್ಯ1989ರಲ್ಲಿ ಆಸ್ಕರ್ ಫೆರ್ನಾಂಡಿಸ್ (ಕಾಂಗ್ರೆಸ್)-3,13,849, ಎಂ. ಸಂಜೀವ (ಜೆಡಿಎಸ್)-1,61,656, ಕರಂಬಳ್ಳಿ ಸಂಜೀವ ಶೆಟ್ಟಿ (ಬಿಜೆಪಿ)- 89,157, ಮದನಮೋಹನ ನಾಯಕ್ (ಜನತಾ ಪಾರ್ಟಿ)-14,400 ಮತಗಳನ್ನು ಗಳಿಸಿದ್ದರು. ಇಲ್ಲಿ ಗಮನಿಸಬೇಕಾದದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಂ. ಸಂಜೀವ ಅವರು ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ಎರಡನೆಯ ಸ್ಥಾನದ ಮತ ಗಳಿಸಿದರು. ಸ್ಥಳೀಯರೂ ಆರೆಸ್ಸೆಸ್, ಜನಸಂಘ, ಬಿಜೆಪಿಗೆ ಜೀವನವನ್ನೇ ಕೊಟ್ಟ ಬಿಜೆಪಿಯ ಕರಂಬಳ್ಳಿ ಸಂಜೀವ ಶೆಟ್ಟಿಯವರು ಮೂರನೆಯ ಸ್ಥಾನಕ್ಕೆ ಇಳಿದರು. ಇದು ಆ ಕಾಲದಲ್ಲಿ ಜನತಾದಳದ ಪ್ರಭಾವಲಯವನ್ನು ಸೂಚಿಸುತ್ತದೆ. 1985ರ ವೇಳೆ ಅವಭಜಿತ ದ.ಕ. ಜಿಲ್ಲೆಯಲ್ಲಿ ಜೆಡಿಎಸ್ ಅನೇಕ ಶಾಸಕರನ್ನೂ ಹೊಂದಿತ್ತು. ಏರಿದ ಬಿಜೆಪಿ, ಕುಸಿದ ಜೆಡಿಎಸ್
1991ರ ಚುನಾವಣೆಯಲ್ಲಿ ಆಸ್ಕರ್ ಫೆರ್ನಾಂಡಿಸ್ (ಕಾಂಗ್ರೆಸ್) – 2,34,120, ರುಕ್ಮಯ ಪೂಜಾರಿ (ಬಿಜೆಪಿ) -1,46,308, ಯು.ಆರ್. ಸಭಾಪತಿ (ಜೆಡಿಎಸ್) – 1,04,071 ಮತಗಳನ್ನು ಪಡೆದರು.ಹಿಂದಿನ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಈಗ ಎರಡನೆಯ ಸ್ಥಾನಕ್ಕೂ, ಎರಡನೆಯ ಸ್ಥಾನದಲ್ಲಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೂ ಇಳಿಯಿತು. 1996ರಲ್ಲಿ ಆಸ್ಕರ್ ಫೆರ್ನಾಂಡಿಸ್ ಗೆದ್ದಾಗ ಮೂರನೆಯ ಸ್ಥಾನದಲ್ಲಿ ಜೆಡಿಎಸ್‌ನಡಿ ಸ್ಪರ್ಧಿಸಿದ ಬೆಳ್ತಂಗಡಿಯ ವಸಂತ ಬಂಗೇರ ನಿಂತರು. ಹಿಂದಿನ ಚುನಾವಣೆಗಿಂತ ಹೆಚ್ಚು ಮತಗಳನ್ನು ಜೆಡಿಎಸ್ ಪಡೆಯಿತು. 2012ರಲ್ಲಿ ಎಸ್.ಎಲ್. ಭೋಜೇಗೌಡರು 72,080 ಮತಗಳನ್ನು ಗಳಿಸಿದ್ದು ಹೊರತುಪಡಿಸಿದರೆ 1998, 1999, 2004, 2014ರಲ್ಲಿ ಜೆಡಿಎಸ್ ಗಣನೀಯ ಸಾಧನೆ ಮಾಡಲಿಲ್ಲ. ಚಿಕ್ಕಮಗಳೂರಿನಲ್ಲಿ
ಚಿಕ್ಕಮಗಳೂರು ಕ್ಷೇತ್ರದಿಂದ 1967ರಲ್ಲಿ ಪಿಎಸ್‌ಪಿಯ ಎಂ. ಹುಚ್ಚೇಗೌಡರು ಗೆಲುವು ಸಾಧಿಸಿದರು. 1977ರಲ್ಲಿ ಕಾಂಗ್ರೆಸ್‌ಗೆಪ್ರತಿಯಾಗಿ ಲೋಕದಳದ ಬಿ.ಎಲ್. ಸುಬ್ಬಮ್ಮ ಸ್ಪರ್ಧಿಸಿದ್ದರು. 1978ರಲ್ಲಿ ಡಿ.ಬಿ. ಚಂದ್ರೇಗೌಡರು ರಾಜೀನಾಮೆ ಕೊಟ್ಟು ಇಂದಿರಾಗಾಂಧಿಯವರಿಗೆ ಸ್ಥಾನ ಕಲ್ಪಿಸಿದರು. ಈ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರಿಗೆ 2,49,376 ಮತಗಳೂ ವಿಪಕ್ಷದ ವೀರೇಂದ್ರ ಪಾಟೀಲರಿಗೆ 1,72,043 ಮತಗಳೂ ದೊರಕಿದ್ದವು. 1980ರಲ್ಲಿ ಜನತಾ ಪಾರ್ಟಿ ಕಾಂಗ್ರೆಸ್‌ನೆದುರು ಬಹಳ ಮತಗಳ ಅಂತರದಿಂದ ಸೋಲನುಭವಿಸಿತು. 1988ರಲ್ಲಿ ಜೆಡಿಎಸ್‌ನ ಇ.ವಿ.ವಾಜ್ 1,32,267 ಮತ ಗಳಿಸಿ ಅಸ್ತಿತ್ವ ಉಳಿಸಿಕೊಂಡಿದ್ದರು. ಈ ನಡುವೆ ಜನತಾ ಪಾರ್ಟಿಯ ರತ್ನಮ್ಮ ಮಲ್ಲೇಗೌಡ 52,066 ಮತ ಗಳಿಸಿದ್ದರು. 1996ರಲ್ಲಿ ಬಿ.ಎಲ್. ಶಂಕರ್ ಜನತಾದಳದಿಂದ ಸ್ಪರ್ಧಿಸಿ 1,95,857 ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು. ಇದುವೇ ಜನತಾದಳಕ್ಕೆ ಸಿಕ್ಕಿದ ಮೊದಲ ಗೆಲುವು. 1998ರಲ್ಲಿ ಡಿ.ಸಿ. ಶ್ರೀಕಂಠಪ್ಪ ಬಿಜೆಪಿಯಿಂದ ಗೆಲುವು ಸಾಧಿಸಿದಾಗ ಮೂರನೆಯ ಸ್ಥಾನಕ್ಕೆ ಜೆಡಿಎಸ್‌ನ ಬಿ.ಎಲ್. ಶಂಕರ್ ಕುಸಿದರು. 1999ರಲ್ಲಿ ಜೆಡಿಎಸ್ ಮತ್ತಷ್ಟು ಕುಸಿತ ಕಂಡಿತು. 2004ರಲ್ಲಿ ಡಿ.ಕೆ.ತಾರಾದೇವಿಯಿಂದಾಗಿ ಜೆಡಿಎಸ್ 1,72,125 ಮತಗಳನ್ನು ಪಡೆಯುವಂತಾಯಿತು. ಮುಂದೆ ಯಾರ ಬಲ?
2019ರ ಚುನಾವಣೆಯ ಕಾಲಘಟ್ಟದಲ್ಲಿದ್ದೇವೆ. ಇದು ವಿಚಿತ್ರ ಕಾಲಘಟ್ಟ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿಜೆಪಿ ಎದುರು ಸ್ಪರ್ಧಿಸುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಜೆಡಿಎಸ್ ಟಿಕೆಟ್‌ನಡಿ ಸ್ಪರ್ಧಿಸುವುದು ವಿಶೇಷ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ದುರ್ಬಲಗೊಂಡ ಜೆಡಿಎಸ್‌ಗೆ ಕಾಂಗ್ರೆಸ್ ಬಲ ಸೇರಿಕೊಂಡರೆ ಬಲ ದ್ವಿಗುಣಗೊಳ್ಳಬಹುದು. ಇದಕ್ಕೆ ಕಮ್ಯುನಿಸ್ಟ್ ಪಕ್ಷದ ಬಲವೂ ಸೇರ್ಪಡೆಗೊಳ್ಳಬಹುದು. ಮುಂದೆ ಇದು ಜೆಡಿಎಸ್ ಬಲವಾಗಲಿದೆಯೆ? ಕಾಂಗ್ರೆಸ್ ಬಲವಾಗಲಿದೆಯೆ? ಎಂಬುದನ್ನು ಈಗಲೇ ಊಹಿಸುವುದು ಕಷ್ಟ.