Advertisement
ಪೊಲೀಸರು ಆತನನ್ನು ನ.28ರ ವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಕಾರಣ ಆ ದಿನಾಂಕಕ್ಕೂ ಮುನ್ನ ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ.
ಪೊಲೀಸರು ನಿರಂತರವಾಗಿ ಆತನನ್ನು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕು, ಮಾಸ್ಕ್, ಬ್ಯಾಗ್ ಸಹಿತ ಇತರ ವಸ್ತುಗಳು ಆತನ ಬಿಜೈಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ. ಬಿಜೈನಲ್ಲಿರುವ ಮೃತ ಯುವತಿ ಅಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್ ಅನ್ನು ಸಹೋದ್ಯೋಗಿ ಅಯ್ನಾಝ್ಗೆ ಬಳಕೆ ಮಾಡಲು ನೀಡಿದ್ದ. ಆರೋಪಿ ಆಕೆಗೆ ಸ್ಕೂಟರ್ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದನ್ನು ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ.
Related Articles
ನೇಜಾರಿನಲ್ಲಿ ಕೊಲೆ ನಡೆಸಿದ ಬಳಿಕ ಅನ್ಯರ ಬೈಕ್ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್ ಮಾರ್ಗವಾಗಿ ಹೆಜಮಾಡಿ ಟೋಲ್‌ಗೇಟ್ ತಲುಪಿದ್ದ. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದ ಬಳಿ ತೆರಳಿ ಆತ ರಕ್ತಸಿಕ್ತ ಬಟ್ಟೆಯನ್ನು ಅಲ್ಲಿಯೇ ಸುಟ್ಟುಹಾಕಿದ್ದಾನೆ. ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ತಿಳಿಸಿದ್ದು, ಬಟ್ಟೆಯ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
Advertisement
ಮಹಜರು ಪೂರ್ಣಈಗಾಗಲೇ ಘಟನೆ ನಡೆದ ನೇಜಾರಿನ ಮನೆ, ಸಂತೆಕಟ್ಟೆ, ಕರಾವಳಿ ಬೈಪಾಸ್, ಹೆಜಮಾಡಿ, ಮೂಲ್ಕಿ ಭಾಗ, ಕೆಪಿಟಿ ಬಳಿಯಲ್ಲಿರುವ ಫ್ಲ್ಯಾಟ್, ಮಂಗಳೂರಿನಲ್ಲಿರುವ ಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆಯಲ್ಲಿ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಆತ ಉಳಿದುಕೊಂಡಿದ್ದರಿಂದ ಆತನ ಊರಾದ ಮಹಾರಾಷ್ಟ್ರದ ಸಾಂಗ್ಲಿಗೆ ಕರೆದುಕೊಂಡು ಹೋಗುವ ಪ್ರಕ್ರಿಯೆ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ
ಆರೋಪಿಯನ್ನು ಪೊಲೀಸರು ಮಂಗಳವಾರವೂ ವಿಚಾರಣೆಗೆ ಒಳಪಡಿಸಿದರು. ಮುಂದಿನ ಎರಡು ದಿನಗಳೊಳಗೆ ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಆತನಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹಾಜರುಪಡಿಸುವ ದಿನಾಂಕವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಜನದಟ್ಟನೆಯನ್ನು ತಪ್ಪಿಸುವ ಉದ್ದೇಶದಿಂದ ನ್ಯಾಯಾಧೀಶರ ಮನೆಗೂ ಆತನನ್ನು ಹಾಜರುಪಡಿಸಬಹುದು. ನ.15ರಂದು ಆರೋಪಿಯನ್ನು ಕೋರ್ಟ್‌ಗೆ ಕರೆತಂದಿದ್ದ ವೇಳೆ 200ಕ್ಕೂ ಅಧಿಕ ಮಂದಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ನಗರದ ಆಯಾ ಕಟ್ಟಿನ ಭಾಗದಲ್ಲಿಯೂ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂದೆಯೂ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಕುಸ್ತಿ “ಪ್ರವೀಣ’
ದೈಹಿಕವಾಗಿಯೂ ಸದೃಢನಾಗಿದ್ದ ಆರೋಪಿ ಪ್ರವೀಣ್ ಕುಸ್ತಿಪಟುವಾಗಿದ್ದ. ಎದುರಾಳಿಯನ್ನು ಸೋಲಿಸುವುದನ್ನು ಆತ ತಿಳಿದುಕೊಂಡಿದ್ದ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಚಾಕುವಿನಿಂದ 4 ಮಂದಿಯನ್ನು ಒಬ್ಬನೇ ಕೊಲ್ಲಲು ಸಾಧ್ಯವಾಗಿತ್ತು. ಕೊಲೆ ನಡೆಸಿದ ದಿನ ಮಾದಕದ್ರವ್ಯ ಏನಾದರೂ ಸೇವಿಸಿದ್ದನೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಫಾರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈಸೇರಬೇಕಿದೆ.