ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಮತ್ತು ಕಾರ್ಕಳ ತಾಲೂಕಿನಲ್ಲಿ ಅಗತ್ಯವಿರುವ ಕಡೆ ಕಾಲು ಸಂಕಗಳನ್ನು ತುರ್ತಾಗಿ ನಿರ್ಮಿಸಿಕೊಡಬೇಕೆಂದು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಸರಕಾರವನ್ನು ಆಗ್ರಹಿಸಿದರು.
“ಬೇರೆ ದಾರಿಯೇ ಇಲ್ಲ, ಒಂದು ಕಾಲು ಸಂಕ ಕೊಡಿ’ ಎಂದು ಉದಯವಾಣಿ ದಿನಪತ್ರಿಕೆಯಲ್ಲಿ ಜುಲೈ 22ರಂದು ಪ್ರಕಟವಾದ ವರದಿಯನ್ನು ಉಲ್ಲೇಖೀಸಿ ವಿಧಾನ ಪರಿಷತ್ತಿನಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು ಸರಕಾರದ ಗಮನ ಸೆಳೆದರು.
ಇವರು ಕೇಳುವುದು ದೊಡ್ಡ, ದೊಡ್ಡ ರಸ್ತೆಗಳನ್ನಲ್ಲ, ಸೇತುವೆಗಳನ್ನೂ ಅಲ್ಲ. ಈ ಭಯಂಕರ ಕಾಡಿನ ಅಬ್ಬರದ ಹೊಳೆಗಳನ್ನು ದಾಟುವ ಅನಿವಾರ್ಯತೆಯ ನಡುವೆ ಪ್ರಾಣ ಉಳಿಸಿಕೊಳ್ಳಲು ಒಂದು ಕಾಲು ಸಂಕವನ್ನು. ಸಾವಿರಾರು ಕುಟುಂಬಗಳಿಗೆ ಮಳೆಗಾಲದ ಮೂರ್‍ನಾಲ್ಕು ತಿಂಗಳು ಎನ್ನುವುದು ಯಮ ಯಾತನೆಯಾಗಿದೆ. ಮಕ್ಕಳಿಗೆ ಶಾಲೆ ಮರೀಚಿಕೆಯಾಗಿದೆ. ಆದ್ದರಿಂದ ಈ ಭಾಗದಲ್ಲಿ ಸರ್ವೆ ನಡೆಸಿ ಅಗತ್ಯವಿರುವ ಕಡೆ ಕಾಲು ಸಂಕಗಳನ್ನು ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ವರ್ಷ 200 ಕಾಲು ಸಂಕ
ಭಂಡಾರಿಯವರ ಪ್ರಸ್ತಾವಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಈಗಾಗಲೇ ನಮ್ಮ ಸರಕಾರ ಕಳೆದ ವರ್ಷ 100 ಕಾಲುಸಂಕ ಮಂಜೂರು ಮಾಡಿದ್ದು ಕೆಲವು ಕಾಮಗಾರಿ ಆಗಿದೆ, ಕೆಲವು ಬಾಕಿ ಇದೆ. ಈ ವರ್ಷ 200 ಕಾಲುಸಂಕಗಳನ್ನು ಮಂಜೂರು ಮಾಡಲು ಆದೇಶ ಮಾಡಿದ್ದೇನೆ. 12 ಜಿಲ್ಲೆಗಳಲ್ಲಿ ಕಾಲುಸಂಕ ರಚನೆಯಾಗಲಿದ್ದು 10,15,25 ಲಕ್ಷ ರೂ. ಖರ್ಚಾಗಲಿದೆ ಎಂದರು.
ಸೋಮವಾರ ಶಾಸಕ ಗುರುರಾಜ್ ಗಂಟಿಹೊಳೆ ಅವರು ಈ ಬಗ್ಗೆ ಪ್ರಸ್ತಾವಿಸಿದ್ದು, ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಲೋಕೋ ಪಯೋಗಿ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಜಿಲ್ಲಾ ರಸ್ತೆ, ಸೇತುವೆಗಳು – ಬಂಡವಾಳ ವೆಚ್ಚದಡಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹ್ಯಾಮ್ಲೆಟ್ (ಉಪಗ್ರಾಮ)ಗಳಿಗೆ ಸಂಪರ್ಕ ಯೋಜನೆಯಡಿ 7 ಪ್ಯಾಕೇಜ್‌ಗಳಲ್ಲಿ ಒಟ್ಟು 23 ಕಾಲುಸಂಕ ನಿರ್ಮಾಣ ಕಾಮಗಾರಿಗೆ 5 ಕೋ.ರೂ. ಅನುಮೋದನೆಗೊಂಡಿದೆ ಎಂದರು.