ಉಡುಪಿ: ದೇಶದಲ್ಲಿ ಶಿಕ್ಷಣ ಮುಖ್ಯ ಎಂಬುದು ಗುರುಗಳ ಆಶಯವಾಗಿತ್ತು. ಹಿಂದುಳಿದ ವರ್ಗದ ಜನರನ್ನು ಕತ್ತಲೆಯಿಂದ ಬೆಳಕಿಗೆ ತಂದವರು, ಶೋಷಿತರನ್ನು ಮುಖ್ಯವಾಹಿನಿಗೆ ತಂದವರು ಶ್ರೀ ನಾರಾಯಣ ಗುರುಗಳು ಎಂದು ಸೋಲೂರು ಮಠದ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ನುಡಿದರು.
ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಸ್ವಾಮೀಜಿಯವರು ರವಿವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಸಮ್ಮಾನ ಸ್ವೀಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಗುರುಗಳ ಪ್ರತಿಮೆಯನ್ನು ವಿಧಾನಸೌಧದಲ್ಲಿ ನಿರ್ಮಿಸಬೇಕು. ನಾರಾಯಣ ಗುರುಗಳ ಹೆಸರಿನಲ್ಲಿ ಸ್ಥಾಪನೆಯಾಗಿದ್ದ ನಿಗಮ ಮಂಡಳಿಯನ್ನು ಅನುಷ್ಠಾನಕ್ಕೆ ತರಬೇಕು. ಇದಕ್ಕೆ 500 ಕೋ.ರೂ.ಯನ್ನು ಮೀಸಲಿಡಬೇಕೆನ್ನುವ ಬೇಡಿಕೆ ಸಮಾಜದಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್‌ಪಾಲ್ ಎ. ಸುವರ್ಣ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಸುನೀತಾ ಲೋಕನಾಥ ಕೋಟ್ಯಾನ್, ಮಾಜಿ ಶಾಸಕ ಬಸವರಾಜ್ ಅವರನ್ನು ಸಮ್ಮಾನಿಸ ಲಾಯಿತು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಉದ್ಯಮಿ ದೇವದಾಸ ಸುವರ್ಣ, ಡಿ.ಆರ್. ರಾಜು, ಪ್ರವೀಣ್ ಪೂಜಾರಿ ಬೆಂಗಳೂರು, ನವೀನ್ ಅಮೀನ್, ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಸಂಘದ ಉಪಾಧ್ಯಕ್ಷರಾದ ಎಚ್. ಅಶೋಕ ಪೂಜಾರಿ ಹಾರಾಡಿ, ರಾಘು ಪೂಜಾರಿ, ನರಸಿಂಹ ಪೂಜಾರಿ, ರಾಜು ಪೂಜಾರಿ ಉಪ್ಪೂರು, ಕೋಶಾಧಿಕಾರಿ ಮೋಹನ ಪೂಜಾರಿ, ಯುವ ಸಂಘಟನೆ ಅಧ್ಯಕ್ಷ ಉಮೇಶ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಎಸ್. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಬಾಲಕೃಷ್ಣ ಪೂಜಾರಿ, ದಯಾನಂದ ಕರ್ಕೇರ ನಿರೂಪಿಸಿದರು. ಕಾರ್ಯದರ್ಶಿ ಶೇಖರ ಪೂಜಾರಿ ವಂದಿಸಿದರು.