ಉಡುಪಿ: ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣ ಭೇದಿಸಿ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಸಿಐಡಿ ತಂಡ ಮೂರು ತಿಂಗಳು ಉಡುಪಿಯಲ್ಲಿ ಬೀಡುಬಿಟ್ಟಿತ್ತು.
ಸಿಐಡಿ ಮತ್ತು ಫಾರೆನ್ಸಿಕ್ ತಜ್ಞರ ತಂಡ ಸಾಕಷ್ಟು ಶ್ರಮಿಸಿದ್ದರಿಂದ ಆರೋಪವನ್ನು ರುಜುವಾತುಪಡಿಸಲು ಸಾಧ್ಯವಾಯಿತು ಎಂಬುದು ಉಲ್ಲೇಖನೀಯ. ಮೃತದೇಹ ಸಿಗದಿದ್ದರೂ ವೈಜ್ಞಾನಿಕ ಆಯಾಮಗಳ ತನಿಖೆಯಿಂದ ಪ್ರಕರಣವನ್ನು ಭೇದಿಸುವಲ್ಲಿ ತಂಡ ಯಶಸ್ವಿಯಾಗಿದೆ.
2016ರ ಜು. 28ರಂದು ಭಾಸ್ಕರ ಶೆಟ್ಟಿ ನಾಪತ್ತೆ, ಕೊಲೆಯಾಗಿದ್ದರು. ಪ್ರಕರಣವು ಆ. 16ರಂದು ಸಿಐಡಿಗೆ ಹಸ್ತಾಂತರವಾಗಿತ್ತು. ತನಿಖೆಗಿಳಿದ ಸಿಐಡಿ ಡಿವೈಎಸ್‌ಪಿ ಎಸ್.ಟಿ. ಚಂದ್ರ ಶೇಖರ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡ 3 ತಿಂಗಳ ಕಾಲ ಉಡುಪಿಯಲ್ಲೇ ನೆಲೆಸಿ ಪೂರಕ ಸಾಕ್ಷ್ಯಾಧಾರ ಸಂಗ್ರಹಿಸಿತ್ತು.
ಫೋನ್ ಕರೆ ಶೋಧ: ಮೊದಲಿಗೆ ಭಾಸ್ಕರ ಶೆಟ್ಟಿ ಸಹಿತ ಹಲವರ ಫೋನ್ ಕರೆಗಳನ್ನು ಶೋಧಿಸಲಾಯಿತು. ಬಳಿಕ ಭಾಸ್ಕರ ಶೆಟ್ಟಿ ಆಸ್ತಿ ಬಗ್ಗೆ ವೀಲುನಾಮೆ ಬರೆಸಿದ್ದ ವಕೀಲರ ಹೇಳಿಕೆ ಪಡೆದಿದ್ದು, ಇದು ಕೂಡ ನ್ಯಾಯಾಲಯದಲ್ಲಿ ಮಹತ್ತರ ಸಾಕ್ಷಿಯಾಗಿ ಪರಿಣಮಿಸಿದೆ.
ಘಟನೆಯ ಮರುಸೃಷ್ಟಿ: ಸರಕಾರದ ವಿಶೇಷ ಅಭಿಯೋಜಕ ಎಂ. ಶಾಂತಾರಾಮ ಶೆಟ್ಟಿ ಮತ್ತು ಸಿಐಡಿ ತನಿಖಾ ತಂಡದ ಮುತುವರ್ಜಿಯಿಂದ ಆರೋಪಿ ಗಳ ತಂತ್ರಗಾರಿಕೆ ಬಯಲಾಗಿದೆ. ಒಟ್ಟಾರೆ ಘಟನೆಯ ಬಗ್ಗೆ ಆರೋಪಿಗಳೂ ಹಂತ-ಹಂತವಾಗಿ ವಿವರಣೆ ನೀಡಿ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಘಟನೆಯ ಮರುಸೃಷ್ಟಿಯ ಸಂದರ್ಭವೂ ಇಡೀ ಘಟನೆ ನಡೆಸಿದ ರೀತಿಯನ್ನು ಆರೋಪಿಗಳು ಒಪ್ಪಿಕೊಂಡಿರುವರು.
ಸಾಕ್ಷಿಗಳೆಲ್ಲ ಸಾಬೀತು: ಮೊಬೈಲ್ ಲೊಕೇಶನ್ ಮೂಲಕ ಆರೋಪಿಗಳು ಎಲ್ಲಿದ್ದರು ಎಂಬ ಸಂಪೂರ್ಣ ಮಾಹಿತಿಯನ್ನು ಸಿಐಡಿ ತಂಡ ಕಲೆಹಾಕಿತ್ತು. ಕೃತ್ಯ ನಡೆದ ಸ್ಥಳ, ಭಾಸ್ಕರ್ ಶೆಟ್ಟಿ ಹೊಟೇಲ್‌ನಿಂದ ಮನೆಗೆ ಬಂದಿರುವ ಬಗೆಗಿನ ತಾಂತ್ರಿಕ ಮಾಹಿತಿಯನ್ನೂ ಸಂಗ್ರಹಿಸಿತ್ತು. ಈ ಎಲ್ಲ ಸಂಗತಿಗಳು ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಒಟ್ಟಾರೆ ಪ್ರಕರಣದಲ್ಲಿ 167 ಸಾಕ್ಷಿಗಳು, 1,500 ಪುಟದ ಚಾರ್ಜ್‌ಶೀಟ್ ಸಿದ್ಧಪಡಿಸಿ ಸಿಐಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಸಿಐಡಿ ಡಿಜಿಪಿ ಕಿಶೋರ್‌ಚಂದ್ರ, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿ ಸೋನಿಯಾ ನಾರಂಗ್ ಮಾರ್ಗದರ್ಶನದಲ್ಲಿ ಸಿಐಡಿ ಎಸ್‌ಪಿ ರಾಜಪ್ಪ, ಎಡಾ ಮಾರ್ಟಿನ್, ಡಿವೈಎಸ್‌ಪಿ ಎಸ್.ಟಿ. ಚಂದ್ರಶೇಖರ್ ನೇತೃತ್ವದ ತಂಡ ಈ ಮಹತ್ತರವಾದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು.
ತಾಳೆಯಾದ ಕೂದಲು, ರಕ್ತದ ಕಲೆ: ಭಾಸ್ಕರ್ ಶೆಟ್ಟಿ ತಂಗಿದ್ದ ಹೊಟೇಲ್‌ನಲ್ಲಿ ಅವರ ಕೂದಲು ಲಭಿಸಿತ್ತು. ಅನಂತರ ನಿರಂಜನ ಭಟ್‌ನ ಕಾರಿನಲ್ಲಿ ರಕ್ತದ ಕಲೆ ಮತ್ತು ಆತನ ನಂದಳಿಕೆಯ ಮನೆ ಸಮೀಪ ಪತ್ತೆಯಾದ ರಕ್ತದ ಮಾದರಿ, ನದಿಯಲ್ಲಿ ಸಿಕ್ಕಿದ ಮೂಳೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಹಾಗೂ ಸಹೋದರ ಸುರೇಶ್ ಅವರ ಡಿಎನ್‌ಎ ಹೋಲಿಕೆ ಪರೀಕ್ಷೆ ತಾಳೆಯಾಗಿದ್ದು ಪೂರಕ ಅಂಶವಾಗಿತ್ತು