ಉಡುಪಿ: ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ತಾತ್ಕಾಲಿಕ ರಾಜಾಂಗಣ ಸಭಾಭವನದಲ್ಲಿ ಬುಧವಾರ ರಾತ್ರಿ ನಡೆದ ನಾದಲಯಾಮೃತ ಕಾರ್ಯಕ್ರಮವು ಸಭಾಭವನವನ್ನು ಮೀರಿ ಪಾರ್ಕಿಂಗ್ ಪ್ರದೇಶ ವ್ಯಾಪ್ತಿಗೆ ವಿಸ್ತರಿಸಿತು. ಕಾರ್ಯಕ್ರಮವು ಕಿಕ್ಕಿರಿದ ಜನಸಂದಣಿಗೆ ಸಾಕ್ಷಿಯಾಯಿತು. ವಾಹನಗಳನ್ನು ನಿಲ್ಲಿಸಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಪಂ| ಜಾಕೀರ್ ಹುಸೇನ್ ಅವರ ತಬ್ಲಾ, ವಿ| ಕುಮರೇಶ್ ಅವರ ಪಿಟೀಲು, ಜಯಂತಿ ಕುಮರೇಶ್ ಅವರ ವೀಣಾ ವಾದನದ ಜುಗಲ್ಬಂದಿಯಿಂದ ಕಲಾರಸಿಕರು ರಸದೌತಣ ಅನುಭವಿಸಿದರು. ಪೂರ್ವಿ ಕಲ್ಯಾಣಿ, ನಾಟಕುರುಂಜಿ, ನಾಟ, ಹಿಂದೋಳ ಮೊದಲಾದ ರಾಗ ಗಳಿಂದ ಕುಮರೇಶ್ ಮತ್ತು ಜಯಂತಿ ಕುಮರೇಶ್ ಅವರು ಹಾಡುಗಳನ್ನು ಪ್ರಸ್ತುತಿ ಪಡಿಸಿ ಮತ್ತು ಜಾಕೀರ್ ಹುಸೇನ್ ಅವರು ತಮ್ಮ ಕೈಚಳಕದಿಂದ ಸಭಾಸದರ ಚಪ್ಪಾಳೆ ಗಿಟ್ಟಿಸಿಕೊಂಡರು.
ಕುಮರೇಶ್ ಪಿಟೀಲಿನಲ್ಲಿ, ಜಯಂತಿಯವರು ವೀಣೆಯಲ್ಲಿ ಹೊಸ ಹೊಸ ಧ್ವನಿಗಳನ್ನು ಮೂಡಿಸಿದರು. ಜಾಕೀರ್ ಅವರು ತಬ್ಲಾದಲ್ಲಿ ಆಕರ್ಷಕ ಪಟ್ಟುಗಳನ್ನು ಮೂಡಿ ಸಿದರು. ರಾಗಂ ತಾನಂ ಪಲ್ಲವಿ ಬಳಿಕ ಜಾಕೀರ್ ಅವರು ತನಿಯಾವರ್ತನದಲ್ಲಿ ಪ್ರೌಢಿಮೆಯನ್ನು ಮೆರೆದರು. ಪ್ರತೀ ಪ್ರಸ್ತುತಿ ಮುಗಿದ ಅನಂತರವೂ ಜನರ ಆನಂದ ಪ್ರಕಟವಾಗುತ್ತಿತ್ತು.
ಕಾರ್ಯಕ್ರಮಕ್ಕೆ ಮುನ್ನ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಕಲಾವಿದರು ಪರ್ಯಾಯ ಶ್ರೀ ಪೇಜಾವರ ಶ್ರೀಗಳ ಜತೆ ಮಾತುಕತೆ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಪಾದರು ಕಲಾವಿದರನ್ನು ಗೌರವಿಸಿದರು.
ಜಾಕೀರ್ ಅವರ ತಂದೆ ಅಲ್ಲಾ ರಖಾ ಅವರು ಒಂದು ಬಾರಿ ಉಡುಪಿಯಲ್ಲಿ ಕಾರ್ಯಕ್ರಮ ನೀಡಿದ್ದರೆ, ಜಾಕೀರ್ ಅವರು ನಾಲ್ಕೆ „ದು ಬಾರಿ ಉಡುಪಿಯಲ್ಲಿ ಕಾರ್ಯಕ್ರಮ ನೀಡಿದ್ದರು.