Advertisement

ಅಜ್ಜರಕಾಡು ವಾರ್ಡ್‌ನಲ್ಲಿ ತಿಂಗಳಿಂದ ನೀರಿನ ಸಮಸ್ಯೆ

12:06 AM Jan 28, 2020 | Sriram |

ನೀರಿನ ಸಮಸ್ಯೆ ಇರುವ ಸ್ಥಳಕ್ಕೆ ಎರಡು ದಿನಗಳ ಹಿಂದೆ ನಗರ ಸಭೆಯ ಅಧಿಕಾರಿಗಳು ಭೇಟಿ ನೀಡಿ ನೀರಿನ ಪೈಪು ಹಾದುಹೋದ ಸ್ಥಳಗಳನ್ನು ಪರಿಶೀಲಿಸಿದ್ದರು. ದುರಸ್ತಿಯಾಗುವ ಲಕ್ಷಣ ಕಂಡುಬಂದಿಲ್ಲ. ಪರಿಹಾರ ಸಿಗುವಲ್ಲಿವರೆಗೆ ಟ್ಯಾಂಕರ್‌ ಮೂಲಕ ನೀರು ಒದಗಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

Advertisement

ಉಡುಪಿ: ಅಜ್ಜರಕಾಡು ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿನ ಹನುಮಾನ್‌ ಕಾಲನಿ, ಕಾನ್ವೆಂಟ್‌ ರೋಡ್‌ ಪರಿಸರದ 10ಕ್ಕೂ ಅಧಿಕ ನಿವಾಸಿಗಳು ಹನಿ ನೀರಿಗೂ ಪರದಾಡುತ್ತಿದ್ದಾರೆ.

ನಗರಸಭೆಗೆ ಇಲ್ಲಿನವರು ನೀರಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಮನೆಗಳಿಗೆ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಸುದರ್ಶನ ರೆಸಿಡೆನ್ಸಿ ಆಸುಪಾಸಿನ ಮನೆಗಳಿಗೆ ನೀರು ಸರಬರಾಜಾಗದೆ ಪರಿಸ್ಥಿತಿ ಬಿಗಡಾಯಿಸಿದೆ. 8 ಮನೆಗಳ ನಳ್ಳಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಂದರೆ ಪುಣ್ಯ ಎಂಬಂತಿದ್ದರೆ ಎರಡು ಮನೆಗಳಿಗೆ ಒಂದು ತೊಟ್ಟೂ ನೀರು ಬರುತ್ತಿಲ್ಲ.

ಕಾರಣ ಏನು?
ಒಂದೇ ಓವರ್‌ ಹೆಡ್‌ ಟ್ಯಾಂಕಿನಿಂದ ಕೊಳವೆ ಪೈಪುಗಳ ಮೂಲಕ ನೀರು ಸರಬರಾಜಾಗುತ್ತಿದೆ. ನೀರು ಹರಿಯುವ ಪೈಪ್‌ಗ್ಳಿಗೆ ಹೆಚ್ಚು ಸಂಪರ್ಕ ಅಳವಡಿ ಸಿದ್ದರಿಂದ ಒತ್ತಡ ಹೆಚ್ಚಾಗಿದೆ. ಹೊಸದಾಗಿ ಪೈಪುಗಳ ಜೋಡಣೆಯಾಗದೆ ಇರುವುದರಿಂದ ಸರಬರಾಜಿನಲ್ಲಿ ನ್ಯೂನ್ಯತೆಗಳಾಗಿವೆ ಎನ್ನುತ್ತಾರೆ ನಗರಸಭೆ ಎಂಜಿನಿಯರ್‌ಗಳು. ಸುದರ್ಶನ್‌ ರೆಸಿಡೆನ್ಸ್‌, ಸೋಲ್‌ ಅಪಾರ್ಟ್‌ಮೆಂಟ್‌ಗಳಿಗೆ ನೀರು ಹರಿಯುತ್ತಿದ್ದರೆ ಅಲ್ಲೇ ಪಕ್ಕದ ಮನೆಗಳಿಗೆ ನೀರಿಲ್ಲ.

ಟ್ಯಾಂಕರ್‌ಗಳಿಗೆ ದುಪ್ಪಟ್ಟು ಹಣ
ಇಲ್ಲಿನ ಕೆಲವು ನಿವಾಸಿಗಳು ನೀರಿಗಾಗಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ 1,500 ರೂ. ವರೆಗೆ ವ್ಯಯಿಸುತ್ತಾರೆ. ಅದು ಒಂದು ವಾರದ ತನಕ ಬಳಕೆಗೆ ಬರುತ್ತದೆ. ಮತ್ತೆ ಟ್ಯಾಂಕರ್‌ ನೀರು ತರಬೇಕು. ಹೀಗೆ ತಿಂಗಳಿಗೆ 6,000 ರೂ. ನಷ್ಟು ನೀರಿಗಾಗಿಯೇ ವ್ಯಯಿಸುತ್ತಾರೆ.

Advertisement

ನೀರು ಸರಬರಾಜು ಸ್ಥಗಿತಗೊಂಡ ಸಂದರ್ಭ ಬಳಕೆದಾರರು ಸಮಸ್ಯೆಯನ್ನು ನಗರ ಸಭೆ ಗಮನಕ್ಕೆ ತಂದಿದ್ದರು. ಶಾಸಕರ ಬಳಿಯೂ ನಿವೇದಿಸಿಕೊಂಡಿದ್ದರು. ಸರಿಪಡಿಸಿ ಕೊಡುವ ಭರವಸೆಯೂ ಅಧಿಕಾರಿಗಳಿಂದ ಸಿಕ್ಕಿತ್ತು. ಆದರೆ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಸಮಸ್ಯೆ ನಿವಾರಣೆಗೆ ಯತ್ನ
ನೀರಿಗಾಗಿ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆ ತಿಳಿದಿದೆ. ಸರಿಪಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನೀರು ಹರಿಯುವ ಪೈಪುಗಳಲ್ಲಿ ನೀರಿನ ಒತ್ತಡ ಹಾಗೂ ಹೆಚ್ಚು ಸಂಪರ್ಕದಿಂದ ಸಮಸ್ಯೆಯಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿವೆ. ಒಂದೆರಡು ದಿನಗಳಲ್ಲಿ ಸಮಸ್ಯೆ ನಿವಾರಣೆಗೊಳ್ಳಲಿದೆ.
-ಅಶ್ವಿ‌ನಿ, ಎಂಜಿನಿಯರ್‌ ನಗರ ಸಭೆ

ನೀರು ಬರುತ್ತಲೇ ಇಲ್ಲ!
ನಮ್ಮ ಮನೆಗೆ ಡಿಸೆಂಬರ್‌ ಅಂತ್ಯದಿಂದ ಸರಿಯಾಗಿ ನೀರು ಬರುತಿಲ್ಲ. ಆರಂಭದಲ್ಲಿ ಸ್ವಲ್ಪ ಬರುತಿತ್ತು. ಕಳೆದ 10 ದಿನಗಳಿಂದ ಹನಿ ನೀರು ಕೂಡ ಬರುತ್ತಿಲ್ಲ. ಹಣ ನೀಡಿ ನೀರು ಖರೀದಿಸುತ್ತಿದ್ದೇವೆ. ಅಧಿಕಾರಿಗಳು ಹಾಗೂ ಶಾಸಕರಿಗೂ ದೂರು ನೀಡಿದ್ದೇವೆ.
-ಅನಿತಾ ಫೆರ್ನಾಂಡಿಸ್‌,ಸ್ಥಳೀಯರು

ಅಧಿಕಾರಿಗಳ ಗಮನಕ್ಕೆ
ನೀರಿನ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳು ಸಮಸ್ಯೆಯನ್ನು ನ‌ನ್ನ ಗಮನಕ್ಕೆ ತಂದಿದ್ದಾರೆ. ದೂರನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಜನಪ್ರತಿನಿಧಿ ನೆಲೆಯಲ್ಲಿ ಮಾಡಿದ್ದೇನೆ. ಶಾಸಕರ ಗಮನಕ್ಕೂ ತಂದಿದ್ದೇನೆ.
-ರಶ್ಮಿ ಭಟ್‌,ವಾರ್ಡ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next