Advertisement

ಪರ್ಯಾಯ ಅಲಂಕಾರಕ್ಕೆ ಆಕರ್ಷಕ ಚಿಪ್ಪಿನ ಗೋಪುರ

12:43 AM Jan 14, 2020 | mahesh |

ಉಡುಪಿ: ಉಡುಪಿಯ ಅದಮಾರು ಪರ್ಯಾಯ ಮಹೋತ್ಸವ ವಿಶಿಷ್ಟತೆಗಳಿಗಾಗಿ ಸುದ್ದಿಯಾಗುತ್ತಿದೆ. ಕೊರಗ ಸಮುದಾಯದ ಯುವ ಸಂಘಟನೆಯೊಂದು ಅದಮಾರು ಪರ್ಯಾಯ ಅಲಂಕಾರಕ್ಕೆ ವಿಶೇಷ ಸೇವೆ ನೀಡುತ್ತಿದ್ದು ಗಮನ ಸೆಳೆದಿದೆ.

Advertisement

ಚಿಪ್ಪಿನ ಸ್ವಾಗತ ಗೋಪುರ
ಈಗಾಗಲೇ 43 ಗೋಪುರಗಳು ನಿರ್ಮಾಣವಾಗಿದ್ದು ಅದರಲ್ಲೂ ತೆಂಕಪೇಟೆಯಲ್ಲಿ ನಿರ್ಮಿಸಿರುವ ತೆಂಗಿನ ಚಿಪ್ಪಿನ ಸ್ವಾಗತ ಗೋಪುರ ಆಕರ್ಷಕವಾಗಿದೆ.

ಕುಂಭಾಸಿ ಯುವ ಸಂಘಟನೆ
ಕುಂಭಾಸಿಯ ಕೊರಗ ಯುವ ಸಂಘಟನೆಯ ಸುದರ್ಶನ್‌ ಕೋಟ, ಶರತ್‌ ಕುಂಭಾಸಿ, ಸುಧೀರ್‌, ಗಣೇಶ್‌ ಅವರ ನೇತೃತ್ವದಲ್ಲಿ ಕಲಾವಿದ ಪುರುಷೊತ್ತಮ ಅಡ್ವೆ ಅವರ ಮಾರ್ಗದರ್ಶನದೊಂದಿಗೆ ಚಿಪ್ಪಿನ ಗೋಪುರ ರೂಪುತಳೆದಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಈಗಾಗಲೇ ಈ ಗೋಪುರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೇವೆ!
ಪರ್ಯಾಯಕ್ಕೆ ವಿಶೇಷ ಸೇವೆ ನೀಡಬೇಕು ಎನ್ನುವ ಉದ್ದೇಶದಿಂದ ಮೊದಲಿಗೆ ತೆಂಗಿನ ಕಾಯಿ ಸಿಪ್ಪೆಯ ಗೋಪುರ ಮಾಡಲು ಯೋಚನೆ ಮಾಡಿದ್ದೇವಾದರೂ ಬಳಿಕ ತೆಂಗಿನ ಚಿಪ್ಪಿನ ಗೋಪುರ ನಿರ್ಮಿಸಲು ನಿರ್ಧರಿಸಿದೆವು. ಇದಕ್ಕೆ ಕಚ್ಚಾವಸ್ತುಗಳನ್ನು ತೆಂಗಿನ ಎಣ್ಣೆ ಮಿಲ್‌ನಿಂದ ಪಡೆಯಲಾಗಿದೆ.

ನಾಲ್ಕು ದಿನಗಳ ಪರಿಶ್ರಮ
ತೆಂಕಪೇಟೆ ಬಳಿ ಸಂಪೂರ್ಣ ತೆಂಗಿನ ಚಿಪ್ಪಿನಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಗೋಪುರವನ್ನು ನಿರ್ಮಿಸಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 5 ವರೆಗೆ ಸತತ ನಾಲ್ಕು ದಿನಗಳ ಕಾಲ ಪರಿಶ್ರಮಪಟ್ಟು ಗೋಪುರ ನಿರ್ಮಿಸಲಾಗಿದೆ. ಈ ಹಿಂದೆಯೂ ಸಂಘಟನೆ ವತಿಯಿಂದ ವಿವಿಧ ಉತ್ಸವಗಳಿಗೆ ಸಾಂಪ್ರದಾಯಿಕ ಗೋಪುರ ನಿರ್ಮಿಸಲಾಗಿದೆ.
-ಗಣೇಶ್‌ ವಿ.ಕೊರಗ, ಕೊರಗ ಯುವ ಸಂಘಟನೆ ಕುಂಭಾಶಿ

Advertisement

3,000 ತೆಂಗಿನ ಚಿಪ್ಪು
ಸುಮಾರು 5 ಮಂದಿ ಯುವಕರು ಹಾಗು 10 ಮಕ್ಕಳು ಸೆರಿದಂತೆ ಒಟ್ಟು 15 ಮಂದಿ ಗೋಪುರ ನಿರ್ಮಾಣದ ಕೆಲಸಕ್ಕೆ ಹಗಲಿರುಳು ದುಡಿದಿದ್ದಾರೆ. ಗೋಪುರಕ್ಕೆ ಮೂರು ಸಾವಿರ ತೆಂಗಿನ ಚಿಪ್ಪು ಬಳಕೆ ಮಾಡಲಾಗಿದೆ. ಎರಡು ಬದಿಯ ಅಡಿಕೆ ಮರದ ಕಂಬಕ್ಕೆ 12 ಬಿದಿರಿನ ದಬ್ಬೆ ಅಳವಡಿಸಿ ತೆಂಗಿನ ಚಿಪ್ಪನ್ನು ಕಲಾತ್ಮಕವಾಗಿ ಪೋಣಿಸಲಾಗಿದೆ. ತೆಂಗಿನ ಚಿಪ್ಪನ್ನು ಒಟ್ಟೆ ಮಾಡಿ ಅದನ್ನು ವಯರ್‌ನಿಂದ ಪೋಣಿಸಿ ವ್ಯವಸ್ಥಿತವಾಗಿ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next