Advertisement

Udupi ಆರೋಪಿ ಪ್ರವೀಣ್‌ ಚೌಗುಲೆಗೆ ಶಸ್ತ್ರಚಿಕಿತ್ಸೆ, ಚಾರ್ಜ್‌ ಪ್ರಕ್ರಿಯೆ ಮುಂದೂಡಿಕೆ

12:58 AM Mar 14, 2024 | Team Udayavani |

ಉಡುಪಿ: ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರವೀಣ್‌ ಚೌಗುಲೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದರಿಂದ ಮಂಗಳವಾರ ನಡೆಯಬೇಕಿದ್ದ ಚಾರ್ಜ್‌ (ಆಪಾದನೆ ವಾಚಿಸುವ) ಪ್ರಕ್ರಿಯೆಯನ್ನು ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಮಾ. 27ಕ್ಕೆ ಮುಂದೂಡಿದೆ.

Advertisement

ಮಾ. 7ರಂದು ನ್ಯಾಯಾಧೀಶ ದಿನೇಶ್‌ ಹೆಗ್ಡೆ, ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಆಪಾದನೆ ವಾಚಿಸಲು ಬೇಕಾದ ಸಾಕ್ಷ್ಯಾಧಾರಗಳಿವೆ ಎಂದು ತೀರ್ಮಾನಿಸಿ ಮಾ. 13ರಂದು ಚಾರ್ಜ್‌ ದಿನ ನಿಗದಿಪಡಿಸಿ ಆದೇಶ ನೀಡಿದ್ದರು. ಆ ದಿನ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶಿಸಿದ್ದರು. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್‌ ಚೌಗುಲೆಯನ್ನು ಕಿಡ್ನಿ ಸ್ಟೋನ್‌ ಸಮಸ್ಯೆಗಾಗಿ ಕೋರ್ಟ್‌ ಆದೇಶದಂತೆ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಾಗದ ಬಗ್ಗೆ ದಾಖಲೆಗಳನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಚಾರ್ಜ್‌ ಪ್ರಕ್ರಿಯೆ ಮಾ. 27ಕ್ಕೆ ನಿಗದಿಪಡಿಸಿದ ನ್ಯಾಯಾಲಯವು ಆ ದಿನ ಆರೋಪಿಯನ್ನು ಕೋರ್ಟ್‌ಗೆಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಈ ಸಂದರ್ಭ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್‌ ಆಳ್ವ ಹಾಜರಿದ್ದರು. ಆರೋಪಿ ಪ್ರವೀಣ್‌ ಚೌಗುಲೆ ಬುಧವಾರ ಎರಡನೇ ಬಾರಿಗೆ ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಮಾ. 27ರಂದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸರಕಾರಿ ಅಭಿಯೋಜಕರಿಗೆ ಅವಕಾಶ ಕಲ್ಪಿಸಿ ನ್ಯಾಯಾಲಯವು ಆದೇಶಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next