Advertisement

ಉಡುಪಿ, ಮಣಿಪಾಲದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಲೆ

01:01 PM Nov 09, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1890 ಶಾಲೆ ಆರಂಭ
ಅಂದಿನ ದ.ಕ. ಜಿಲ್ಲೆಯಲ್ಲಿಯೇ ಪ್ರಸಿದ್ದ ವಿದ್ಯಾಕೇಂದ್ರ

ಉಡುಪಿ: 130 ವರ್ಷಗಳ ಹಿಂದೆ ಉಡುಪಿ ಆಸುಪಾಸಿನ ಪ್ರತಿಷ್ಠಿತ ಏಕೈಕ ವಿದ್ಯಾಸಂಸ್ಥೆ ಬೋರ್ಡ್‌ ಹೈಸ್ಕೂಲ್‌. ಮಣಿಪಾಲ- ಉಡುಪಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅದಮಾರು ಮಠಾಧೀಶ ರಾಗಿದ್ದ ಶ್ರೀ ವಿಬುಧೇಶತೀರ್ಥರು, ಮಣಿಪಾಲದ ಶಿಲ್ಪಿ ಡಾ| ಟಿ.ಎಂ.ಎ.ಪೈ, ಟಿ.ಎ.ಪೈ, ಕೆ.ಕೆ. ಪೈ, ಎಂ.ವಿ.ಕಾಮತ್‌, ಡಾ| ವಿ.ಎಸ್‌.ಆಚಾರ್ಯ, ಸೋಮಶೇಖರ ಭಟ್‌, ಡಯಾನ ಮೋಹನದಾಸ್‌ ಪೈ, ಪ್ರೊ|ಕು.ಶಿ. ಹರಿದಾಸ ಭಟ್‌, ಸಾರಿಗೆ ಉದ್ಯಮಿಗಳಾದ ರಬೀಂದ್ರ ನಾಯಕ್‌, ಮಹಿದಾಸ್‌ ಕುಡ್ವ, ಸತೀಶ್ಚಂದ್ರ ಹೆಗ್ಡೆ, 1962ರಲ್ಲಿ ಮೈಸೂರು ರಾಜ್ಯಕ್ಕೆ ಪವರ್‌ಲಿಫ್ಟಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದ ಸುಧಾಕರ ಶೆಟ್ಟಿ, ಐರೋಡಿ ಸಮೂಹ ಸಂಸ್ಥೆಗಳ ಪೈ ಕುಟುಂಬದ ಅನೇಕ ಸದಸ್ಯರು ಸಹಿತ ಹಲವಾರು ಗಣ್ಯರು ಇಲ್ಲಿನ ಹಳೆ ವಿದ್ಯಾರ್ಥಿಗಳು..

ಬ್ರಿಟಿಷ್‌ ಶೈಲಿಯ ಕಟ್ಟಡ
1890ರಲ್ಲಿ ಈ ವಿದ್ಯಾಸಂಸ್ಥೆಯಲ್ಲಿ 1500ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 38 ಮಂದಿ ಶಿಕ್ಷಕರಿದ್ದರು. ಅಂದಿನ ದ.ಕ. ಜಿಲ್ಲೆಯಲ್ಲಿಯೇ ಪ್ರಸಿದ್ದ ವಿದ್ಯಾಕೇಂದ್ರವಾಗಿತ್ತು. ದೂರದ ಊರುಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಇಲ್ಲಿನ ಕಟ್ಟಡಗಳು ಬ್ರಿಟಿಷ್‌ ಶೈಲಿಯಲ್ಲಿದ್ದು, ತರಗತಿಯ ಕೋಣೆಗಳು ಕಂಬಿ ಕೋಣೆಗಳಂತೆ ಗೋಚರವಾಗುತ್ತವೆ. ವಿಶಾಲವಾದ ಕೋಣೆಗಳು, ಗಾಳಿ, ಬೆಳಕುಗಳನ್ನು ನೀಡುವ ಕಬ್ಬಿಣದ ಕಿಟಕಿಗಳಿವೆ. 1840ರಲ್ಲಿ ತಯಾರಿಸಲಾದ ಮಂಗಳೂರು ಹಂಚಿನಿಂದ ಮೇಲ್ಛಾವಣಿ ರಚಿಸಲಾಗಿದೆ.

ಕುಗ್ಗದ ಉತ್ಸಾಹ
ಪ್ರಸ್ತುತ ಉಡುಪಿ ಆಸುಪಾಸಿನಲ್ಲಿ 15 ಪ್ರೌಢಶಾಲೆ, 6 ಪ.ಪೂ.ಕಾಲೇಜುಗಳು ತೆರೆದಿದ್ದರೂ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳ ಉತ್ಸುಕತೆ ಕಂಡುಬರುತ್ತಿದೆ. ಹೈಸ್ಕೂಲ್‌ ವಿಭಾಗದಲ್ಲಿ 150, ಪ.ಪೂ.ವಿಭಾಗದಲ್ಲಿ 450 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹೈಸ್ಕೂಲ್‌ನಲ್ಲಿ 11 ಮಂದಿ, ಪ.ಪೂ.ಕಾ. ವಿಭಾಗದಲ್ಲಿ 18 ಮಂದಿ ಉಪನ್ಯಾಸಕರು ಇದ್ದಾರೆ. ಅಭಿವೃದ್ಧಿ ಕಾರ್ಯ ಹಳೆ ವಿದ್ಯಾರ್ಥಿಯಾಗಿದ್ದ ಡಾ| ವಿ.ಎಸ್‌.ಆಚಾರ್ಯ ಅವರಿಂದ 2.5 ಕೋ.ರೂ., ಆಸ್ಕರ್‌ ಫೆರ್ನಾಂಡಿಸ್‌ ಅವರಿಂದ 1.48 ಕೋ.ರೂ. ನೆರವು ದೊರಕಿದೆ. ಸುಮಾರು 5 ಕೋ.ರೂ.ವೆಚ್ಚದಲ್ಲಿ ಸುಸಜ್ಜಿತವಾದ 3 ಅಂತಸ್ತಿನ 18 ವಿಶಾಲ ಕೋಣೆಗಳುಳ್ಳ ನೂತನ ಕಟ್ಟಡಗಳು ನಿರ್ಮಾಣವಾಗಿವೆ.

Advertisement

ಹಲವಾರು ಸೌಲಭ್ಯಗಳು
10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್‌ ಕ್ಲಾಸ್‌, ಆನ್‌ಲೈನ್‌ ಮೂಲಕ ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌, ಯಕ್ಷಗಾನ,ಇಂಟರ್ಯಾಕ್ಟ್ ಕ್ಲಬ್‌ಗಳನ್ನು ನಡೆಸಲಾಗುತ್ತಿದೆ. ಸರಕಾರದ ಯೋಜನೆಗಳಾದ ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್‌ಗ‌ಳನ್ನು ನೀಡಲಾಗುತ್ತಿದೆ. ಬಿ.ಆರ್‌.ಶೆಟ್ಟಿ ಫೌಂಡೇಶನ್‌ ವತಿಯಿಂದ ಬಾಲಕ-ಬಾಲಕಿಯರಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣಗೊಂಡಿದೆ. ವಿದ್ಯಾಭಿಮಾನಿಗಳಾದ ಹೊಟೇಲ್‌ ಕಿದಿಯೂರು ಮಾಲಕ ಭುವನೇಂದ್ರ ಕಿದಿಯೂರು ಅವರು ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ 50,000 ರೂ. ನೀಡ‌ುತ್ತಿದ್ದಾರೆ. 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕಗಳನ್ನು ದಾನಿಗಳ ವತಿಯಿಂದ ನೀಡಲಾಗುತ್ತಿದೆ. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಶೇ.100 ಫ‌ಲಿತಾಂಶ ಈ ಶಾಲೆಗೆ ಲಭಿಸುತ್ತಿದೆ.

ನನ್ನ ತಂದೆ ರೋಕಿ ಫೆರ್ನಾಂಡಿಸ್‌ ಇಲ್ಲಿ ಶಿಕ್ಷಕರಾಗಿದ್ದರು. ಅವರ ನಿವೃತ್ತಿಯ ಸಮಯದಲ್ಲಿ ಕುದುರೆಗಾಡಿ ಮಾಡಿಕೊಂಡು ಮಕ್ಕಳೇ ಮನೆಯವರೆಗೆ ಮೆರವಣಿಗೆ ಮಾಡಿದ್ದರು. ಇಲ್ಲಿರುವ “ನೆನಪಿನ ಹಾಲ್‌’ಅನ್ನು ನಮ್ಮ ತಂದೆ ಎಲ್ಲರಿಂದಲೂ 1 ರೂ. ದೇಣಿಗೆ ಪಡೆದುಕೊಂಡು ನಿರ್ಮಿಸಿದ್ದರು.
– ಆಸ್ಕರ್‌ ಫೆರ್ನಾಂಡಿಸ್‌,ರಾಜ್ಯಸಭಾ ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿ

ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ಮಂದಿ ಪ್ರತಿಭಾನ್ವಿತರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರುಮಾಡಿದ್ದಾರೆ. ಉತ್ತಮ ಶಿಕ್ಷಕವೃಂದದವರು ಇಲ್ಲಿದ್ದು ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಖಾಸಗಿ
ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. – ಸುರೇಶ್‌ ಭಟ್‌, ಮುಖ್ಯೋಪಾಧ್ಯಾಯರು

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next