ಉಡುಪಿ: ಉಡುಪಿ ಜಿಲ್ಲೆಯ ಹೆದ್ದಾರಿಗಳಲ್ಲಿ ಗಸ್ತು ನಡೆಸಲು, ತುರ್ತು ಸಂದರ್ಭದಲ್ಲಿ ನೆರವಾಗಲು ಈಗಾಗಲೇ 3 ಹೈವೇ ಪಟ್ರೋಲಿಂಗ್ ವಾಹನಗಳು ಕರ್ತವ್ಯದಲ್ಲಿದ್ದು, ಇದೀಗ ಉಡುಪಿ ನಗರದಲ್ಲಿ ಗಸ್ತು ನಡೆಸಲು ಹೊಸ 3 ಮಾರುತಿ ಎರ್ಟಿಗಾ ಪಟ್ರೋಲಿಂಗ್ ವಾಹನಗಳು ಕರ್ತವ್ಯಕ್ಕೆ ನಿಯೋಜನೆಗೊಂಡಿವೆ.
ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹಸಿರು ನಿಶಾನೆ ತೋರಿಸಿ ಗಸ್ತು ವಾಹನಗಳನ್ನು ಅನಾವರಣ ಮಾಡಿದರು.
ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆಗೆ ಅಗತ್ಯವಾಗಿ ಬೇಕಾಗಿರುವ ಸವಲತ್ತುಗಳನ್ನು ಒದಗಿಸಲು ಗೃಹಮಂತ್ರಿಗಳು, ಅಡಿಶನಲ್ ಡಿಜಿಪಿ ಎ.ಎಂ. ಪ್ರಸಾದ್ ಅವರನ್ನು ಭೇಟಿ ಮಾಡಿ ಕೋರಿಕೊಳ್ಳಲಾಗಿದೆ. ಅದರಂತೆ ಹಂತಹಂತವಾಗಿ ವ್ಯವಸ್ಥೆಗಳು ಉಡುಪಿಗೆ ಬರುತ್ತಿವೆ. ಸೌಕರ್ಯಗಳು ಹೆಚ್ಚಿದಂತೆ ಪೊಲೀಸ್ ಪಡೆಯೂ ಬಲಗೊಳ್ಳುತ್ತದೆ. ಉಡುಪಿಗೆ ಮತ್ತೆ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಪೊಲೀಸ್ ಗಸ್ತು ವಾಹನಗಳನ್ನು ನಿಯೋಜಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.
ಹೈವೇ ಪಟ್ರೋಲಿಂಗ್ ವಾಹನದಲ್ಲಿ ಅತ್ಯಾಧುನಿಕ ಸಿಸಿ ಟಿವಿ ಕೆಮರಾ, ಗಾಯಾಳುಗಳನ್ನು ಒಯ್ಯಲು ಸ್ಟ್ರೆಚರ್ ವ್ಯವಸ್ಥೆ ಇದೆ. ಉಡುಪಿ ನಗರದಲ್ಲಿ ಕರ್ತವ್ಯ ನಿರ್ವಹಿಸಲು ಬಂದಿರುವ ವಾಹನಗಳಲ್ಲಿ ಆ ವ್ಯವಸ್ಥೆಗಳು ಅಳವಡಿಕೆಯಾಗಿಲ್ಲ. ಹೆದ್ದಾರಿ ಗಸ್ತು ವಾಹನದಲ್ಲಿ ಇರುವಂತೆಯೇ ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್ ಮತ್ತು ಇನ್ನೋರ್ವ ಸಿಬಂದಿ ಈ ವಾಹನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆಯಾ ಠಾಣೆಯ ಅಧಿಕಾರಿಗಳು ಕಂಟ್ರೋಲಿಂಗ್ ಮಾಡಲಿದ್ದಾರೆ. ಜಿಲ್ಲಾ ಕೇಂದ್ರದಿಂದ ವಯರ್‌ಲೆಸ್ ಸಂಪರ್ಕ ಹೊಂದಿರುತ್ತದೆ. ಹೊಯ್ಸಳ ವಾಹನದಂತೆ ಈ ವಾಹನವೂ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಗಸ್ತು ನಡೆಸಲಿದೆ ಎಂದು ಜಿಲ್ಲಾ ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರು ತಿಳಿಸಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಹೆಚ್ಚುವರಿ ಎಸ್‌ಪಿ ಎನ್. ವಿಷ್ಣುವರ್ಧನ, ಡಿವೈಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ನವೀನ್‌ಚಂದ್ರ ಜೋಗಿ, ಡಿಎಆರ್ ಇನ್ಸ್‌ಪೆಕ್ಟರ್ ರಾಘವೇಂದ್ರ, ಇತರ ಅಧಿಕಾರಿಗಳು, ಮತ್ತು ಸಿಬಂದಿ ಉಪಸ್ಥಿತರಿದ್ದರು.