Advertisement

Udupi; 252ನೇ ಪರ್ಯಾಯೋತ್ಸವಕ್ಕೆ ಶ್ರೀಕೃಷ್ಣ ಮಠ ಸಜ್ಜು

11:42 PM Jan 13, 2024 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪೂಜಾ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಆರಂಭವಾಗುತ್ತಿದೆ. ನಿಜಾರ್ಥದಲ್ಲಿ ಜಾಗತಿಕ ಪರ್ಯಟನೆ ಮಾಡಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು 4ನೇ ಬಾರಿಯ ಪರ್ಯಾಯ ಪೂಜೆಗೆ ಅಣಿಯಾಗಿದ್ದಾರೆ. 252ನೇ ಪರ್ಯಾಯೋತ್ಸವ ಇದಾಗಿದೆ. 503ನೇ ವರ್ಷಕ್ಕೆ ಈ ಪದ್ಧತಿ ಕಾಲಿಡುತ್ತಿದೆ.

Advertisement

ಶ್ರೀ ಮಧ್ವಾಚಾರ್ಯರು (1238- 1317)
ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿ ಷ್ಠಾಪಿಸಿ ಎರಡೆರಡು ತಿಂಗಳ ಅವಧಿ ಸರತಿ ಪೂಜೆಯ ವ್ಯವಸ್ಥೆ ಕಲ್ಪಿಸಿದ್ದು ಇದು 1522ರ ವರೆಗೆ ನಡೆಯಿತು. ಬಳಿಕ ಇದನ್ನು ದ್ವೈವಾರ್ಷಿಕವಾಗಿ ವಿಸ್ತರಿಸಲಾಯಿತು. ತೀರ್ಥ ಯಾತ್ರೆ, ತಣ್ತೀಪ್ರಸಾರ, ಆಡಳಿತಾತ್ಮಕ ದೃಷ್ಟಿಯಿಂದ ಶ್ರೀವಾದಿರಾಜರು ಈ ನಿರ್ಧಾರವನ್ನು ತೆಗೆದುಕೊಂಡರು. ಇದು ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ.

1522ರಿಂದ 2024ರ ವರೆಗೆ
1522ರಲ್ಲಿ ಆರಂಭಗೊಂಡ ಈ ದ್ವೈವಾರ್ಷಿಕ ಪೂಜಾ ವ್ಯವಸ್ಥೆ ಪ್ರತೀ 16 ವರ್ಷಕ್ಕೊಮ್ಮೆ ಒಂದೊಂದೇ ಚಕ್ರವನ್ನು ಹಾದು 32ನೇ ಚಕ್ರದಲ್ಲಿದೆ. 32ನೇ ಚಕ್ರದಲ್ಲಿ ಮೂರನೆಯದಾದ 251ನೇ ಪರ್ಯಾಯ ಮುಗಿದು 252ನೇ ಪರ್ಯಾಯ ಆರಂಭಗೊಳ್ಳುತ್ತಿದೆ. ಈಗ ಜ. 18ರಂದು ಪರ್ಯಾಯ ವ್ಯವಸ್ಥೆ 503ನೇ ವರ್ಷಕ್ಕೆ ಪದಾರ್ಪಣೆಯಾಗುತ್ತಿದೆ.

ಆಗಮನ-ನಿರ್ಗಮನ ಪೀಠಾಧೀಶರು
ಕೃಷ್ಣಾಪುರ ಮಠದ 34ನೇ ಯತಿ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ನಿರ್ಗಮನ ಪೀಠಾಧೀಶರಾದರೆ, ಪುತ್ತಿಗೆ ಮಠದ 30ನೇ ಯತಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಆಗಮನ ಪೀಠಾಧೀಶರು. ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠದ 31ನೇ ಯತಿಗಳು, ಕಿರಿಯ ಶ್ರೀಪಾದರು.

ಜಾಗತಿಕ ಮೆರುಗು
ಶ್ರೀ ಸುಗುಣೇಂದ್ರತೀರ್ಥರು ಜಾಗತಿಕವಾಗಿ ಸಂಚಾರ ಮಾಡಿದ ಪರಿಣಾಮ ಈ ಪರ್ಯಾಯಕ್ಕೆ ವಿಶೇಷ ಮೆರುಗು ಬಂದಿದೆ. ಇದಕ್ಕೆ ಬೇಕಾದ ಸಕಲ ವ್ಯವಸ್ಥೆಗಳೂ ರೂಪುಗೊಳ್ಳುತ್ತಿದೆ. ಈಗಾಗಲೇ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ವಾರ್ಷಿಕ ಸಪ್ತೋತ್ಸವ ಆರಂಭಗೊಂಡಿದ್ದು ಜ. 14ರಂದು ಮಕರಸಂಕ್ರಾಂತಿ ಉತ್ಸವ ಸಂಪನ್ನಗೊಳ್ಳುತ್ತಿದೆ. ಮಕರಸಂಕ್ರಾಂತಿ ಉತ್ಸವಕ್ಕೆ ಹಿಂದಿನಿಂದಲೂ ಪ್ರಾಶಸ್ತ್ಯವಿದ್ದು ಜನಜಂಗುಳಿ ಕಂಡುಬರುತ್ತದೆ. ಈಗಾಗಲೇ ಭಕ್ತರ ಆಗಮನ ಆರಂಭಗೊಂಡಿದ್ದು, ಪರ್ಯಾಯಕ್ಕೆ ವಿದೇಶಗಳ ಗಣ್ಯರೂ ಆಗಮಿಸುತ್ತಿದ್ದಾರೆ. ಜ. 17ರ ರಾತ್ರಿಯೂ ಊಟದ ವ್ಯವಸ್ಥೆ ಇದ್ದು ಜ. 18ರ ಮಧ್ಯಾಹ್ನ 1 ಲಕ್ಷ ಭಕ್ತರಿಗೆ ಭೋಜನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

Advertisement

ಕಾಪು ದಂಡತೀರ್ಥದಲ್ಲಿ ಜ. 17ರ ಮಧ್ಯರಾತ್ರಿ ಬಳಿಕ ಭಾವೀ ಪರ್ಯಾಯ ಪೀಠಾಧೀಶರು ಸ್ನಾನ ಮಾಡಿ ಉಡುಪಿಗೆ ಸರ್ವಜ್ಞ ಪೀಠಾರೋಹಣ ಮಾಡಲು ಆಗಮಿಸಲಿದ್ದು ಕಾಪುವಿನಿಂದ ಉಡುಪಿಯವರೆಗೆ ವಿದ್ಯುದ್ದೀಪಾಲಂಕಾರ ಮಾಡ ಲಾಗಿದೆ. ಪರ್ಯಾಯ ಮೆರವಣಿಗೆ ಆರಂಭವಾಗುವ ಉಡುಪಿಯ ಜೋಡುಕಟ್ಟೆ ಬಳಿಯಿಂದ ರಥಬೀದಿ ವರೆಗೆ ಮಠದ ಹಿಂದಿನ ಸ್ವಾಮೀಜಿಯವರ ಹೆಸರಿನ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಜ. 18ರ ಪ್ರಾತಃ ಕಾಲ 2.15ಕ್ಕೆ ಮೆರವಣಿಗೆ ಆರಂಭವಾಗಿ 5.50ಕ್ಕೆ ಸರ್ವಜ್ಞಪೀಠಾರೋಹಣ, 6.30ಕ್ಕೆ ಪರ್ಯಾಯ ದರ್ಬಾರ್‌ ಸಭೆ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next