ಧಾರವಾಡ: ನಾರಾಯಣ ಹೆಲ್ತ್ ಹಾಗೂ ಅವಂತಿ ಲರ್ನಿಂಗ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ಉಡಾನ್ ಯೋಜನೆಗೆ ಜಿಲ್ಲೆಯಲ್ಲಿ ರವಿವಾರ ಚಾಲನೆ ನೀಡಿವೆ. ನಗರದ ಜೆಎಸ್ಸೆಸ್ ಕಾಲೇಜಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯರು ಯೋಜನೆಗೆ ಚಾಲನೆ ನೀಡಿದರು. ನಾರಾಯಣ ಹೆಲ್ತ್‌ನ ಸಿಎಸ್‌ಆರ್‌ನ ಪ್ರಧಾನ ವ್ಯವಸ್ಥಾಪಕ ಡಾ| ಅನುಪಮಾ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ದುರ್ಬಲರಾದ ಕುಟುಂಬದ ವಿದ್ಯಾರ್ಥಿಗಳು ವೈದ್ಯ ವೃತ್ತಿಗೆ ಬರಲು ಈ ಯೋಜನೆಯಿಂದ ಅನುಕೂಲವಾಗಲಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಯೋಜನೆ ಉದ್ದೇಶವಾಗಿದೆ. ಇದಕ್ಕಾಗಿ ಧಾರವಾಡದಲ್ಲಿ ಜೆಎಸ್ಸೆಸ್ ಕಾಲೇಜು ಮತ್ತು ಅವಂತಿ ಲರ್ನಿಂಗ್ ಸೆಂಟರ್ ಜೊತೆಗೆ ಕೈಜೋಡಿಸಲಾಗಿದೆ. ಗ್ರಾಮೀಣ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಸೇರ್ಪಡೆ ಮತ್ತು ಸಬಲೀಕರಣ ಕಾರ್ಯ ಕೈಗೊಳ್ಳುತ್ತಿದ್ದು, ಗುಣಮಟ್ಟದ ತರಬೇತಿಗಾಗಿ ಅರ್ಹರ ಆಯ್ಕೆಗಾಗಿ ಕಾಲೇಜುಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಅವಂತಿ ಲರ್ನಿಂಗ್‌ನ ಕರ್ನಾಟಕ ವಲಯದ ಮುಖ್ಯಸ್ಥ ಪ್ರದೀಪ ಶೆಟ್ಟಿ ಮಾತನಾಡಿ, ಅವಂತಿಯ ಧ್ಯೇಯವು ಉಡಾನ್ ಕಾರ್ಯಕ್ರಮದ ಉದ್ದೇಶಗಳಿಗೆ ಸಮಾನವಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಯೋಜನೆಯ ಅವಕಾಶಕ್ಕೆ ಪಾತ್ರರಾಗುವರು ಎಂದು ಹೇಳಿದರು.
ಉಡಾನ್ ಯೋಜನೆಯ ಮೂಲಕ ಕೌಶಲಯುಕ್ತ ವೈದ್ಯರು ಮತ್ತು ವೈದ್ಯಕೀಯ ವೃತ್ತಿ ನಿರತರ ಕೊರತೆ ನೀಗಿಸಲು ನಾವು ಬದ್ಧರಾಗಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಲಿದ್ದು, ಉನ್ನತ ಶಿಕ್ಷಣ ಪಡೆಯಲು ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಕಾರ್ಯಕ್ರಮ ಇದುವರೆಗೂ ಸುಮಾರು 150 ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಅವಂತಿ ಲರ್ನಿಂಗ್ ನಿಂದ 50 ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಕಾರ ನೀಡಲು ಉದ್ದೇಶಿಸಲಾಗಿದೆ ಎಂದರು.
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ| ಷಣ್ಮುಖ ಹಿರೇಮಠ, ಹೃದಯ ರೋಗ ತಜ್ಞ ಡಾ| ವಿವೇಕಾನಂದ ಗಜಪತಿ ಮಾತನಾಡಿದರು. ಡಾ| ಎಸ್.ಕೆ. ಪಾಟೀಲ, ಶಶಿಕುಮಾರ ಪಟ್ಟಣಶೆಟ್ಟಿ, ಡಾ| ಕೀರ್ತಿ ಪಿ.ಎಲ್., ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಮಾರುಕಟ್ಟೆ ಮೇಲ್ವಿಚಾರಕ ಅಜಯ ಹುಲಮನಿ, ವಿನಾಯಕ ಗಂಜಿ, ನಾಗರಾಜ ಬಡಿಗೇರ ಇದ್ದರು.
ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳ ಜೊತೆಗೆ ನಾರಾಯಣ ಹೆಲ್ತ್ ಈಗ ಎಲ್ಲ ಚಿಕಿತ್ಸೆಯ ಅಂತಿಮ ತಾಣವಾಗಿದೆ. ಡಾ| ದೇವಿಶೆಟ್ಟಿ ಅವರು ಬೆಂಗಳೂರಿನಲ್ಲಿ 2000ರಲ್ಲಿ 225 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಇದನ್ನು ಆರಂಭಿಸಿದ್ದು, ಈಗ 23 ನೆಟ್‌ವರ್ಕ್ ಆಸ್ಪತ್ರೆಗಳು, 7 ಹೃದ್ರೋಗ ಕೇಂದ್ರಗಳು ಇವೆ. ಕೇಮನ್ ಉಪಖಂಡದಲ್ಲಿ ಆಸ್ಪತ್ರೆಯನ್ನು ಹೊಂದಿದೆ. ಎಲ್ಲ ಕೇಂದ್ರಗಳಿಂದ ಒಟ್ಟು 6,200 ಹಾಸಿಗೆಗಳಿದ್ದು, ಈಗ ಸಾಮರ್ಥ್ಯ 7,300 ಹಾಸಿಗೆಗಳಿಗೆ ಏರಿದೆ.