Advertisement

5.550 ಜನಸಂಖ್ಯೆ ಇರುವ ಈ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ಮಶಾನವೇ ಇಲ್ಲ !.

07:52 PM Feb 21, 2022 | Team Udayavani |

ಹುಣಸೂರು: ಕಳೆದ 7 ವರ್ಷಗಳಿಂದ ಹೆಸರಿಗಷ್ಟೆ ಪಂಚಾಯ್ತಿಯಾಗಿರುವ ಉದ್ದೂರು ಕಾವಲ್ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡ,ಕರವಸೂಲಿ, ಕಾರ್ಯದರ್ಶಿ, ಸ್ವಚ್ಚತೆಗಾಗಿ ಪೌರಕಾರ್ಮಿಕರಿಂದಲೂ ವಂಚಿತವಾಗಿರುವ  ಈ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಮೂರುವರ್ಷಗಳಿಂದ ಸಿಬ್ಬಂದಿ ನೇಮಕಕ್ಕೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೆ, ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

Advertisement

ಈ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡವು ಇಲ್ಲಾ, ಕಾಯಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಪೌರಕಾರ್ಮಿಕರು ಇಲ್ಲಿಲ್ಲಾ, ಹೀಗೆ ಅನೇಕ ಇಲ್ಲಗಳ(ಕೊರತೆ) ನಡುವೆಯೂ ಎರವಲು ಸಿಬ್ಬಂದಿಗಳಿಂದ ಕೆಲಸ ಮಾಡಿಸುವ  ದೈನೇಸಿ ಪರಿಸ್ಥಿತಿ ಇದೆ.

ಉದ್ದೂರು ಕಾವಲ್ ಗ್ರಾ.ಪಂ.ವ್ಯಾಪ್ತಿಯಲ್ಲಿ 5.550 ಮಂದಿ ನಿವಾಸಿಗಳಿದ್ದಾರೆ. ಬಹುತೇಕರು ಕೃಷಿಕರಾಗಿದ್ದರೆ, ಕೂಲಿ ಕಾರ್ಮಿಕರೂ ಅಷ್ಟೆ ಸಂಖ್ಯೆಯಲ್ಲಿದ್ದಾರೆ.ಗ್ರಾ.ಪಂ.ವ್ಯಾಪ್ತಿಗೆ ಬ್ಯಾಡರಹಳ್ಳಿಕಾಲೋನಿ, ಹೊಸಕೋಟೆ ಕಾಲೋನಿ, ನಂಜಾಪುರ,  ಗೌರಿಪುರ, ಹೊನ್ನಿಕುಪ್ಪೆ ಗ್ರಾಮಗಳು ಸೇರಿದ್ದು. 15 ಮಂದಿ ಸದಸ್ಯರಿರುವ ಇಷ್ಟು ದೊಡ್ಡ ಪಂಚಾಯ್ತಿ ಕಚೇರಿಯಲ್ಲಿ ಪಿಡಿಓ ಕಚೇರಿಯಲ್ಲಿದ್ದರೆ, ವಾರಕ್ಕೆರಡು-ಮೂರು ದಿನ ಬರುವ ಎರವಲು ಸಿಬ್ಬಂದಿಗಳು ಹಳ್ಳಿಗಳತ್ತ ಮುಖಮಾಡಬೇಕಿದೆ, ಪಿಡಿಓ ಹಳ್ಳಿಗೆ ಹೋದಲ್ಲಿ ಕಸ ಗುಡಿಸುವ ಸಿಬ್ಬಂದಿ ಹೊರತಾಗಿ ಸೌಲಭ್ಯಕ್ಕಾಗಿ ಕಚೇರಿ ಮುಂದೆ ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಇದೆ.

ಇದು ಹಳೇ ಪಂಚಾಯ್ತಿಯಾಗಿದ್ದರೂ ಉದ್ದೂರುಕಾವಲ್ ಎಂದರೂ ಪಂಚಾಯ್ತಿ ಕಚೇರಿ ಇರುವುದು ರತ್ನಪುರಿಯ ಆಂಜನೇಯಸ್ವಾಮಿ ಜಾತ್ರಾಮಾಳದ ಸರಕಾರಿ ಸಮುದಾಯ ಭವನದಲ್ಲಿ.  ಇಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಇರುವ ಜಾಗವನ್ನೇ ಕಚೇರಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಈ ಹಿಂದೆ ರತ್ನಪುರಿಯ ಬ್ಯಾಡರಹಳ್ಳಿ ಕಾಲೋನಿಯ ಹಳೇ ಪಂಚಾಯ್ತಿ ಕಟ್ಟಡದಲ್ಲಿ ಇದ್ದ ಕಚೇರಿ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕೆಡವಲಾಗಿದ್ದು, ಅದೂ ಸಹ ಒತ್ತುವರಿಯಾಗಿದ್ದು,  ಕಟ್ಟಡ ನಿರ್ಮಿಸಲು  ಜಾಗಕ್ಕಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ಇದೆ.

ಆಪರೇಟರ್-ಬಿಲ್ ಕಲೆಕ್ಟರ್‌ಗಳೇ ಇಲ್ಲ: ಪಂಚಾಯ್ತಿ ವ್ಯಾಪ್ತಿಗೆ ಬ್ಯಾಡರಹಳ್ಳಿಕಾಲೋನಿ, ಹೊಸಕೋಟೆ ಕಾಲೋನಿ, ನಂಜಾಪುರ,  ಗೌರಿಪುರ, ಹೊನ್ನಿಕುಪ್ಪೆ ಗ್ರಾಮಗಳು ಸೇರಿದ್ದು.  15 ಮಂದಿ ಸದಸ್ಯರಿರುವ ಇಷ್ಟು ದೊಡ್ಡ ಪಂಚಾಯ್ತಿಗೆ ಪಿಡಿಓ ಹೊರತುಪಡಿಸಿದರೆ ಕಾರ್ಯದರ್ಶಿ ಹುದ್ದೆ, ಬಿಲ್‌ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಪೌರಕಾರ್ಮಿಕರು ಇಲ್ಲದೆ ಕಚೇರಿ-ಸಾರ್ವಜನಿಕರ ಕೆಲಸಗಳು ಸಾಂಗವಾಗಿ ನಡೆಯಲು ತೊಡಕಾಗಿದೆ. ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಟಾನವೇ ಪ್ರಮುಖವಾಗಿದೆ. ಇನ್ನಿತರೆ ಯೋಜನೆಗಳ ಜೊತೆಗೆ ಪಂಚಾಯ್ತಿಯ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಕಾರ್ಯದರ್ಶಿ, ಪ್ರಮುಖವಾಗಿ ಕಂಪ್ಯೂಟರ್ ಆಪರೇಟರ್ ಅತ್ಯವಶ್ಯವಾಗಿದ್ದರೂ ಸಿಬ್ಬಂದಿಗಳ ನೇಮಕದಲ್ಲಿ ಜಿಲ್ಲಾಪಂಚಾಯ್ತಿಯೇ ದಿವ್ಯ ನಿರ್ಲಕ್ಷ್ಯವಹಿಸಿರುವುದು. ಜನರಿಗೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಲು ಹಿನ್ನಡೆಯಾಗಿದೆ.

Advertisement

ಎಲ್ಲರೂ ನಿಯೋಜನೆ ಸಿಬ್ಬಂದಿಗಳೆ ?: ಇಲ್ಲಿದ್ದ ಬಿಲ್‌ಕಲೆಕ್ಟರ್ ಪದೋನ್ನತಿ ಪಡೆದು ಬೇರೆಡೆಗೆ ವರ್ಗಾವಣೆಗೊಂಡರೆ, ಗ್ರಾಮಪಂಚಾಯ್ತಿಯ ಪುನರ್‌ವಿಂಗಡಣೆ ವೇಳೆ ಹೊಸ ಪಂಚಾಯ್ತಿಯಾದ ಉದ್ದೂರು ಗ್ರಾ.ಪಂ.ನಲ್ಲೇ ಕಂಪ್ಯೂಟರ್ ಆಪರೇಟರ್ ಉಳಿದುಕೊಂಡರೆ, ಹೀಗಾಗಿ ಉದ್ದೂರುಕಾವಲ್ ಗ್ರಾ.ಪಂ.ಗೆ ಕಳೆದ ಎಂಟು ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಇಲ್ಲದೆ ನೀರುಗಂಟಿಯನ್ನೇ ತಾತ್ಕಾಲಿಕವಾಗಿ ಕಂಪ್ಯೂಟರ್ ಆಪರೇಟರ್ ಆಗಿದ್ದರೂ ಸಮರ್ಪಕ ಕಾರ್ಯ ನಿರ್ವಹಣೆಗೆ  ಹಾಗೂ  ನೀರು ಗಂಟಿ ಕಾರ್ಯಕ್ಕೂ ಅಡಚಣೆಯಾಗಿದೆ.

ಪೌರಕಾರ್ಮಿಕರ ಕೊರತೆ, ಶುಚಿತ್ವಕ್ಕೂ ತತ್ವಾರ: ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕ ಮಹಿಳೆ ನಂಜಮ್ಮರ ನಿಧನದ ಹಿನ್ನೆಲೆಯಲ್ಲಿ ಆಕೆಯ ಪುತ್ರ ರಂಗರಾಜುರನ್ನು  ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಯಿತಾದರೂ ನನ್ನನ್ನು ಕಾಯಂ ನೌಕರನನ್ನಾಗಿ ಮಾಡಿದಲ್ಲಿ ಮಾತ್ರ ಕೆಲಸ ಮಾಡುವುದಾಗಿ ಪಟ್ಟು ಹಿಡಿದಿದ್ದು, ಹೀಗಾಗಿ ಗ್ರಾಮಗಳಿರಲಿ  ತಾತ್ಕಾಲಿಕ ಕಚೇರಿ ಸುತ್ತಮುತ್ತಲೂ ಶಚಿತ್ವದ ಕೊರತೆ ಎದ್ದು ಕಾಣುತ್ತಿದೆ.

ಹೆಣ ಹೂಳಲೂ ಸ್ಥಳವಿಲ್ಲ: ಈ ಪಂಚಾಯ್ತಿ ವ್ಯಾಪ್ತಿಯ ಬ್ಯಾಡರಹಳ್ಳಿ ಕಾಲೋನಿ ಹೊರತುಪಡಿಸಿದರೆ, ಉಳಿದ ನಂಜಾಪುರ, ಗೌರಿಪುರ, ಹೊನ್ನಿಕುಪ್ಪೆ, ಹೊಸಕೋಟೆ ಗ್ರಾಮಗಳಲ್ಲಿ ಸ್ವಾತಂತ್ರ್ಯ ಗಳಿಸಿ ಏಳು ದಶಕ ಸಂದಿದ್ದರೂ ಇಂದಿಗೂ ಸ್ಮಶಾನವಿಲ್ಲದೆ ಶವ ಹೂಳಲು ಪರಿತಪಿಸುವ ಜನರು, ಗ್ರಾಮದ ಜಮೀನು ಮಾಲಿಕರ ಮನವೊಲಿಸಿ ಅಂತ್ಯಸಂಸ್ಕಾರ ನಡೆಸುವ ಪರಿ ವಿಪರ್ಯಾಸವೇ ಸರಿ.

ಗೌರಿಪುರ ಗ್ರಾಮದ ಅರ್ದದಷ್ಟು ಇನ್ನೂ ಕಂದಾಯಗ್ರಾಮವೆಂದು ಘೋಷಣೆಯಾಗದಿರುವುದು ಬೇಸರ ಮೂಡಿಸಿದೆ.-ಹೊನ್ನಿಕುಪ್ಪೆ ಚಂದ್ರಶೇಖರ್

ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ಕಾರ್ಯದರ್ಶಿ ಹುದ್ದೆ ಕಾಲಿ ಇರುವ ಬಗ್ಗೆ ತಾ.ಪಂ, ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಸಿಗುವ ವರೆಗೆ ಇರುವ ಸಿಬ್ಬಂದಿಗಳೇ ಕೆಲಸ ಹಂಚಿಕೊಂ ನಿರ್ವಹಿಸುತ್ತಿದ್ದೇವೆ. ಶೇ.70ರಷ್ಟುಕಂದಾಯ ಸಂಗ್ರಹ ಮಾಡಲಾಗಿದೆ. ೭೦ ಲಕ್ಷದಷ್ಟು ನರೇಗಾ ಯೋಜನೆ ಅನುಷ್ಟಾನ ಮಾಡಲಾಗಿದೆ.  ತಾ.ಪಂ. ಇ.ಓ.ರವರ ಸೂಚನೆಯಂತೆ ವಾರಕ್ಕೆರಡು ದಿನ ಬೇರೆ ಗ್ರಾ.ಪಂ.ಗಳಿಂದ ಕಂಪ್ಯೂಟರ್ ಆಪರೇಟರ್, ಕಾರ್ಯದರ್ಶಿಗಳು ಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ಹೊಸ ಕಟ್ಟಡಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.-ಗಿರೀಶ್,ಪಿಡಿಓ.

ನಮ್ಮ ಪಂಚಾಯ್ತಿಯಲ್ಲಿ ಪ್ರಮುಖ ಹುದ್ದೆಗಳ ಕೊರತೆಯಿಂದ ಸಮರ್ಪಕ ಆಡಳಿತ ವ್ಯವಸ್ಥೆಗೆ ತೊಡಕಾಗಿದೆ. ಕಳೆದ ಆಡಳಿತದ ಅವಧಿಯಲ್ಲೂ ಗ್ರಾ.ಪಂ.ಸದಸ್ಯನಾಗಿದ್ದೆ, ಆವೇಳೆಯಲ್ಲೇ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಜಿ.ಪಂ.ಗೆ ಮನವಿ ಮಾಡಿದ್ದರೂ  ಈವರೆಗೂ ಮಂಜೂರಾತಿ ನೀಡಿಲ್ಲ, ಇರುವ ಪಿಡಿಓ ರವರ ಪರಿಶ್ರಮದಿಂದಾಗಿ ಶೇ.70 ರಷ್ಟು ಕಂದಾಯ ವಸೂಲಾಗಿದೆ. ಇನ್ನಾದರೂ ಸ್ವಂತ ಕಟ್ಟಡ, ಸಿಬ್ಬಂದಿ ನೇಮಕಕ್ಕೆ ಜಿ.ಪಂ.ಕ್ರಮವಹಿಸಲಿ. – ನಂದೀಶ್,ಅಧ್ಯಕ್ಷ, ಉದ್ದೂರು ಕಾವಲ್ ಗ್ರಾ.ಪಂ.

ಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ ಇನ್ನು  ಕಾರ್ಯದರ್ಶಿ, ಬಿಲ್‌ಕಲೆಕ್ಟರ್, ಕಂಪ್ಯೂಟರ್‌ ಆಪರೇಟರ್, ಪೌರಕಾರ್ಮಿಕರಿಲ್ಲದೆ ಕಚೇರಿ ಸುತ್ತಮುತ್ತಲಿನ ಸ್ವಚ್ಚತೆ, ಗ್ರಾ.ಪಂ.ಆಡಳಿತ ನಿರ್ವಹಣೆ ಅತಂತ್ರವಾಗಿದೆ. ಜನರಿಗೆ ಸೌಲಭ್ಯ ತಲುಪುವುದಾದರೂ ಹೇಳಿ, ಎರಡು ಸಾವಿರದಷ್ಟು ಜನಸಂಖ್ಯೆ ಇರುವ ಗೌರಿಪುರ, ಸಾವಿರದಷ್ಟು ಜನಸಂಖ್ಯೆ ಇರುವ ಹೊನ್ನಿಕುಪ್ಪೆ ಗ್ರಾಮದಲ್ಲೇ ಶವ ಸಂಸ್ಕಾರಕ್ಕೂ ಅವರಿವರ ಜಮೀನಿಗಾಗಿ ಬಿಕ್ಷೆ ಬೇಡಬೇಕಿದೆ. ಸ್ಮಶಾನಕ್ಕೆ ನಿವೃಶನ ಮಂಜೂರು ಮಾಡಿಸಲು, ಸ್ವಂತ ಕಟ್ಟಡ ನಿರ್ಮಿಸಲು, ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಶಾಸಕ ಮಂಜುನಾಥರು ಕ್ರಮವಹಿಸಬೇಕಿದ – ಮನುಕುಮಾರ್,ಗ್ರಾ.ಪಂ.ಸದಸ್ಯ

ಉದ್ದೂರುಕಾವಲ್ ಗ್ರಾ.ಪಂ.ಗೆ ಶಾಸಕರೇ ಮುಂದೆ ನಿಂತು  ಹೊಸಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿದ್ದು, ಶೀಘ್ರ ಸ್ವಂತ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು.  ಕಾರ್ಯದರ್ಶಿ ಹುದ್ದೆಗೆ ತಾತ್ಕಾಲಿಕವಾಗಿ ಬೇರೆಡೆಯಿಂದ ವಾರಕ್ಕೆರಡು ದಿನ ನಿಯೋಜನೆ, ಅದೇ ರೀತಿ ಕಂಪ್ಯೂಟರ್ ಆಪರೇಟರ್‌ಗೆ ರ‍್ಯಾಯವ್ಯವಸ್ಥೆ ಕಲ್ಪಿಸಲಾಗಿದೆ. ಬಿಲ್‌ಕಲೆಕ್ಟರ್, ಪೌರಕಾರ್ಮಿಕ ಹುದ್ದೆಗೆ ನೇಮಿಸಿಕೊಳ್ಳಲು ಜಿ.ಪಂ.ಗೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಪಂಚಾಯ್ತಿ ಕೆಲಸಕಾರ್ಯಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು.  -ಎಚ್.ಡಿ.ಗಿರೀಶ್, ತಾ.ಪಂ.ಇ.ಓ.ಹುಣಸೂರು. 

-ಸಂಪತ್ ಕುಮಾರ್ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next