ಕೆಲವು ಸಿನಿಮಾಗಳೇ ಹಾಗೆ ಬಿಡುಗಡೆ ನಂತರ ಸುದ್ದಿಯಾದರೆ, ಇನ್ನೂ ಕೆಲವು ಚಿತ್ರಗಳು ಬಿಡುಗಡೆ ಮುನ್ನವೇ ಸುದ್ದಿಯಾಗುತ್ತವೆ. ಅಷ್ಟೇ ಅಲ್ಲ ದೇಶ, ವಿದೇಶಗಳಲ್ಲೂ ಸದ್ದಿಲ್ಲದೆಯೇ ಸುದ್ದಿಯಾಗುತ್ತವೆ. ಈಗಂತೂ ಹೊಸಬರ ಚಿತ್ರಗಳೇ ಅಂಥದ್ದೊಂದು ಸುದ್ದಿಗೆ ಕಾರಣವಾಗುತ್ತಿವೆ ಅನ್ನೋದು ವಿಶೇಷ. ಅಂದಹಾಗೆ, ಹೊಸಬರೇ ಸೇರಿ ಮಾಡಿದ “ಉದ್ದಿಶ್ಯ’ “ಅಂತಹ ಸುದ್ದಿಗೆ ಕಾರಣವಾಗಿದೆ.
ಹೌದು, ಈಗಾಗಲೇ ಈ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಬಿಡುಗಡೆಗೆ ಅಣಿಯಾಗಿದೆ. ಆಗಸ್ಟ್ 31 ರಂದು ರಾಜ್ಯಾದ್ಯಂತ ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರಕ್ಕೆ ವಿದೇಶಗಳಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಮೆಚ್ಚುಗೆ ಸಿಕ್ಕು, ಅಲ್ಲಿನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಅಧಿಕೃತ ಆಯ್ಕೆಯಾಗಿದೆ. ಹೇಮಂತ್ ಕೃಷ್ಣಪ್ಪ ನಿರ್ದೇಶಿಸಿ, ನಿರ್ಮಿಸಿ, ನಾಯಕರಾಗಿಯೂ ನಟಿಸಿರುವ ಈ ಚಿತ್ರ ನ್ಯೂಯಾರ್ಕ್‌ನಲ್ಲಿ ನಡೆಯುವ “ಟು ಡಾಲರ್ ಫಿಲ್ಮ್ ಫೆಸ್ಟಿವಲ್’ಗೆ ಅಧಿಕೃತ ಆಯ್ಕೆಗೊಂಡಿದೆ.
ಜಪಾನ್‌ನಲ್ಲಿ ನಡೆಯುವ “ಜಾನರ್ ಸೆಲೆಬ್ರೇಷನ್ ಫಿಲ್ಮ್ ಫೆಸ್ಟಿವಲ್’ನಲ್ಲೂ ಅಧಿಕೃತವಾಗಿ ಆಯ್ಕೆಯಾಗಿದೆ. ಅಷ್ಟೇ ಅಲ್ಲ, “ಟಾಪ್ ಇಂಡಿ ಅವಾರ್ಡ್ಸ್ ಆನ್‌ಲೈನ್ ಫಿಲ್ಮ್ ಫೆಸ್ಟಿವಲ್’ಗೆ ಒರಿಜಿನಲ್ ಐಡಿಯಾ ಹಾಗೂ ಮೋಸ್ಟ್ ಟೆರಿಫೈಯಿಂಗ್ ಕೆಟಗರಿಯಲ್ಲಿ ನಾಮ ನಿರ್ದೇಶನಗೊಂಡಿದೆ. ಇದರೊಂದಿಗೆ ಬಾರ್ಸಿಲೋನ ಪ್ಲಾನೆಟ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಚಿತ್ರಪ್ರದರ್ಶನಕ್ಕೆ ಆಹ್ವಾನ ಸಿಕ್ಕಿದೆ.
ಇಷ್ಟೆಲ್ಲಾ ಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆ ಪಡೆದಿರುವ “ಉದ್ದಿಶ್ಯ’ ಬಗ್ಗೆ ನಿರ್ದೇಶಕ ಕಮ್ ನಾಯಕ ಹೇಮಂತ್ ಅವರಿಗೆ ಸಿಕ್ಕಾಪಟ್ಟೆ ಖುಷಿಯೂ ಇದೆ. ಹೇಮಂತ್ ಕೂಡ ಯುಎಸ್‌ನಲ್ಲಿದ್ದವರು. ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದ ಹೇಮಂತ್, ವಿದೇಶದಲ್ಲೇ ನಟನೆ ಮತ್ತು ನಿರ್ದೇಶನದ ತರಬೇತಿ ಪಡೆದು ಅಲ್ಲಿ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಅಲ್ಲದೆ ಹಾಲಿವುಡ್‌ನ “ಅಪ್ ಇನ್ ದ ಏರ್’, “ಲೋಗನ್’, “ಜಸ್ಟ್ ಗೆಟಿಂಗ್ ಬೈ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೊನೆಗೆ ಇಲ್ಲಿಯೇ ನೆಲೆಸಬೇಕು ಅಂತ ಬಂದ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೆಚ್ಚಾಗಿ, “ಉದ್ದಿಶ್ಯ’ ಚಿತ್ರ ಮಾಡಿದ್ದಾರೆ. ಈ ಚಿತ್ರದ ಕಥೆ ಕೂಡ ಹಾಲಿವುಡ್ ರೈಟರ್ ರೊಬರ್ಟ್ ಗ್ರೀಫಿನ್ ಬರೆದದ್ದು. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿತ್ರ ಮಾಡಿದ್ದಾರೆ ಹೇಮಂತ್. “ಇದೊಂದು ಥ್ರಿಲ್ಲರ್ ಚಿತ್ರ. ಜೊತೆಗೆ ಹಾರರ್ ಟಚ್ ಕೊಡಲಾಗಿದೆ. ಒಂದು ಪತ್ತೆದಾರಿ ಕಥೆಯಲ್ಲಿ ಕೊಲೆಯಾಗುತ್ತೆ. ಅದನ್ನು ನಾಯಕ ಬೆನ್ನತ್ತುತ್ತಾನೆ.
ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ಹೇಮಂತ್ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಈ “ಉದ್ಧಿಶ್ಯ’ ಅಂದರೇನು? ಅಂದುಕೊಂಡಿದ್ದು ಆಗದೇ ಅಡೆತಡೆಯಾದರೆ, ಅದನ್ನು ಮೀರೀ ಸಾಧಿಸುವುದಕ್ಕೇ “ಉದ್ಧಿಶ್ಯ’ ಎನ್ನುತ್ತಾರೆ ಎಂಬ ವಿವರ ಕೊಡುತ್ತಾರೆ ಹೇಮಂತ್. ಚಿತ್ರಕ್ಕೆ ಅರ್ಚನಾ ಗಾಯಕ್‌ವಾಡ್ ನಾಯಕಿ. ಅಕ್ಷತಾ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶೇಡ್ರಾಕ್ ಸಾಲೊಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಫಿಲಿಫೆನ್ಸ್‌ನ ಚೇತನ್ ರಘುರಾಮ್ ಛಾಯಾಗ್ರಹಣವಿದೆ.