ಯಳಂದೂರು: ಯಳಂದೂರು ತಾಲೂಕಾ ದ್ಯಂತ ಶನಿವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಇದರ ನಿಮಿತ್ತ ತಾಲೂಕಿನ ವಿವಿಧ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿರುವ ಉದ್ಭವ ಗಂಗಾಧರೇಶ್ವರ ದೇಗುಲದಲ್ಲಿ ಸೋಲಿಗ ಜನರೂ ಸೇರಿದಂತೆ ಬೆಟ್ಟಕ್ಕೆ ಬಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಪಟ್ಟಣದಲ್ಲಿರುವ ಐತಿಹಾಸಿಕ ಗೌರೇಶ್ವರ, ಪಾರ್ವತಾಂಬೆ ದೇಗುಲಗಳಲ್ಲೂ ವಿಶೇಷ ಪೂಜೆ ನಡೆದವು. ದೇಗುಲದ ಹಿಂಭಾಗ ದಲ್ಲಿರುವ ಪಂಚಲಿಂಗಗಳಿಗೂ ಕೊಳಗ ಧಾರಣೆ ಮಾಡಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಮುಂಭಾಗದ ಲ್ಲಿರುವ ಬಳೇಮಂಟಪವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ವೇಳೆ 5 ಜಾವದಲ್ಲಿ ರುದ್ರಾ ಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಅಭಿಷೇಕಕ್ಕೂ 101 ಎಳನೀರನ್ನು ದೇವರಿಗೆ ಸಮರ್ಪಿಸಲಾಯಿತು.
ದೇವಸ್ಥಾನದಲ್ಲಿ ಹೋಮ ಹವನಗಳನ್ನು ಮಾಡಿ ದೇವರಿಗೆ ಬಿಲ್ವಪತ್ರೆ ಸೇರಿದಂತೆ ವಿವಿದ ಹೂವುಗಳಿಂದ ಅಲಂಕಾರಗಳನ್ನು ಮಾಡಿ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ದೇವರ ದರ್ಶನ ಪಡೆದರು. ಅಲ್ಲದೆ ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯ ನಡೆಯಿತು ಎಂದು ದೇಗುಲದ ಅರ್ಚಕ ಮಹೇಶ್ ಚಂದ್ರಮೌಳಿ ದೀಕ್ಷಿತ್ ತಿಳಿಸಿದರು.
ತಾಲೂಕಿನ ಪ್ರಸಿದ್ಧ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲದಲ್ಲೂ ವಿಶೇಷ ಪೂಜೆಗಳು ನಡೆದವು. ದರ್ಶನಕ್ಕೆ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಅಗರ-ಮಾಂಬಳ್ಳಿ, ಗೌಡಹಳ್ಳಿ, ಮಲಾರಪಾಳ್ಯ, ಗುಂಬಳ್ಳಿ, ಯರಗಂಬಳ್ಳಿ, ಹೊನ್ನೂರು, ಕೆಸ್ತೂರು ಗ್ರಾಮಗಳಲ್ಲೂ ಸಹ ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಸಂತೆಮರಹಳ್ಳಿಯಲ್ಲೂ ಹಬ್ಬದ ಸಂಭ್ರಮ: ಸಂತೆಮರಹಳ್ಳಿ ಗ್ರಾಮವೂ ಸೇರಿದಂತೆ ಇತರೆಡೆ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಗ್ರಾಮದ ಮಹದೇಶ್ವರಸ್ವಾಮಿ ದೇಗುಲ, ಶಂಕರದೇವರ ಬೆಟ್ಟದ ಶಂಕರೇಶ್ವರ ಹಾಗೂ ಸಮೀಪದ ಐತಿಹಾಸಿಕ ಕಂದಹಳ್ಳಿ ಮಹದೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಇದಕ್ಕಾಗಿ ದೇಗುಲಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿಶೇಷ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.