ಉದ್ಯಾವರ, ಸೆ. 27: ಅವೈಜ್ಞಾನಿಕ ಲಾಕ್‌ಡೌನ್‌ನೊಂದಿಗೆ ಕೊರೊನಾ ರೋಗವನ್ನು ಗಂಭೀರವಾಗಿ ಪರಿಗಣಿಸದೆ ವಿವಿಧ ಗಿಮಿಕ್‌ಗಳಿಗೆ ಒತ್ತಾಸೆ ಕೊಟ್ಟಿದ್ದರಿಂದ ಇಂದು ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ದೇಶ ಬರುವಂತಾಯಿತು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಮರಳು ದಂಧೆ, ಅಕ್ರಮ ಮರ ಸಾಗಾಟ ಮತ್ತು ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ರಚನೆಯಂತಹ ಅಕ್ರಮಗಳಲ್ಲಿ ಬಿಜೆಪಿಯ ಮುಖಂಡರು ನಿರತರಾಗಿದ್ದರು ಎಂದ ವರು ಆರೋಪಿಸಿದರು. ಜತೆಗೆ ನೆರೆ ಪರಿಹಾರವನ್ನು ಶೀಘ್ರ ವಿತರಿಸಬೇಕಿದ್ದು, ತಪ್ಪಿದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಕಾರ್ಯ ಕರ್ತರಿಗೆ ಕರೆ ನೀಡಿದರು.
ಸಭೆಯಲ್ಲಿ ಅಗಲಿದ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಪಿಸಿಸಿ ಆರೋಗ್ಯ ಹಸ್ತ ಸ್ವಯಂ ಸೇವಕರಿಗೆ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಕಾಪು ಉತ್ತರ ವಲಯ ಯುವಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಚರಣ್ ವಿಠ್ಠಲ್, ಇಂಟಕ್ ಅಧ್ಯಕ್ಷ ಉಮೇಶ್ ಕಾಂಚನ್, ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ ಉಪಸ್ಥಿತರಿದ್ದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಆಬಿದ್ ಆಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.