Advertisement

ಉದ್ಯಾವರ: ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ

02:00 AM Jul 04, 2019 | Team Udayavani |

ಕಾಪು: ಮಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಮಗುಚಿ ಪರಿಸರದಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾ.ಹೆ. 66ರ ಉದ್ಯಾವರ ಬಲಾಯಿಪಾದೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

Advertisement

ಬೆಳಗಾವಿ ಮೂಲದ ಚಾಲಕ ಅಯಾಜುದ್ದೀನ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

7 ತಾಸು ಸಂಚಾರ ವ್ಯತ್ಯಯ
ಮುಂಜಾನೆ 5.30ರಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಸಂಚಾರವನ್ನು ನಿಷೇಧಿಸಿದ ಪೊಲೀಸರು ಮಧ್ಯಾಹ್ನ 12.30ಕ್ಕೆ ಟ್ಯಾಂಕರ್‌ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಎರಡೂ ಬದಿಯ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸುಮಾರು 7 ತಾಸು ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಗೊಂದಲ ಕಾರಣ
ಟ್ಯಾಂಕರ್‌ ಚಾಲಕ ಮತ್ತು ಮಾಲಕನ ನಡುವಿನ ಮೊಬೈಲ್ ಮಾತುಕತೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಟ್ಯಾಂಕರ್‌ ಚಾಲಕ ಎಟಿಎಂ ಕಾರ್ಡನ್ನು ಮರೆತು ಮಂಗಳೂರಿನಲ್ಲಿ ಬಿಟ್ಟು ಬಂದಿದ್ದು, ಡೀಸೆಲ್ ತುಂಬಿಸಲು ಬಂಕ್‌ಗೆ ಹೋದಾಗ ಕಾರ್ಡ್‌ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಟ್ಯಾಂಕರ್‌ ಮಾಲಕನಿಗೆ ಮಾಹಿತಿ ನೀಡಿದ್ದು ಅವರಿಂದ ಬೈಗುಳ ತಿಂದಿದ್ದನು. ಮರಳಿ ಮಂಗಳೂರಿಗೆ ಹೋಗಲೆಂದು ಬಲಾಯಿಪಾದೆ ಜಂಕ್ಷನ್‌ ಬಳಿ ಹಠಾತ್‌ ಆಗಿ ಟ್ಯಾಂಕರನ್ನು ಬಲಕ್ಕೆ ತಿರುಗಿಸಿದ್ದರಿಂದ ಟ್ಯಾಂಕರ್‌ ಮಗುಚಿ ಬಿತ್ತು ಎನ್ನಲಾಗಿದೆ. ಮಗುಚಿ ಬಿದ್ದಾಗ ಭಾರೀ ಸದ್ದು ಕೇಳಿ ಬಂದಿದ್ದು, ಗ್ಯಾಸ್‌ ಸೋರಿಕೆಯ ಭೀತಿ ಎದುರಾಗಿತ್ತು.

ತುರ್ತು ಕಾರ್ಯಾಚರಣೆ
ಗ್ಯಾಸ್‌ ಟ್ಯಾಂಕರ್‌ ಮಗುಚಿ ಬಿದ್ದು, ಗ್ಯಾಸ್‌ ಸೋರಿಕೆಯ ಭೀತಿ ಎದುರಾದ ಹಿನ್ನೆಲೆಯಲ್ಲಿ ಪೊಲೀಸರು ಅಗ್ನಿಶಾಮಕ ದಳ, ಗ್ಯಾಸ್‌ ಕಂಪೆನಿಯ ತುರ್ತು ಕಾರ್ಯಪಡೆ, ಮೆಸ್ಕಾಂ ಇಲಾಖೆಯನ್ನು ಸ್ಥಳಕ್ಕೆ ಕರೆಸಿಕೊಂಡು ತುರ್ತು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದರು.

Advertisement

ಅಧಿಕಾರಿಗಳ ಭೇಟಿ
ಸ್ಥಳಕ್ಕೆ ಡಿವೈಎಸ್ಪಿ ಜೈಶಂಕರ್‌, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ಮೊದಲಾದವರು ಭೇಟಿ ನೀಡಿದರು. ಉಡುಪಿ ಸಂಚಾರ ಠಾಣೆ ಎಸ್ಸೈ ದೇವರಾಜ್‌ ಮತ್ತು ಸಿಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಪರಿಸರದ ವ್ಯವಹಾರ ಮಳಿಗೆಗಳನ್ನು ಮುಚ್ಚಿಸಿದ್ದು, ಇದರಿಂದ ತಮಗೆ ನಷ್ಟ ಸಂಭವಿಸಿದೆ ಎಂದು ಹೊಟೇಲ್ ಮಾಲಕರೊಬ್ಬರು ಇದೇ ವೇಳೆ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next