Advertisement

ಕೊಲೆಯ ಸುತ್ತ 5 ಅಡಿ 7 ಅಂಗುಲ

10:20 AM Feb 15, 2020 | sudhir |

ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಚಿತ್ರ ತೆರೆಗೆ ಬರುತ್ತಿದೆ.

Advertisement

ಅಂದಹಾಗೆ, ಆ ಚಿತ್ರದ ಹೆಸರು “5 ಅಡಿ 7 ಅಂಗುಲ’. ಇದೇನಿದು ಚಿತ್ರದ ಟೈಟಲ್‌ ಈ ಥರ ಇದೆಯಲ್ಲ ಅಂದರೆ, “ಸಾಮಾನ್ಯವಾಗಿ ಭಾರತೀಯ ಮನುಷ್ಯರ ಎತ್ತರ 5.2 ಅಡಿಯಿಂದ 6.3 ವರೆಗೆ ಇರುತ್ತದೆ. ಅದರಿಂದ ಒಬ್ಬ ಭಾರತೀಯ ವ್ಯಕ್ತಿಯ ಸರಾಸರಿ ಎತ್ತರ ತೆಗೆದುಕೊಂಡಾಗ ಅದು “5 ಅಡಿ 7 ಅಂಗುಲ’ ಆಗುತ್ತದೆ. ಇದು ಸಿನಿಮಾದ ಕಥೆಗೆ ಹೊಂದಾಣಿಕೆಯಾಗುವುದರಿಂದ, ಇದನ್ನೇ ನಮ್ಮ ಸಿನಿಮಾದ ಟೈಟಲ್‌ ಆಗಿ ಇಟ್ಟುಕೊಂಡಿದ್ದೇವೆ’ ಎಂದು ಸಮರ್ಥನೆಯ ಉತ್ತರ ಕೊಡುತ್ತದೆ ಚಿತ್ರತಂಡ.

ಇನ್ನು ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಒಬ್ಬ ಚೆಲ್ಲಾಟ ಮಾಡುವ ಯುವ ಉದ್ಯಮಿಯನ್ನು ಒಳಗೊಂಡ ಕೊಲೆ ರಹಸ್ಯ ಇದರಲ್ಲಿದೆ. ಮುಂದೆ ಈ ಕೊಲೆ ರಹಸ್ಯ ದೊಡ್ಡ ತಿರುವುಗಳನ್ನು ಪಡೆದು ನಂಬಲಾಗದ ಘಟನೆಗೆ ಸಾಕ್ಷಿಯಾಗುತ್ತದೆ. ಕೆಲವರು ಇದರಲ್ಲಿ ಸಿಲುಕಿಕೊಂಡು, ಪೋಲೀಸರಿಗೆ ಅಪರಾಧಿಯನ್ನು ಹುಡುಕುವ ಸಂಕಷ್ಟ ಎದುರಾಗುತ್ತದೆ.

ಕೊನೆಗೆ ನಿಜವಾದ ಅಪರಾಧಿಗಳು ಪತ್ತೆಯಾಗುತ್ತಾರಾ? ಇಲ್ಲವಾ ಎನ್ನುವುದೇ ಸಿನಿಮಾದ ಕ್ಲೈಮ್ಯಾಕ್ಸ್‌. ಇಡೀ ಸಿನಿಮಾ ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯಲ್ಲಿ ನಡೆಯುತ್ತದೆ. ಇನ್ನೊಂದು ವಿಶೇಷವೆಂದರೆ, ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಗೆಯೊಂದು ಕಾಣಿಸಿಕೊಂಡಿದೆ. ಚಿತ್ರದಲ್ಲಿ ಕುಚೇಷ್ಟೆ, ಕುತಂತ್ರ, ಮತ್ತು ಕುಯುಕ್ತಿ ಬಗ್ಗೆ ಹೇಳಿದ್ದೇವೆ’ ಎಂದು ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ತೆರೆದಿಟ್ಟಿತು ಚಿತ್ರತಂಡ.

ಇನ್ನು ಈ ಚಿತ್ರದಲ್ಲಿ ಹುಡುಗಾಟದ ಉದ್ಯಮಿ­ಯಾಗಿ ರಾಸಿಕ್‌ ಕುಮಾರ್‌ ಕಾಣಿಸಿಕೊಂಡಿ­ದ್ದಾರೆ. ನಾಯಕಿಯ ಪಾತ್ರಕ್ಕೆ ಅದಿತಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಭುವನ್‌ ನಾರಾಯಣ್‌, ಸತ್ಯನಾಥ್‌, ಪ್ರಣವ ಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ, ಮಾ. ಮಹೇಂದ್ರ ಪ್ರಸಾದ್‌, ಕೃಷ್ಣಮೂರ್ತಿ ವಿ, ನರೇಂದ್ರ, ವಿನಯ್‌ ಕುಮಾರ್‌ ಮುಂತಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲ್‌, ಸುಂಟಿಕೊಪ್ಪ ಮತ್ತು ಮಡಿಕೇರಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ಬಿಯಾನ್‌ ಡ್ರೀಮ್ಸ್‌ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “5 ಅಡಿ 7 ಅಂಗುಲ’ ಚಿತ್ರಕ್ಕೆ ನಿತ್ಯಾನಂದ ಪ್ರಭು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ವಿ.ವಿ.ಗೋಪಾಲ್‌ ಮತ್ತು ಕಾರ್ತಿಕ್‌ ಗುಬ್ಬಿ ಸಾಹಿತ್ಯದ ಚಿತ್ರದ ಮೂರು ಹಾಡುಗಳಿಗೆ ರಘು ಠಾಣೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್‌.ಕೆಂಪರಾಜು ಸಂಕಲನವಿದೆ. ಈಗಾಗಲೇ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣಪತ್ರ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಸದ್ಯ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next