ಬದುಕಲ್ಲಿ ನೀ ನನಗೆ ಸಿಕ್ಕರೂ, ಸಿಗದಿದ್ದರೂ ನಿನ್ನನ್ನು ಈ ಹೃದಯ ಎಂದೆಂದಿಗೂ ಮರೆಯುವುದಿಲ್ಲ. ಎಲ್ಲೇ ಇದ್ದರೂ ನೀನು ಸುಖವಾಗಿರು.
ಟೆಲಿಫೋನ್ ಗೆಳೆಯ,
ಎಷ್ಟು ಚೆನ್ನಾಗಿತ್ತು ಅಲ್ವಾ, ಕಳೆದು ಹೋದ ಆ ದಿನಗಳು? ಒಬ್ಬರಿಗೊಬ್ಬರ ಪರಿಚಯವೇ ಇಲ್ಲದಿದ್ದರೂ ಕೂಡ ದಿನವಿಡೀ ಸಂದೇಶಗಳು ರವಾನೆಯಾಗುತ್ತಿದ್ದವು. ಹಸಿವು, ನಿದ್ದೆಯ ಪರಿವೆ ನನಗಂತೂ ಇರುತ್ತಿರಲಿಲ್ಲ. ಪ್ರೀತಿಗೆ ಸಾರ್ಥಕತೆ ಸಿಗುವುದು ಮದುವೆ ಎಂಬ ಬಂಧನದಲ್ಲಿ ಅಂತಾರೆ ಹಿರಿಯರು. ಆದರೆ, ಪ್ರೀತಿಯ ಅಮಲಿನಲ್ಲಿ ತೇಲಿ ಹೋಗಿದ್ದ ನನ್ನ ಹೃದಯಕ್ಕೆ, ನನ್ನ ಪ್ರೀತಿಗೆ ಮದುವೆ ಎಂಬ ಸಾರ್ಥಕತೆ ಸಿಗುವುದು ಸಾಧ್ಯವಿಲ್ಲ ಎಂಬುದರ ಅರಿವೇ ಇರಲಿಲ್ಲ.
ಅದು ಅರಿವಾದ ನಂತರ, ನಿನ್ನಿಂದ ಸ್ವಲ್ಪ ಸ್ವಲ್ಪವೇ ದೂರಾಗಲು ಪ್ರಯತ್ನಿಸತೊಡಗಿದೆ. ಆದರೆ, ಅದಾಗಲೇ ನನ್ನ ಹೃದಯ ನಿನ್ನನ್ನು ಮರೆತು ಬಾಳಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಕ್ಕೆ ಬಂದು ತಲುಪಿತ್ತು. ಹಾಗೆಂದು ನಿನ್ನನ್ನು ಮದುವೆಯಾಗುವ ಧೈರ್ಯವೂ ನನ್ನಲ್ಲಿ ಇಲ್ಲ. ಜಾತಿ-ಧರ್ಮಗಳ ಸಂಕೋಲೆಯಲ್ಲಿ ನನ್ನ ಪ್ರೀತಿ ಬಂಧಿಯಾಗಿದೆ. ಜಾತಿ-ಧರ್ಮದ ಕುರುಡುತನದಲ್ಲಿ ಬದುಕುತ್ತಿರುವ ಈ ಜನರ ನಡುವೆ ನನ್ನ ಪ್ರೀತಿಗೆ ಬೆಲೆ ಸಿಗುತ್ತದೆ ಎಂಬ ನಂಬಿಕೆಯೂ ನನ್ನಲ್ಲಿ ಇಲ್ಲ.
ಇದನ್ನೆಲ್ಲಾ ನಿನಗೆ ನೇರವಾಗಿ ಹೇಳುವಷ್ಟು ಗಟ್ಟಿ ಮನಸ್ಸೂ ನನ್ನದಲ್ಲ. ಒಂದು ವೇಳೆ ಹೇಳಬೇಕು ಅಂದುಕೊಂಡರೂ, ಆ ಕ್ಷಣ ಕಣ್ಣೀರೊಂದನ್ನು ಬಿಟ್ಟು ಬೇರೆ ಮಾತು ಹೊರಡುತ್ತದೆ ಎಂದು ಹೇಳಲಾರೆ! ನನ್ನ ಭಾವನೆಗಳನ್ನು ನಿಯಂತ್ರಿಸಲು, ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದೇ ಈ ಪತ್ರ ಬರೆಯುತ್ತಿದ್ದೇನೆ.
Advertisement
ಯಾಕೋ ಗೊತ್ತಿಲ್ಲ, ನೀನೆಂದರೆ ನನಗೆ ಎಲ್ಲಿಲ್ಲದ ಸಡಗರ. ಬೇರೆಯವರಿಂದ ಎಷ್ಟು ಸಂದೇಶಗಳು ಬಂದರೂ ಕ್ಯಾರೇ ಅನ್ನದ ಈ ಹೃದಯ, ನಿನ್ನ ಒಂದು ಸಂದೇಶಕ್ಕಾಗಿ ಹಾತೊರೆಯುತ್ತಿರುತ್ತದೆ. ದಿನದ ಎಲ್ಲಾ ಕ್ಷಣಗಳನ್ನು ನಿನ್ನ ಒಂದೇ ಒಂದು ಕರೆಗಾಗಿ ಕಾಯುವುದಕ್ಕೆ ಮೀಸಲಿಡುತ್ತೇನೆ. ನಿನ್ನೊಂದಿಗೆ ಮಾತಾಡುವಾಗಲೆಲ್ಲ ನೀನು ನನ್ನೊಂದಿಗೇ ಇದ್ದೀಯ ಎಂಬ ಭಾವನೆ ಮೂಡುತ್ತದೆ. ನೀನು ಎಂದಿಗೂ ನನ್ನವನೇ ಎನ್ನುವ ಹುಚ್ಚುಕಲ್ಪನೆ ಗರಿಗೆದರುತ್ತದೆ.
Related Articles
Advertisement
ಈ ಪತ್ರ ಬರೆಯುವಾಗಲೂ ಅಷ್ಟೇ, ನನಗೇ ತಿಳಿಯದೆ ನನ್ನ ಕಣ್ಣುಗಳಿಂದ ಜಾರಿದ ಕಣ್ಣೀರ ಹನಿ ಹಾಳೆಯನ್ನು ಒದ್ದೆ ಮಾಡುತ್ತಿದೆ. ನನ್ನ ಪ್ರೀತಿ ನಿಜ ಅನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇನು? ಕೊನೆಯದಾಗಿ ಒಂದೇ ಒಂದು ಮಾತು; ನೀ ನನಗೆ ಸಿಕ್ಕರೂ, ಸಿಗದಿದ್ದರೂ ನಿನ್ನನ್ನು ಈ ಹೃದಯ ಎಂದಿಗೂ ಮರೆಯುವುದಿಲ್ಲ. ಎಲ್ಲೇ ಇದ್ದರೂ ಸುಖವಾಗಿರು. ನಿನಗಾಗಿ ಸಂತೋಷದ ಬಾಗಿಲು ಎಂದೆಂದೂ ತೆರೆದಿರಲಿ.
ಇಂತಿ ನಿನ್ನವಳಲ್ಲದ
•ತ್ರಿಶಾ