Advertisement

ಉದಯವಾಣಿ ವಿಶೇಷ: ಜಲಜೀವನ್‌ ಮಿಷನ್‌ ಅನುಷ್ಠಾನಕ್ಕೆ ಸಮೀಕ್ಷೆ

12:01 AM Mar 13, 2023 | Team Udayavani |

ಮಂಗಳೂರು: ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಜಲಜೀವನ್‌ ಮಿಷನ್‌ ಯೋಜನೆಯ ಉದ್ದೇಶಗಳನ್ನು ಸಾಧಿಸುವಲ್ಲಿ ಜಿಲ್ಲೆ ಮತ್ತು ರಾಜ್ಯಗಳ ಕಾರ್ಯಕ್ಷಮತೆ ನಿರ್ಣಯಿಸಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲ ಜೀವನ್‌ ಸಮೀಕ್ಷೆ (ಜೆಜೆಎಸ್‌) ಕೈಗೊಳ್ಳುತ್ತಿದೆ.
ಉತ್ತಮ ಕಾರ್ಯ ನಿರ್ವಹಣೆಗಾಗಿ ಶ್ರಮಿಸಲು ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ ನೀರಿನ ಸೇವೆ ಸುಧಾರಿಸಲು ರಾಜ್ಯಗಳು/ಜಿಲ್ಲೆಗಳ ಅನುಷ್ಠಾನಾಧಿ ಕಾರಿಗಳನ್ನು ಉತ್ತೇಜಿಸುವುದು ಮುಖ್ಯ ಉದ್ದೇಶ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಕೋರಿಂಗ್‌, ಶ್ರೇಯಾಂಕ ಮತ್ತು ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಯಲಿದೆ.

Advertisement

ಉತ್ತಮ ಅನುಷ್ಠಾನ ಮಾಡಿದ ರಾಜ್ಯ ಮತ್ತು ಜಿಲ್ಲೆಗಳು ತಮ್ಮ ರ್‍ಯಾಂಕಿಂಗ್‌ ಆಧಾರದಲ್ಲಿ ಪ್ರಶಸ್ತಿ ಪಡೆಯಲಿದೆ. ಇವೆಲ್ಲವೂ ಆನ್‌ಲೈನ್‌ ಮೂಲಕ ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರತೀ ದಿನದ ಪ್ರಗತಿಯನ್ನು ಜೆಜೆಎಂ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ ಜಿಲ್ಲೆಗಳ ಪ್ರಯತ್ನ ಮಾಸಿಕ ಮತ್ತು ತ್ತೈಮಾಸಿಕ ಆಧಾರದ ಮೇಲೆ ಗುರುತಿಸಿ ಹಾಗೂ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯ 7ನೇ ಸ್ಥಾನದಲ್ಲಿ ಕರ್ನಾಟಕ 178.83 ಅಂಕ ಗಳೊಂದಿಗೆ ಶೇ. 50-75ರಷ್ಟು ಪ್ರಗತಿ ಸಾಧನೆ ವಿಭಾಗದಲ್ಲಿ ರಾಷ್ಟ್ರದಲ್ಲಿ 7ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 1,01,16,459 ಮನೆಗಳ ಪೈಕಿ 64,28,339 ಮನೆಗಳಿಗೆ ನೀರಿನ ನಳ್ಳಿ ಸಂಕರ್ಪ ನೀಡಲಾಗಿದ್ದು, ಶೇ. 63.43ರಷ್ಟು ಸಾಧನೆ ಮಾಡಿದೆ.

ಏನಿದು ಸಮೀಕ್ಷೆ?
ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಮನೆಮನೆಗೆ ಎಷ್ಟು ನಳ್ಳಿ ಸಂಪರ್ಕ ಕಲ್ಪಿಸಬೇಕಿತ್ತು ಮತ್ತು ಕಲ್ಪಿಸಲಾಗಿದೆ? ಗ್ರಾ.ಪಂ.ಗಳಿಗೆ ನೀಡಲಾದ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಫೀಲ್ಡ್‌ ಟೆಸ್ಟಿಂಗ್‌ ಕಿಟ್ಸ್‌ ಗಳನ್ನು ಬಳಸಿ ಪರೀಕ್ಷೆ ಎಷ್ಟು ಟೆಸ್ಟಿಂಗ್‌ ಮಾಡಲಾಗಿದೆ? ಅದರ ವರದಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆಯೇ?, ಗ್ರಾಮೀಣ ಜನರಲ್ಲಿ, ಮಕ್ಕಳಲ್ಲಿ ನೀರಿನ ಬಳಕೆ ಜಾಗೃತಿ ಮೂಡಿಸಲಾಗಿದೆಯೇ ಈ ಮೊದಲಾದ ವಿಚಾರಗಳ ಸರ್ವೇಯೇ ಒಟ್ಟು ಜಲ ಜೀವನ್‌ ಸಮೀಕ್ಷೆ ಅಥವಾ ಜಲ ಜೀವನ್‌ ಸರ್ವೇಕ್ಷಣ್‌.

ದ.ಕ. ಗರಿಷ್ಠ ಸಾಧಕ
ಜನಜೀವನ್‌ ಮಿಷಲ್‌ ಪೋರ್ಟಲ್‌ನ ಫೆ. 25ರ ವರೆಗಿನ ಅಂಕಿ ಅಂಶದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆ ಯೋಜನೆಯಲ್ಲಿ ಗರಿಷ್ಠ ಸಾಧಕ (ಹೈ ಅಚೀವರ್ಸ್‌) ಜಿಲ್ಲೆಯಾಗಿ ಮೂಡಿ ಬಂದಿದೆ. ರಾಷ್ಟ್ರ ಮಟ್ಟದಲ್ಲಿ 72ನೇ ರ್‍ಯಾಂಕ್‌ನಲ್ಲಿದೆ. 34.92 ಅಂಕಗಳೊಂದಿಗೆ ಹೈ ಅಚೀವರ್‌ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ. ಇದೇ ವೇಳೆ ಉಡುಪಿ ಜಿಲ್ಲೆ ಸಾಧಕ (ಅಚೀವರ್ಸ್‌) ಜಿಲ್ಲೆಯಾಗಿದ್ದು, ಈ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 104ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದ್ದು, 37.51 ಅಂಕ ಪಡೆದಿದೆ.

Advertisement

ಜಲಜೀವನ ಮಿಷನ್‌ಸಮೀಕ್ಷೆ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನ ಕೇಂದ್ರ ಸರಕಾರದ ಗುರಿ. ಆಫ್‌ಲೈನ್‌ ಮೂಲಕವೂ ಸಮೀಕ್ಷೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಗುಣಮಟ್ಟ ಮೇಲ್ವಿಚಾರಣ ತಂಡ ಪ್ರತೀ ಜಿಲ್ಲೆಗೆ ಭೇಟಿ ನೀಡಿ ಯೋಜನೆಯ ಅನುಷ್ಠಾನದ ಗುಣಮಟ್ಟ ಪರೀಕ್ಷಿಸಲಿದೆ. ತಂಡ ನೀಡುವ ಗ್ರೇಡಿಂಗ್‌ ಮೇಲೆ ಪ್ರಶಸ್ತಿ ನಿರ್ಣಯವಾಗುತ್ತದೆ. ರಾಜ್ಯ ಮಟ್ಟದ ತಂಡ ಪ್ರತಿ ತಾಲೂಕಿನಲ್ಲಿ ಗುಣಮಟ್ಟ ಪರೀಕ್ಷಿಸುತ್ತಿದೆ.
– ಜಿ. ನರೇಂದ್ರ ಬಾಬು,ಕಾ.ನಿ. ಎಂಜಿನಿಯರ್‌, ಗ್ರಾ.ಕು.ನೀ. ಮತ್ತು ನೈ.ಇಲಾಖೆ, ದ.ಕ.

ಉಭಯ ಜಿಲ್ಲೆಗಳ ಅಂಕಿ-ಅಂಶ
ದ.ಕ.ದಲ್ಲಿ ಜೆಜೆಎಂ ಯೋಜನೆಗೆ ಚಾಲನೆ ನೀಡುವ ಮುನ್ನ (2019 ಅ.15) 1,15,128 ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ನೀರಿನ ಸಂಪರ್ಕವಿತ್ತು. ಯೋಜನೆ ಆರಂಭವಾದ ಬಳಿಕ ಇಲ್ಲಿಯವರೆಗೆ 1,65,568 ಮನೆಗಳಿಗೆ ಸಂಕರ್ಪ ಕಲ್ಪಿಸಲಾಗಿದ್ದು, ಶೇ. 84.09ರಷ್ಟು ಪೂರ್ಣಗೊಂಡಿದೆ. ಇನ್ನು 2,18,756 ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ ಯೋಜನೆ ಆರಂಭದ ವೇಳೆ 64,795 ಮನೆಗಳು ನಳ್ಳಿ ಸಂಪರ್ಕವಿತ್ತು. ಪ್ರಸ್ತುತ 1,03,792 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಶೇ.68.20 ಪೂರ್ಣಗೊಂಡಿದೆ. 1,82,394 ಮನೆಗಳು ಇನ್ನು ಬಾಕಿ ಎಂದು ಜೆಜೆಎಂ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ.

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next