Advertisement
ತಾಲೂಕಿನ ಭೀಮನಕೋಣೆ, ಕಲ್ಮನೆ, ಎಡಜಿಗಳೇಮನೆ, ಆವಿನಹಳ್ಳಿ, ತುಮರಿ, ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೊಳೆ ಕಾಣಿಸಿಕೊಂಡಿದೆ. ಪೊಟಾಶಿಯಂ ಪಾಸ್ಪೊನೇಟ್, ಯೂರಿಯಾ ರಾಸಾಯನಿಕಗಳ ಮೂಲದಿಂದ ತಯಾರಿಸುವ ವಿವಿಧ ಫಂಗಸ್ ನಿರ್ಬಂಧಕಗಳು 60 ರಿಂದ 90 ದಿನಗಳವರೆಗೆ ಪರಿಣಾಮಕಾರಿ ಎಂದು ಹೇಳಲಾಗಿದ್ದುದು ಕೂಡ ಹುಸಿ ಹೋಗಿದೆ. ತುಮರಿ ಭಾಗದಲ್ಲಿ ಇಂತಹ ಔಷಧ ಬಳಸಿದ 25 ದಿನಗಳಲ್ಲಿಯೇ ಕೊಳೆ ಮಾರಿ ಆಕ್ರಮಿಸಿದೆ.
Related Articles
Advertisement
ಈಗ ನೀಡುತ್ತಿರುವ ಮೈಲುತುತ್ತದ ಗುಣಮಟ್ಟದ ಬಗ್ಗೆ ಅನುಮಾನಗಳಿವೆ. ಇದರಿಂದ ಕೊಳೆ ನಿಯಂತ್ರಣವಾಗಿ ತೋಟಗಳಿಗೆ ಸಿಂಪಡಣೆ ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಕೊಳೆರೋಗ ತರುವ ಶಿಲೀಂಧ್ರಗಳ ನಿಯಂತ್ರಣಕ್ಕೆ ಮಣ್ಣು ಪರೀಕ್ಷೆ ಮಾಡಬೇಕು. ಆದರೆ ಮಳೆಗಾಲದಲ್ಲಿ ಮಣ್ಣು ಪರೀಕ್ಷೆ ಮಾಡುವ ಯಾವ ವಿಧಾನವೂ ತೋಟಗಾರಿಕೆ ಇಲಾಖೆ ಬಳಿ ಇಲ್ಲ. ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ವಿಜ್ಞಾನಿಗಳು, ಇಲಾಖೆ, ವಿಶ್ವವಿದ್ಯಾಲಯ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತೆ ಆಗಿದೆ. ಕಳೆದ ವರ್ಷ ವಿಜ್ಞಾನಿಗಳು ಸಾಗರದ ಹಳ್ಳಿಯೊಂದಕ್ಕೆ ಆಗಮಿಸಿ ತಮ್ಮ ವೈಜ್ಞಾನಿಕ ಮಾದರಿಯಲ್ಲಿ ಬೋರ್ಡೋ ದ್ರಾವಣ ತಯಾರಿ ಹೇಳಿ ಮಾಡಿಸಿದ್ದರು. ಅದನ್ನು ಸಿಂಪಡಿಸಿದ ತೋಟದಲ್ಲಿ ವಾಡಿಕೆಗಿಂತ ಹೆಚ್ಚು ಅಡಕೆ ಉದುರಿ ರೈತರು ತತ್ತರಿಸಿ ಹೋದ ಘಟನೆಯೂ ನಡೆದಿತ್ತು!
ಅಡಕೆಯನ್ನೇ ಅವಲಂಬಿಸಿಕೊಂಡು ಮಲೆನಾಡು ಭಾಗದಲ್ಲಿ ಲಕ್ಷಾಂತರ ಕುಟುಂಬಗಳಿವೆ. ಬಹುತೇಕ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರೇ ಅಡಕೆ ಬೆಳೆಗಾರರಾಗಿರುವುದರಿಂದ ಬೆಳೆ ನಾಶವಾದರೆ ಅವರ ಜೀವನವೂ ಸಂಕಷ್ಟಕ್ಕೆ ಸಿಲುಕುತ್ತಿದೆ. ಈಗಾಗಲೇ ಸಾಗರ ತಾಲೂಕಿನ ತೋಟಗಳಲ್ಲಿ ಶೇ. 5೦ರಷ್ಟು ಅಡಕೆ ಕೊಳೆರೋಗದಿಂದ ನಾಶವಾಗಿದೆ. ಇದರಿಂದ ಬೆಳೆಗಾರರಿಗೆ ಮುಂದಿನ ಬದುಕು ಹೇಗೆ ಎನ್ನುವ ಚಿಂತೆ ಕಾಡಲು ಪ್ರಾರಂಭವಾಗಿದೆ.
ಸರ್ಕಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ನಿಗದಿತ ಅವಧಿಯಲ್ಲಿ ಕೊಳೆರೋಗಕ್ಕೆ ಔಷಧಿ ಕಂಡು ಹಿಡಿಯಲು ಸೂಚನೆ ನೀಡಬೇಕು. ಒಂದೊಮ್ಮೆ ಅವರು ವಿಫಲವಾದಲ್ಲಿ ಅವರನ್ನು ಕೆಲಸದಿಂದ ವಜಾ ಮಾಡುವ ಕಠಿಣ ನಿರ್ಧಾರ ಸರ್ಕಾರ ಕೈಗೊಳ್ಳಬೇಕು. ಬೆಳೆನಾಶವಾಗಿರುವ ಬೆಳೆಗಾರರ ಕುಟುಂಬಕ್ಕೆ ಸರ್ಕಾರ ತಕ್ಷಣ ಅತಿಹೆಚ್ಚು ಪರಿಹಾರ ನೀಡಬೇಕು. ಒಂದೊಮ್ಮೆ ಬೆಳೆನಾಶದಿಂದ ನಷ್ಟಕ್ಕೊಳಗಾಗಿ ಬೆಳೆಗಾರ ಆತ್ಮಹತ್ಯೆ ಹಾದಿ ಹಿಡಿದರೆ ಅದಕ್ಕೆ ಸರ್ಕಾರವೇ ನೇರಹೊಣೆಯಾಗುತ್ತದೆ. ಸರ್ಕಾರ ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಳೆಗಾರರನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡುವ ಜೊತೆಗೆ ತಾಲೂಕಿನಾದ್ಯಂತ ಬೆಳೆಹಾನಿ ಕುರಿತು ಸರ್ವೇ ನಡೆಸಬೇಕು ಎಂದು ವಿವಿಧ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?