ಮಂಗಳೂರು: ಹಾಸ್ಟೆಲ್‌ಗಾಗಿ ಕೆಲವು ದಿನಗಳಿಂದ ಪ್ರಯತ್ನಿಸುತ್ತಿದ್ದ ಕಡಬದ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕರೆ ಮಾಡಿ ಬುಧವಾರದಂದೇ ಹಾಸ್ಟೆಲ್‌ಗೆ ಸೇರ್ಪಡೆಯಾಗಬಹುದು ಎಂದು ತಿಳಿಸಿದ್ದಾರೆ.
ಪಿಯುಸಿ ವಿದ್ಯಾಭ್ಯಾಸಕ್ಕಾಗಿ ನಗರದ ಕಾಲೇಜಿಗೆ ಸೇರ್ಪಡೆಯಾಗಿದ್ದ ಕಡಬದ ವಿದ್ಯಾರ್ಥಿನಿಗೆ ಹಾಸ್ಟೆಲ್ ಸಿಗದ ಕಾರಣ ಅನಾರೋಗ್ಯಕ್ಕೀಡಾದ ಆಕೆಯ ತಾಯಿ ಕೂಡ ದೂರದ ಕಡಬದಿಂದ ಪ್ರತಿದಿನ ವಿದ್ಯಾರ್ಥಿನಿ ಜತೆಗೆ ಮಂಗಳೂರು ನಗರಕ್ಕೆ ಬಂದು ಸರಕಾರಿ ಕಚೇರಿಗಳ ಬಳಿ ಸಮಯ ಕಳೆದು ವಾಪಸಾಗುತ್ತಿದ್ದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದಾಗ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸ್ವೀಕರಿಸಲು ಸರ್ವರ್ ಸಮಸ್ಯೆ ಇರುವುದಾಗಿ ತಿಳಿಸಿದ್ದರು. ಸೋಮವಾರ ಸಂಜೆ ವಿಚಾರಿಸಿದಾಗ ಅರ್ಜಿ ಸ್ವೀಕರಿಸಿ ಹಾಸ್ಟೆಲ್ ಒದಗಿಸುವ ಭರವಸೆ ನೀಡಿದ್ದರು. ಆದಾಗ್ಯೂ ತಾಯಿ ಮತ್ತು ಮಗಳಿಗೆ ಹಾಸ್ಟೆಲ್ ಚಿಂತೆ ಕಾಡುತ್ತಿತ್ತು. ಈ ಬಗ್ಗೆ ಮಂಗಳವಾರ”ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ಮಂಗಳವಾರ ವಿದ್ಯಾರ್ಥಿನಿಯ ತಾಯಿಗೆ ಕರೆ ಮಾಡಿದ ಅಧಿಕಾರಿಗಳು ಹಾಸ್ಟೆಲ್‌ಗೆ ಸೇರ್ಪಡೆಯಾಗುವಂತೆ ಹೇಳಿದ್ದಾರೆ. ಇದರಿಂದ ತಾಯಿ ಮತ್ತು ಮಗಳು ಖುಷಿಪಟ್ಟಿದ್ದಾರೆ. ಶೀಘ್ರ ಹಾಸ್ಟೆಲ್‌ಗೆ ಸೇರುವುದಾಗಿಯೂ ವಿದ್ಯಾರ್ಥಿನಿ ಹರ್ಷ ವ್ಯಕ್ತಪಡಿಸಿದ್ದಾಳೆ. “ಹಾಸ್ಟೆಲ್‌ನವರು ಕರೆ ಮಾಡಿದ್ದಾರೆ. ನಾಳೆಯೇ ಬಂದು ಸೇರಿಕೊಳ್ಳಬಹುದು ಎಂದಿದ್ದಾರೆ’ ಎಂದು ವಿದ್ಯಾರ್ಥಿನಿಯ ತಾಯಿ ಪ್ರತಿಕ್ರಿಯಿಸಿದ್ದಾರೆ.
ಸ್ಪಂದನೆ
ಹಾಸ್ಟೆಲ್ ಸಿಗದೆ ತೊಂದರೆಯಾಗಿರುವ ಕುರಿತಾದ ವರದಿ ಗಮನಿಸಿದ ಹಲವರು ವಿದ್ಯಾರ್ಥಿನಿಯ ನೆರವಿಗೆ ಮುಂದಾಗಿದ್ದಾರೆ. ಹಾಸ್ಟೆಲ್ ಸಿಗುವವರೆಗೆ ತಾಯಿ, ವಿದ್ಯಾರ್ಥಿನಿಗೆ ತಂಗಲು ನಗರದಲ್ಲಿ ವ್ಯವಸ್ಥೆ ಮಾಡಿಸಿಕೊಡುವುದಾಗಿ ಕೆಲವರು ಹೇಳಿದ್ದಾರೆ. ಕೆಲವು ಮಂದಿ ಪಿಜಿ ಮಾಲಕರು ವಿದ್ಯಾರ್ಥಿನಿಗೆ ಹಾಸ್ಟೆಲ್ ಸಿಗುವವರೆಗೆ ಉಚಿತವಾಗಿ ಉಳಿದುಕೊಳ್ಳಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.