ಬೆಂಗಳೂರು: ಕೋ-ಆಪರೇಟೀವ್ ಬ್ಯಾಂಕ್‌ಗಳಿಂದ ಗ್ರಾಹಕರು ಹಾಗೂ ಠೇವಣಿದಾರರಿಗೆ ವಂಚನೆ ತಡೆಗಟ್ಟಲು ಬಿಗಿ ಕಾನೂನು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರ “ಉದಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ 256 ನಗರ ಸಹಕಾರಿ ಬ್ಯಾಂಕ್‌ಗಳಿದ್ದು, ಬಹುತೇಕ ಉತ್ತಮವಾಗಿ ನಡೆಯುತ್ತಿವೆ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ದುರುಪಯೋಗ ಹಿನ್ನೆಲೆಯಲ್ಲಿ ಬ್ಯಾಂಕ್ ಮುಚ್ಚುವ ಹಾಗೂ ಗ್ರಾಹಕರು, ಠೇವಣಿದಾರರಿಗೆ ನಷ್ಟವುಂಟಾದ ಪ್ರಕರಣಗಳು ನಡೆಯುತ್ತಿದ್ದು, ಇದು ಸಹಕಾರ ವಲಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಗ್ರಾಹಕರು ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದರು.
ಸಹಕಾರ ಸಂಘ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಆಡಳಿತ ಮಂಡಳಿ ಕೆಲವು ನಿರ್ಧಾರ ಅಥವಾ ನಿರ್ಣಯ ಕೈಗೊಂಡಿರುತ್ತವೆ. ಬಹುತೇಕ ನಿರ್ದೇಶಕರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಸಭೆಗಳಿಗೆ ಹಾಜರಾಗಿಯೂ ಇರುವುದಿಲ್ಲ. ಆದರೆ, ನಿರ್ಣಯಕ್ಕೆ ಸಹಿ ಹಾಕಿದ್ದಕ್ಕೆ ಅವರೂ ಭಾಗಿ ಎಂಬಂತಾಗಿ ಅವರಿಗೂ ಶಿಕ್ಷೆಯಾಗುವಂತಹ ಉದಾಹರಣೆಗಳಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ
ಸಹಕಾರ ಸಂಘಗಳು, ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ಸರಕಾರದ ನಿಯಂತ್ರಣ ಇರಬೇಕು. ಗ್ರಾಹಕರು ಹಾಗೂ ಠೇವಣಿದಾರರ ಹಿತಾಸಕ್ತಿ ಕಾಪಾಡಬೇಕು. ವಂಚನೆ ಮತ್ತು ದುರುಪಯೋಗಕ್ಕೆ ಅವಕಾಶ ಇರಬಾರದು. ತಪ್ಪು ಮಾಡದವರು ಶಿಕ್ಷೆ ಅನುಭವಿಸುವುದು ತಪ್ಪಬೇಕು. ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಬಿಗಿ ಕಾನೂನು ಮಾಡಬೇಕಾಗಿದೆ. ಇದಕ್ಕಾಗಿ ಸುದೀರ್ಘ ಸಮಾಲೋಚನೆ, ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ನಮ್ಮ ಉದ್ದೇಶ ಸಹಕಾರ ವಲಯದ ಮೇಲೆ ನಂಬಿಕೆ ಹಾಗೂ ವಿಶ್ವಾಸ ಹೆಚ್ಚಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಸುಸ್ತಿದಾರರ ಚುನಾವಣೆ ಸ್ಪರ್ಧೆಗೆ ನಿರ್ಬಂಧ?
ಯಾವುದೇ ಚುನಾವಣೆಗೆ ಸ್ಪರ್ಧಿಸುವವರು ಸಹಕಾರ ಸಂಘ ಅಥವಾ ಕೋ-ಆಪರೇಟೀವ್ ಬ್ಯಾಂಕ್‌ಗಳಲ್ಲಿ ಸುಸ್ತಿದಾರರಾಗಿರಬಾರದು. ಸಾಲ ಮರುಪಾವತಿಯ ವಿವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೀಡಬೇಕು ಎಂಬ ಕಾನೂನು ತರಬೇಕಾಗಿದೆ. ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.