ಮಣಿಪಾಲ: ಉದಯವಾಣಿ- ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) ಸಹಯೋಗದಲ್ಲಿ ಎಂಐಸಿ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ “ನಮ್ಮ ಸಂತೆ’ ಗೆ ಶನಿವಾರ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ಸಂತೆಯಲ್ಲಿ ಕರಕುಶಲ, ಮಣ್ಣಿನ ಉತ್ಪನ್ನಗಳು, ನಾನಾ ಬಗೆಯ ಅಲಂಕಾರಿಕ ವಸ್ತುಗಳು, ಖಾದಿ ದಿರಿಸುಗಳು, ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.
ಚನ್ನಪಟ್ಟಣ ಗೊಂಬೆ, ಇಳಕಲ್ ಸೀರೆ, ಕಾಂಚಿಪುರಂ, ಪೈತಾನಿ, ಮಹೇಶ್ವರಿ, ಪ್ಯೂರ್ ಸಿಲ್ಕ್, ಕ್ರಾಫ್ಟ್, ಗ್ರೀಟಿಂಗ್ಸ್, ಹ್ಯಾಂಡ್ ಮೇಡ್ ಬ್ಯಾಗ್ಸ್, ಹತ್ತಿಯ ಕೈಮಗ್ಗದ ಸೀರೆಗಳಿಗೆ ಬಹು ಬೇಡಿಕೆ ಕಂಡು ಬಂತು.
ವಿದ್ಯಾರ್ಥಿಗಳೇ ತಯಾರಿಸಿದ ಆಕರ್ಷಕ ಗೋಡೆ ಗಡಿಯಾರ, ಬನಿಯನ್, ಕನ್ನಡಕ, ಸ್ವದೇಶಿ ಪರಿಕಲ್ಪನೆಯಲ್ಲಿ ದೇಸಿ ಗೋ ಆಧಾರಿತ ಉತ್ಪನ್ನಗಳ ಮಾರಾಟಕ್ಕೂ ಉತ್ತಮ ಸ್ಪಂದನೆ ದೊರಕಿತು. ರಾಗಿ ಬೋಟಿ, ತೆಂಗಿನ ನಾರಿನ ಕುಂಡಗಳು ಗಮನ ಸೆಳೆದವು.
ಚನ್ನಪಟ್ಟಣದ ಗೊಂಬೆ ಮಾರಾಟ ಮಾಡಲು ಬಂದಿರುವ ರವಿರಾಜ್ ಅವರು ಮಾತನಾಡಿ ವ್ಯಾಪಾರ ಚನ್ನಾಗಿ ನಡೆದಿದೆ. ನಮ್ಮ ಉತ್ಪನ್ನಗಳಲ್ಲಿ ಪರಿಸರ ಸ್ನೇಹಿ ಬಣ್ಣಗಳನ್ನು ಮಾತ್ರ ಬಳಸಿದ್ದೇವೆ. ಎಂದರು. ಅವರು ತಂದಿದ್ದ ಪಾಂಡಿಚೇರಿಯಲ್ಲಿ ತಯಾರಿಸಿದ ನೀರು ತುಂಬಿ ಗಾಳಿ ಊದಿದಾಗ ದಾಗ ಸದ್ದು ಮಾಡುವ ಮಣ್ಣಿನ ಹಕ್ಕಿ ಎಲ್ಲರಿಗೂ ಇಷ್ಟವಾಯಿತು.
ತೆಂಗಿನ ನಾರಿನ ಕುಂಡಗಳನ್ನು ಮಾರಾಟ ಮಾಡಲು ಬಂದಿದ್ದ ಮಂಗಳೂರಿನ ನವೀನ್ ಕುಮಾರ್ ಅವರು, ನಮಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪರಿಸರ ಸ್ನೇಹಿ ಉತ್ಪನ್ನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸಿರುವುದು ಸಂತಸ ತಂದಿದೆ ಎಂದರು.
ಗೋ ಜನನಿ ಸಂಸ್ಥೆಯ ದೇಸಿ ಗೋವಿನ ಗೋಮಯ, ಗೋಮೂತ್ರ, ಹಾಲು ಬಳಸಿ ತಯಾರಿಸಿರುವ ಧೂಪ, ಆರೋಗ್ಯವರ್ಧಕ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಕಂಡು ಬಂದಿತು.
ಶಿವಮೊಗ್ಗದಿಂದ ಬಂದಿದ್ದ ಯೋಗೀಶ್ ಅವರು ಮಾರುತ್ತಿದ್ದ ರಾಗಿ ಬೋಟಿ ಎಲ್ಲರಿಗೂ ಇಷ್ಟವಾಯಿತು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳಿಗಾಗಿ ಖರೀದಿ ಮಾಡಿದ್ದಾರೆ ಎಂದು ಅವರು ಸಂತಸ ಹಂಚಿಕೊಂಡರು.
ನಿವೃತ್ತ ಶಿಕ್ಷಕಿ ಚೇರ್ಕಾಡಿ ಗ್ರಾಮದ ಹುತ್ತಿ ಗೀತಾ ಸಾಮಂತ್ ಅವರು ಬೆಳೆಸಿರುವ ಸಾವಯುವ ಕುಚ್ಚಲಕ್ಕಿಯನ್ನೂ ಕೂಡ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು.