Advertisement

ಸಾಹಿತ್ಯ ಸಮ್ಮೇಳನಗಳ ನಿರ್ಣಯ ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಸರಕಾರಕ್ಕೆ ಬೇಕು

11:40 PM Jan 22, 2021 | Team Udayavani |

ಕೋಟ: ಸೀತಾ ನದಿಯ ತಟದ ಐರೋಡಿ ಗ್ರಾಮದ ಹಂಗಾರಕಟ್ಟೆ 14ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿದೆ. ಕ.ಸಾ.ಪ. ಉಡುಪಿ ಜಿಲ್ಲೆ ಸಾರಥ್ಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ  ಜ.26ರಂದು ಇಲ್ಲಿನ ಚೇತನಾ ಪ್ರೌಢಶಾಲೆಯ ಮೈದಾನದಲ್ಲಿ ಸಮ್ಮೇಳನ ನಡೆಯಲಿದೆ. ಸ್ತ್ರೀ ಸಂವೇದನೆಯ ಅಪೂರ್ವ ಬರಹಗಾರ್ತಿ, ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)ಯವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಉದಯವಾಣಿ ಸಂದರ್ಶಿಸಿದ್ದು, ಇದರ ಆಯ್ದ ಭಾಗ ಇಲ್ಲಿದೆ.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಏನನಿಸುತ್ತದೆ?

ಹಂಗಾರಕಟ್ಟೆ ತಂದೆಯ ಊರು. ತಂದೆ  ಓಡಾಡಿದ ನೆಲ ದಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಶಿಯಾಗಿದೆ.

ಸಮ್ಮೇಳನಾಧ್ಯಕ್ಷತೆ, ಉದ್ಘಾಟನೆ ಎಲ್ಲವೂ ಮಹಿಳೆ ಯರಿಂದ ನೆರವೇರುತ್ತಿರುವ ಬಗ್ಗೆ ಅನಿಸಿಕೆ?

ಪುರುಷರು ಸಮ್ಮೇಳನಾಧ್ಯಕ್ಷತೆ ವಹಿಸುವುದು, ಉದ್ಘಾಟನೆ ಮಾಡುವುದು ವಿಶೇಷವಾಗಿ ಕಾಣುವುದಿಲ್ಲ,  ಆದರೆ ಮಹಿಳೆ ಎಂದಾಗ ಅದೇನೋ ವಿಶೇಷ ಎನ್ನುವ ರೀತಿ ಮಾತನಾಡುತ್ತೀರಿ! ಅಲ್ಲೇ ಇದೆ ಲೋಪ ಹಾಗೂ ಈವರೆಗೂ ಮಹಿಳೆಯರನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ, ಎಂಬುದು ಪ್ರಕಟವಾಗುತ್ತದೆ.  ಮಹಿಳೆಯರಿಗೆ ಅವಕಾಶಗಳು ಸಿಗುವುದು ಸಹಜವಾಗ ಬೇಕು. ಅದು ವಿಶೇಷ ಅನಿಸಿದರೆ ಅಲ್ಲೇನೋ ತಪ್ಪಾಗಿದೆ ಎಂದೇ?

Advertisement

ಹೊಸ ತಲೆಮಾರುಗಳು ಸಾಹಿತ್ಯದಿಂದ ದೂರ ವಾಗುತ್ತಿದೆಯೇ ?

ಹಾಗೇನಿಲ್ಲ. ಪುಸ್ತಕದ ಮೂಲಕ ಸಾಹಿತ್ಯ ಓದುವ ಕಾಲಘಟ್ಟ ದೂರವಾಗುತ್ತಿದೆ ಅಷ್ಟೆ. ಹೊಸ ತಲೆಮಾರುಗಳನ್ನು ಸಾಹಿತ್ಯದ ಕಡೆಗೆ ಸೆಳೆಯಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕಾದ ಅಗತ್ಯ ಇದೆ.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ವಾತಾವರಣ ಹೇಗಿದೆ ?

ಚೆನ್ನಾಗಿಯೇ ಇದೆ. ಆದರೆ ಇಂದಿನ ಸಂಕೀರ್ಣ ಬದುಕು, ಒತ್ತಡ, ಉದ್ಯೋಗ, ಶಿಕ್ಷಣ ರೀತಿ ಮುಂತಾದ ಕಾರಣಗಳಿಂದ ಸಾಹಿತ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದಿರಬಹುದು, ಅಷ್ಟೆ.

ಕುಂದಗನ್ನಡವನ್ನು ಸಾಹಿತ್ಯದಲ್ಲಿ ಪರಿಣಾಮಕಾರಿ ಯಾಗಿ ಬಳಸಿಕೊಳ್ಳಲು ಸಾಧ್ಯವೆ?

ಯಾವುದೇ ಒಂದು ಭಾಷೆಯನ್ನು ಸಾಹಿತ್ಯದಲ್ಲಿ ಬಳಸಿಕೊಳ್ಳುವಾಗ ಅವಶ್ಯ ಇದ್ದಲ್ಲಿ   ಮಾತ್ರ ಬಳಸಿಕೊಳ್ಳಬೇಕು. ನನ್ನ ಅಕ್ಕು ಕಥೆಗೆ ಕುಂದಗನ್ನಡ ಅನಿವಾರ್ಯವಾಗಿತ್ತು. ಆದರೆ ಶಾಕುಂತಲೆಯನ್ನು ಕಾವ್ಯರೂಪದಲ್ಲಿ ಹೊರತು ಬೇರೆ ರೀತಿ ನೋಡಲು ಸಾಧ್ಯವಿಲ್ಲ. ಹೀಗೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ಭಾಷೆ ತನ್ನಿಂತಾನೇ ಆಯ್ಕೆಯಾಗಿ ಬಿಡುತ್ತದೆ.

ನಿಮ್ಮ ಬರಹಗಳಲ್ಲಿ ಸ್ತ್ರೀಪರವಾದ ಕಾಳಜಿ, ಧ್ವನಿ ಎದ್ದು ಕಾಣಲು ಕಾರಣವೇನು?

ಸ್ತ್ರೀಯರ ಬದುಕು, ಸ್ತ್ರೀಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ರೀತಿ, ಪುರುಷ ಪ್ರಧಾನ ವ್ಯವಸ್ಥೆ ನೋಡಿದ್ದರಿಂದ ಇವೆಲ್ಲ ನನ್ನ ಬರಹಗಳಲ್ಲಿ ಪ್ರತಿಫ‌ಲಿಸಿವೆ.

ಸಮ್ಮೇಳನಗಳು ಸಾರ್ಥಕ್ಯವಾಗುವುದು ಯಾವಾಗ?

ಸಾಹಿತ್ಯದ ಮನಸ್ಸುಗಳು ಪರಸ್ಪರ ಬೆರೆತಾಗ, ಒಂದಷ್ಟು ವಿಚಾರ ವಿನಿಮಯವಾದಾಗ, ಗಂಭೀರ ಚರ್ಚೆಯ ಜತೆಗೆ ಒಂದಷ್ಟು ಹರಟೆ, ತಿಳಿಹಾಸ್ಯ ಎಲ್ಲವೂ ಸೇರಿ ಕನ್ನಡದ ವಾತಾವರಣ ನಿರ್ಮಾಣವಾದಾಗ..

ಇಂದು ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಕೇವಲ ಶಿಷ್ಟಾಚಾರವಾಗುತ್ತಿದೆ. ಯಾವುದೇ  ಸರಕಾರಗಳಿಗೆ ಅದನ್ನು ಕಾರ್ಯಗತಗೊಳಿಸುವ ಆಸಕ್ತಿ, ಇಚ್ಛಾಶಕ್ತಿ ಇಲ್ಲ. ನಿರ್ಣಯ ಅನುಷ್ಠಾನಕ್ಕೆ ಒತ್ತಡ ಹೇರಬೇಕಾದ ವ್ಯವಸ್ಥೆಗಳಿಗೆ ಸಂಕಲ್ಪ ಶಕ್ತಿ ಇಲ್ಲ. ಹಲವಾರು ನಿರ್ಣಯ ಕೈಗೊಳ್ಳುವ ಬದಲು ಮೂರ್‍ನಾಲ್ಕನ್ನು ಕೈಗೊಂಡು ಬೆಂಬಿಡದೆ ಸಾಧಿಸಿದರೆ, ಆಗ ಅದಕ್ಕೂ ಅರ್ಥ ಬರುತ್ತದೆ.  –ವೈದೇಹಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ

 

ಸಂದರ್ಶನ: ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next