Advertisement
ಚುನಾವಣೆ ಘೋಷಣೆಗೆ ಮುನ್ನವೇ ಮೊದಲ ಹಂತದ ಪ್ರಚಾರವನ್ನೇ ಮುಗಿಸಿರುವಂತೆ ಕಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮವಿಶ್ವಾಸದ ಮಾತುಗಳು ಇವು.
ತುಮಕೂರು-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧನಾ ಸಂಭ್ರಮ ಯಾತ್ರೆಯನ್ನು ಗುರುವಾರ ಮತ್ತು ಶುಕ್ರವಾರ ಮುಗಿಸಿರುವ ಅವರು ಕೋಲಾರದಲ್ಲಿ ಶನಿವಾರ ಮೊದಲ ಹಂತದ ಯಾತ್ರೆಯ ಕೊನೆಯ ಪ್ರವಾಸವನ್ನು ಮುಗಿಸುವರು. ಈ ಸಂದರ್ಭದಲ್ಲೇ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಾತ್ರೆಯಲ್ಲಿ ಸಿಕ್ಕದ ಜನಸ್ಪಂದನವನ್ನು ವಿವರಿಸಿದರು. ರಾಜ್ಯದ ಜನರ ನಾಡಿ ಮಿಡಿತ ಏನೆಂಬುದು “ಸಾಧನಾ ಸಂಭ್ರಮ’ ಯಾತ್ರೆಯಿಂದ ಗೊತ್ತಾಗಿದೆ. ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ನಿಶ್ಚಿತ. ಸಾಧನಾ ಸಂಭ್ರಮ ಯಾತ್ರೆ ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಿವೆ ಎಂಬ ತೃಪ್ತಿ ನೀಡಿದೆ. ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲ ಎಂಬುದು ಮುಖ್ಯಮಂತ್ರಿಯವರ ವಾದ. ಸಂದರ್ಶನದ ಸಾರಾಂಶ ಹೀಗಿದೆ. ಯಾತ್ರೆ ಹೇಗಿತ್ತು? ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರೇ?
ನಿಜ ಹೇಳಬೇಕೆಂದರೆ ಜನರ ಸ್ಪಂದನೆ ನೋಡಿ ನನಗೇ ಆಶ್ಚರ್ಯವಾಗಿದೆ. ರಾತ್ರಿ 11.30 ಗಂಟೆಯಾದರೂ ಮಹಿಳೆಯರು ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇದು ಸಂತೋಷ ತಂದಿದೆ.
Related Articles
ಖಂಡಿತ. ಯಾಕೆಂದರೆ, ನಮ್ಮ ಕಾರ್ಯಕ್ರಮಗಳು ಜನರನ್ನು ತಲುಪಿವೆ. ಅನ್ನಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ವಿದ್ಯಾಸಿರಿ ಇವೆಲ್ಲವೂ ಬಡವರ್ಗ ತಲುಪಿರುವ ಯೋಜನೆಗಳು. ಹೀಗಾಗಿ, ನಾವು ಕೆಲಸ ಮಾಡಿದ್ದೇವೆ, ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೇ.
Advertisement
ಬಿಜೆಪಿಯವರು ಯಾತ್ರೆ ಬಗ್ಗೆ ಲೇವಡಿ ಮಾಡ್ತಾರಲ್ಲಾ?ಮಾಡಿಕೊಳ್ಳಲಿ ಬಿಡಿ, ಅವರಿಗೆ ಹೇಳಲು ಯಾವುದೇ ವಿಷಯವಿಲ್ಲ. ಯಾಕೆಂದರೆ ಅವರು ಸರ್ಕಾರ ನಡೆಸಿದಾಗ ಯಾವುದೇ ಯೋಜನೆಗಳನ್ನು ಕೊಟ್ಟಿಲ್ಲ. ಜಗಳ, ಭ್ರಷ್ಟಾಚಾರದಲ್ಲೇ ಕಾಲ ಕಳೆದರು. ಹೀಗಾಗಿ, ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದು ಹೇಳ್ತಿದಾರೆ?
ಹೇಳಿಕೊಳ್ಳಲಿ ಬಿಡಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಗೆ ಹೇಳಲೇಬೇಕಲ್ಲವೇ. ಆದರೆ, ಅದಕ್ಕೆ ಏನಾದ್ರೂ ಲಾಜಿಕ್ ಬೇಕಲ್ಲವೇ? ಅವರನ್ನು ಜನ ನಂಬುವುದಿಲ್ಲ. ಯಾತ್ರೆ ಅಹಿಂದ ಮತಬ್ಯಾಂಕ್ ಭದ್ರ ಮಾಡಿಕೊಳ್ಳುವ ಯತ್ನವಾ?
ಅಹಿಂದ ಮಾತ್ರವಲ್ಲ. ನಮ್ಮ ಯೋಜನೆಗಳು ಎಲ್ಲ ವರ್ಗದ ಬಡವರಿಗೆ ತಲುಪಿವೆ. ನಾವೇನು ಮಾಡಿದ್ದೇವೆ ಅದನ್ನು ಹೇಳುತ್ತಿದ್ದೇವೆ. ಜತೆಗೆ ಯೋಜನಾ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದೇವೆ. ಅಹಿಂದ ವರ್ಗವೂ ಕಾಂಗ್ರೆಸ್ ಜತೆಗಿದೆ, ಇತರೆ ಸಮುದಾಯಗಳೂ ಕಾಂಗ್ರೆಸ್ ಜತೆಗೇ ಇವೆ. ಮಹದಾಯಿ ವಿಚಾರ ದೊಡ್ಡ ವಿವಾದವಾಗಿದೆಯಲ್ಲಾ?
ಬಿಜೆಪಿಯವರು ಅದನ್ನು ವಿವಾದವಾಗಿ ಜೀವಂತ ಇಟ್ಟಿದ್ದಾರೆ. ಒಂದೂವರೆ ವರ್ಷದಿಂದ ಗೋವಾ ಮುಖ್ಯಮಂತ್ರಿಗೆ ಹಲವಾರು ಪತ್ರ ಬರೆದರೂ ಉತ್ತರ ಸಿಕ್ಕಿಲ್ಲ, ಇದೀಗ ಯಡಿಯೂರಪ್ಪ ಪತ್ರಕ್ಕೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಆದರೆ, ಆ ರಾಜ್ಯದ ಸಚಿವರು ಇದು ರಾಜಕೀಯ ತಂತ್ರಗಾರಿಕೆ ಅಂತಾರೆ. ನಾವು ಆ ವಿಚಾರದಲ್ಲಿ ರಾಜಕಾರಣ ಮಾಡಲು ಹೋಗುವುದಿಲ್ಲ. ಯಡಿಯೂರಪ್ಪ ಆವರಿಗೆ ಪರ್ರಿಕರ್ ಪತ್ರ ಬರೆದರೂ ನಾನೇ ಮತ್ತೂಮ್ಮೆ ಮಾತುಕತೆಗೆ ಸಿದ್ಧ ಎಂದು ಪತ್ರ ಬರೆದಿದ್ದೇನೆ, ಮುಖ್ಯ ಕಾರ್ಯದರ್ಶಿಯವರೂ ಬರೆದಿದ್ದಾರೆ. ಮಹದಾಯಿ ವಿಚಾರದಲ್ಲಿ ತಾರ್ಕಿಕ ಅಂತ್ಯ ಏನು?
ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಾವೂ ಸದಾ ಸಿದ್ಧ ಹಾಗೂ ಮುಕ್ತ ಮನಸ್ಸಿನಿಂದ ಇದ್ದೇವೆ. ಜತೆಗೆ ನಮಗೆ ನ್ಯಾಯಾಧೀಕರಣದ ಮೇಲೆ ನಂಬಿಕೆಯಿದೆ. 7.5 ಟಿಎಂಸಿ ಕುಡಿಯುವ ನೀರು ನಮಗೆ ದೊರೆಯುವ ವಿಶ್ವಾಸವಿದೆ. ಮಹದಾಯಿ ವಿಚಾರದಲ್ಲಿ ಮಾತುಕತೆ ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಯವರನ್ನು ಕರೆದು ಬೆಂಗಳೂರಿನಲ್ಲೇ ನಡೆಸಬಹುದಲ್ಲವೇ?
ಖಂಡಿತವಾಗಿ ನಾವು ಸಿದ್ಧ. ನಾನು ಈ ಮೊದಲೇ ಆ ಮಾತು ಹೇಳಿದ್ದೇನೆ. ನಿಮ್ಮಲ್ಲೇ ಮಾತುಕತೆಗೆ ಕರೆದರೂ ಬರ್ತೇನೆ, ನೀವೇ ಸ್ಥಳ ನಿಗದಿ ಮಾಡಿದರೂ ಬರ್ತೇನೆ ಎಂದು ಹೇಳಿದ್ದೇನೆ. ಇದರಲ್ಲಿ ನನಗೆ ಯಾವುದೇ ಸ್ವ ಪ್ರತಿಷ್ಠೆ ಇಲ್ಲ. ಲಿಂಗಾಯಿತ ಪ್ರತ್ಯೇಕ ಧರ್ಮ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ?
ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಪ್ರತ್ಯೇಕ ಧರ್ಮ ವಿಚಾರದಲ್ಲಿ ಪರ-ವಿರೋಧ ಸೇರಿ ಐದು ಮನವಿಗಳು ಬಂದಿದ್ದವು. ಅದೆಲ್ಲವನ್ನೂ ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿದ್ದೇವೆ. ಆಯೋಗ ತಜ್ಞರ ಸಮಿತಿ ರಚಿಸಿದೆ. ಸಮಿತಿ ನೀಡುವ ಶಿಫಾರಸು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಾನು ಮತ್ತೂಮ್ಮೆ ಸ್ಪಷ್ಟಪಡಿಸುತ್ತೇನೆ, ಇದು ನಾವು ಸೃಷ್ಟಿಸಿದ್ದಲ್ಲ. ಸಾಧನಾ ಸಂಭ್ರಮ ಯಾತ್ರೆಯಲ್ಲಿ ತವರು ಜಿಲ್ಲೆ ಮೈಸೂರು ಮರೆತರ್ರಾ?
ಹಾಗೇನಿಲ್ಲ. ಎಚ್.ಸಿ.ಮಹದೇವಪ್ಪ ಅವರು ಇದ್ದಾರಲ್ಲಾ ನೋಡಿಕೊಳ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾತ್ರೆ ಹೋಗುವುದಿಲ್ಲವೇ?
ಅಲ್ಲಿ ನಾನು ಚುನಾವಣೆ ಸಂದರ್ಭದಲ್ಲಿ ಎರಡು ಬಾರಿ ಹೋಗಿ ಬರ್ತೇನೆ, ಅಷ್ಟೇ. ಅಲ್ಲಿ ನಮಗೆ ಪ್ರಬಲ ಅಭ್ಯರ್ಥಿ ಇಲ್ಲ, ಹೀಗಾಗಿ ನಾನೇ ಸ್ಪರ್ಧೆಗೆ ತೀರ್ಮಾನಿಸಿದ್ದೇನೆ. ಜತೆಗೆ ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ ಕ್ಷೇತ್ರ ಚಾಮುಂಡೇಶ್ವರಿ, ಆ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಅವರ ಋಣ ತೀರಿಸಬೇಕಿದೆ. ವರುಣಾ ಕ್ಷೇತ್ರದಲ್ಲಿ ಕಥೆ ಏನು? ಯಾರು ಸ್ಪರ್ಧಿಸುತ್ತಾರೆ?
ಆ ಕ್ಷೇತ್ರದಲ್ಲಿ ಪಕ್ಷ ಒಪ್ಪಿಗೆ ಕೊಟ್ಟರೆ ನನ್ನ ಮಗ ಡಾ.ಯತೀಂದ್ರನನ್ನು ಕಣಕ್ಕಿಳಿಸಲಾಗುವುದು. ಆ ಕ್ಷೇತ್ರದ ಜನತೆಯೂ ಕೈ ಬಿಡುವುದಿಲ್ಲ. ಏಕೆಂದರೆ ನನಗೆ ಚಾಮುಂಡೇಶ್ವರಿ-ವರುಣಾ ಎರಡು ಕಣ್ಣುಗಳಿದ್ದಂತೆ. ನಿಜ ಹೇಳಿ, ಕಾಂಗ್ರೆಸ್ ಸರ್ಕಾರದ ಬಗ್ಗೆ ಆಡಳಿತ ವಿರೋಧಿ ಅಲೆ ಇಲ್ಲವಾ?
ಎಲ್ಲಿದೆ ಹೇಳಿ. ನಾವು ಹೋದ ಕಡೆಯಲ್ಲಾ ಜನರ ಸ್ಪಂದನೆ ಉತ್ತಮವಾಗಿದೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಇದೆ. ಎಲ್ಲಾದರೂ ಗಲಾಟೆ ಆಗಿದ್ದು ನೋಡಿದ್ದೀರಾ? ಪಕ್ಷದಲ್ಲೂ ನಾವು ಒಗ್ಗಟ್ಟಾಗಿದ್ದೇವೆ, ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹೀಗಾಗಿ, ಕಾಂಗ್ರೆಸ್ ಬಗ್ಗೆ ಜನರಿಗೆ ನಂಬಿಕೆ ವಿಶ್ವಾಸ ಇದೆ. ಉತ್ತರ ಕರ್ನಾಟಕ, ಹಳೇ ಮೈಸೂರು, ಕರಾವಳಿ ಎಲ್ಲ ಭಾಗಗಳಲ್ಲೂ ಕಾಂಗ್ರೆಸ್ ಅಲೆ ಇದೆ. ಯಾತ್ರೆಯಿಂದ ಆಯಾಸವಾಗಿಲ್ಲವೇ?
ನನ್ನನ್ನು ನೋಡಿದರೆ ಹಾಗೆ ಅನಿಸುತ್ತಾ ? – ಎಸ್.ಲಕ್ಷ್ಮೀನಾರಾಯಣ