Advertisement

‘ಉದಯವಾಣಿ’ ಆಯೋಜನೆ; ಮಾ.2: ಜಿಲ್ಲಾ ಮಟ್ಟದ ಮಳೆ ನೀರು ಕೊಯ್ಲು ಕಾರ್ಯಾಗಾರ

10:52 AM Feb 19, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತ ಕಂಡು ಕೃಷಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಮತ್ತು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಲು ಆಸಕ್ತರಿರುವವರಿಗೆ ಅಗತ್ಯ ಮಾಹಿತಿ ನೀಡಲು “ಉದಯವಾಣಿ’ ವತಿಯಿಂದ ಜಿಲ್ಲಾಡಳಿತ, ಜಿ.ಪಂ. ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಮಾ. 2ರಂದು ಅಪರಾಹ್ನ 3ರಿಂದ 5 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|
ಕೆ.ವಿದ್ಯಾಕುಮಾರಿ ತಿಳಿಸಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ನೀರು ಕೊಯ್ಲು ಸಂಬಂಧ ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಅನುಸರಿಸುವುದರಿಂದ ನದಿಯ ನೀರಿನ ಮಟ್ಟ ಹೆಚ್ಚುವುದರೊಂದಿಗೆ, ಕೆರೆ, ನದಿಗಳಲ್ಲಿ ನೀರು ಶೇಖರಣೆಯಾಗುತ್ತದೆ. ಎಲ್ಲ ಸರಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಅಳವಡಿಸಬೇಕಾಗಿದೆ ಎಂದರು.

ಕಾರ್ಯಾಗಾರದಲ್ಲಿ ತೆರೆದ ಬಾವಿ, ಕೊಳವೆ ಬಾವಿಗಳಿಗೆ ಮಳೆ ನೀರು ಪೂರಣ ಮಾಹಿತಿ ನೀಡಲಾಗುವುದು ಎಂಜಿನಿಯರ್ ಅಸೋಸಿಯೇಶನ್‌, ಕೃಷಿಕ ಸಂಘಟನೆಗಳು, ಪ್ಲಂಬರ್, ವೈಯಕ್ತಿಕ ಫ‌ಲಾನುಭವಿಗಳು, ಮಳೆ ನೀರು ಕೊಯ್ಲು ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ಯೋಗಾಕಾಂಕ್ಷಿಗಳು, ಫ್ಲ್ಯಾಟ್‌ ಮಾಲಕರು/ ಅಪಾರ್ಟ್‌ಮೆಂಟ್‌ ಸೊಸೈಟಿ ಪ್ರತಿನಿಧಿಗಳು, ಕೈಗಾರಿಕಾ ಘಟಕಗಳ ಮಾಲಕರು, ಗುತ್ತಿಗೆ ನಿರ್ಮಾಣ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ಶಿಕ್ಷಣ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೈತರು, ಸಾರ್ವಜನಿಕರು, ಶಾಲಾ ಕಾಲೇಜುಗಳಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಹಕಾರಿ ಯಾಗುವಂತೆ ಎನ್ನೆಸ್ಸೆಸ್‌ ಅಧಿಕಾರಿಗಳು ಭಾಗವಹಿಸಿ ಅಗತ್ಯದ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದರು.

ಮಳೆ ನೀರು ಕೊಯ್ಲು ತಜ್ಞ ಜೋಸೆಫ್‌ ರೆಬೆಲ್ಲೋ ಮಾಹಿತಿ ನೀಡಿ ಸಾಂಪ್ರದಾಯಿಕ ರೀತಿಗಿಂತಲೂ ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿದರೆ ನೀರಿನ ಶೇ.100 ಬಳಕೆ ಸಾಧ್ಯ ಎಂದರು.

ಅಂತರ್ಜಲ ವೃದ್ಧಿಗೆ ಗ್ರಾಮೀಣ ಪ್ರದೇಶದ ವೆಂಟೆಡ್‌ ಡ್ಯಾಮ್‌ಗಳನ್ನು ಸರಿಯಾಗಿ ನಿರ್ವಹಿಸಬೇಕಾದ ಅಗತ್ಯ. ತೋಟಗಳಿಗಾಗಲೀ, ಇತರ ಬಳಕೆಗಾಗಲೀ ನೀರಿನ ಮಿತ ಬಳಕೆಯ ಬಗೆಗೆ ಜನಜಾಗೃತಿ ಅಗತ್ಯ. ಅಂತರ್ಜಲ ಕುಸಿಯದಂತೆ ತಡೆಗಟ್ಟುವ ಸಲುವಾಗಿ
ಬೇಸಾಯದ ಭೂಮಿಯನ್ನು ಪಾಳುಬಿಡದಂತೆ ಜಾಗೃತಿ ರೂಪಿಸಬೇಕು. ಮೊದಲ ಹಂತದ ಕಾರ್ಯಾಗಾರದ ಬಳಿಕ ತಾಲೂಕು ಮಟ್ಟದಲ್ಲಿ ಜಾಗೃತಿ ಕಾರ್ಯಾಗಾರ ನಡೆಸಬೇಕು ಎಂದು ಕಿಸಾನ್‌ ಸಂಘದ ಪ್ರ.ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಹೇಳಿದರು.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೆಟ್ಟು ಹೋದ ಕೊಳವೆ ಬಾವಿಗೆ ಮರುಪೂರಣ ಮಾಡಲು ನರೇಗಾದಡಿ ಅವಕಾಶವಿದೆ ಎಂದು ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌ ತಿಳಿಸಿದರು. ನೀರಿನ ಮಿತ ಬಳಕೆಗೆ ಸಹಕಾರಿಯಾದ ಹನಿ ನೀರಾವರಿ ಪದ್ಧತಿಗೆ ತೋಟಗಾರಿಕೆ ಇಲಾಖೆಯಲ್ಲಿ ಯೋಜನೆಗಳಿವೆ ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಮತ ದೇವಿ ಜಿ.ಎಸ್‌, ನಗರಸಭೆ ಆಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ತಾ.ಪಂ. ಇಒಗಳು, ರೈತ ಸಂಘಟನೆಗಳ ಪ್ರಮುಖರು, ಎನ್‌ಜಿಒ ಪ್ರತಿನಿಧಿಗಳು, ಉದಯವಾಣಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಅಧಿಕಾರಿ ಚಂದ್ರಶೇಖರ್‌ ವಂದಿಸಿದರು.

ತಾಲೂಕು, ಗ್ರಾಮ ಮಟ್ಟ ದಲ್ಲಿ ಕಾರ್ಯಾಗಾರಕ್ಕೆ ಕ್ರಮ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಲು ಸೂಚನೆ
ನೀಡಲಾಗಿದೆ. ಮಳೆ ನೀರು ಕೊಯ್ಲು ಪದ್ಧತಿಯನ್ನು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲು ಕ್ರಮ ವಹಿಸಲಾಗುವುದು ಎಂದು ಡಿಸಿ ಡಾ| ವಿದ್ಯಾಕುಮಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next