Advertisement

Mangaluru ಕಾನೂನು ಕೈಗೆತ್ತಿಕೊಂಡರೆ ಮುಲಾಜಿಲ್ಲದೆ ಗಡೀಪಾರು:ದ.ಕ.ಎಸ್‌ಪಿ ಸಿ.ಬಿ.ರಿಷ್ಯಂತ್‌

12:51 AM Oct 04, 2023 | Team Udayavani |

“ನೈತಿಕ ಪೊಲೀಸ್‌ಗಿರಿ’ ಮತ್ತು ಡ್ರಗ್ಸ್‌ ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕ. ಇವೆರಡೂ ವಿಚಾರಗಳ ಬಗ್ಗೆ ವಿಶೇಷ ನಿಗಾ ಇಡಲಾಗಿದೆ. ಸಂಘಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಡ್ರಗ್ಸ್‌ ಮಟ್ಟ ಹಾಕಲು ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸ ಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ 2013ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಿ.ಬಿ. ರಿಷ್ಯಂತ್‌ “ಉದಯವಾಣಿ’ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

ಜಿಲ್ಲೆಯ ಪೊಲೀಸರ ಮುಂದಿರುವ ಸವಾಲುಗಳು?
ಅನ್ಯಕೋಮಿನ ಯುವಕ-ಯುವತಿಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವ, ನೈತಿಕ ಪೊಲೀಸ್‌ಗಿರಿ ಎಂದು ಕರೆಯಲ್ಪಡುವ ಘಟನೆಗಳು ಮತ್ತು ಡ್ರಗ್ಸ್‌ – ಇವೆರಡು ದ.ಕ. ಜಿಲ್ಲೆಯಲ್ಲಿ ಸದ್ಯಕ್ಕಿರುವ ಪ್ರಮುಖ ಸವಾಲುಗಳು.

ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮ ಕ್ರಮ?
ನೈತಿಕ ಪೊಲೀಸ್‌ಗಿರಿ, ಮತೀಯ ಗಲಭೆಗೆ ಕಾರಣರಾಗುವವರ ವಿರುದ್ಧ ಕಠಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುವುದು ಮಾತ್ರವಲ್ಲದೆ ಜಾಮೀನಿನಲ್ಲಿ ಬಿಡುಗಡೆಯಾದರೂ ಅವರ ಮೇಲೆ ನಿಗಾ ಇಡಲಾಗುತ್ತದೆ. ಜಾಮೀನು ಷರತ್ತು ಉಲ್ಲಂಘನೆ, ಕೃತ್ಯ ಪುನರಾವರ್ತನೆ ಮೊದಲಾದ ಸಂದರ್ಭಗಳಲ್ಲಿ ಗೂಂಡಾ ಕಾಯ್ದೆ ಹಾಕಿ ಗಡೀಪಾರು ಮಾಡುವುದು, ಬಾಂಡ್‌ ಪಡೆಯುವುದು, ರೌಡಿಶೀಟ್‌ ತೆರೆಯುವುದು ಇತ್ಯಾದಿ ಮಾಡುತ್ತೇವೆ.

ಗ್ರಾಮೀಣ ಭಾಗಕ್ಕೂ ಡ್ರಗ್ಸ್‌ ವ್ಯಾಪಿಸುತ್ತಿದೆಯೇ ?
ನಗರಕ್ಕೆ ಹೋಲಿಸಿದರೆ ಕಡಿಮೆ. ಡ್ರಗ್ಸ್‌ನಿಂದ ಮುಂದಿನ ಪೀಳಿಗೆಯನ್ನು ರಕ್ಷಿಸುವುದಕ್ಕಾಗಿ ಜಾಗೃತಿ ಮೂಡಿಸುವುದು, ಪೂರೈಕೆ ಪತ್ತೆ, ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದು ಮಾತ್ರವಲ್ಲದೆ ಕಡ್ಡಾಯ ವಾಗಿ ಕೌನ್ಸೆಲಿಂಗ್‌ಗೆ ಒಳಪಡಿಸುವುನು, ಅಗತ್ಯವಿದ್ದರೆ ಡಿ ಎಡಿಕ್ಷನ್‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡು ವುದು ನಡೆಯುತ್ತಿದೆ.

ಡ್ರಗ್ಸ್‌ ಮೂಲ ಪತ್ತೆ ಸಾಧ್ಯವಿಲ್ಲವೆ?
ದ.ಕ. ಜಿಲ್ಲೆ ಹೊರ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕಾರಣ ಯಾವ ಮಾರ್ಗದ ಮೂಲಕ ಡ್ರಗ್ಸ್‌ ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಬಹುತೇಕ ಮಾಹಿತಿ ಇದೆ. ಕೆಲವು ಪ್ರಕರಣ ಭೇದಿಸಲಾಗಿದೆ. ಸಿಂಥೆಟಿಕ್‌ ಡ್ರಗ್ಸ್‌ಗಳ ಬಳಕೆ ಗ್ರಾಮೀಣ ಭಾಗದಲ್ಲಿ ತೀರಾ ಕಡಿಮೆ. ಆದರೆ ಗಾಂಜಾ ಇತ್ಯಾದಿ ಸೇವನೆ ಕಂಡುಬರುತ್ತಿದೆ.

Advertisement

ಜನರ ಸ್ಪಂದನೆ ಹೇಗಿದೆ?
ಡ್ರಗ್ಸ್‌ ವಿರುದ್ಧದ ಅಭಿಯಾ ನದಲ್ಲಿ ಶಾಲಾ ಕಾಲೇಜುಗಳು ಕೈ ಜೋಡಿಸಿವೆ. ಹೈಸ್ಕೂಲ್‌ಗ‌ಳಲ್ಲಿಯೂ ಡ್ರಗ್ಸ್‌ ವಿರೋಧಿ ಸಮಿತಿ ರಚಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆ, ಕಾಲೇಜುಗಳಿಂದಲೂ ಮಾಹಿತಿ ಸಿಗುತ್ತಿದೆ. ಮಕ್ಕಳ ಪೋಷಕ ರಿಂದಲೂ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದ್ದೇವೆ.

ಒಂಟಿ ಮನೆಗಳ ಸುರಕ್ಷೆಗೆ ಏನು ಕ್ರಮ?
ಜಿಲ್ಲೆಯಲ್ಲಿ ಒಂಟಿ ಮನೆಗಳು ಅಧಿಕ. ಕೆಲವೆಡೆ ಅಂತಹ ಮನೆಗಳನ್ನೇ ಕಳ್ಳರು, ದರೋಡೆಕೋರರು ಗುರಿ ಮಾಡುತ್ತಿದ್ದಾರೆ. ಈ ಬಗ್ಗೆ ವಿಶೇಷ ನಿಗಾ ಇಡಲಾಗುತ್ತಿದೆ. ಪೊಲೀಸ್‌ ಬೀಟ್‌ ಕೂಡ ಹೆಚ್ಚಿಸಲಾಗುತ್ತಿದೆ. ಅಂತಹ ಒಂಟಿ ಮನೆಗಳಲ್ಲಿ “ಬ್ರಿàಚ್‌ ಸೆನ್ಸರ್‌’ನಂತಹ ಭದ್ರತಾ ಉಪಕರಣ ಅಳವಡಿಸುವುದು ಸೂಕ್ತ.

ಜನಸ್ನೇಹಿ ಪೊಲೀಸಿಂಗ್‌ ಹೇಗೆ ಮಾಡುತ್ತೀರಿ?
ಠಾಣೆಗೆ ಬರುವವರ ಜತೆ ಉತ್ತಮ ನಡವಳಿಕೆಯಿಂದ ಸೇವೆ ನೀಡಲು ಸೂಚನೆ ನೀಡಲಾಗಿದೆ. ಜನಸ್ಪಂದನ ವ್ಯವಸ್ಥೆಯನ್ನು ಎಲ್ಲ ಠಾಣೆಗಳಲ್ಲಿಯೂ ಆರಂಭಿಸಲಾಗಿದೆ. ಯಾವುದೇ ಘಟನೆಯಾದರೂ ತತ್‌ಕ್ಷಣ ಸ್ಥಳಕ್ಕೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನನಗೆ ಮಾಹಿತಿ ದೊರೆತ ಕೂಡಲೇ ಖುದ್ದಾಗಿ ಭೇಟಿ ನೀಡುತ್ತಿದ್ದೇನೆ.

ಅಪಘಾತಗಳ ನಿಯಂತ್ರಣ ಬಗ್ಗೆ…
ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. “ಬ್ಲ್ಯಾಕ್‌ ಸ್ಪಾಟ್‌’ ಮಾದರಿಯಲ್ಲಿಯೇ “ಆಕ್ಸಿಡೆಂಟ್‌ ಸ್ಪಾಟ್‌’ಗಳನ್ನು ಗುರುತಿಸಲಾಗುತ್ತಿದ್ದು ಪೂರಕ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರ ಸಮಸ್ಯೆಗೆ ಸ್ಥಳೀಯ ಠಾಣೆಗಳಿಂದ ಪೂರಕವಾಗಿ ಸ್ಪಂದನೆ ಸಿಗದಿದ್ದರೆ ಅಥವಾ ಏನಾದರೂ ದೂರುಗಳಿದ್ದರೆ ಪೊಲೀಸ್‌ ವರಿಷ್ಠಾಧಿಕಾರಿಗಳ ಈ ಸಂಖ್ಯೆಗೆ ಕರೆ ಅಥವಾ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಬಹುದು.
ಮೊಬೈಲ್‌: 9480805301

Advertisement

Udayavani is now on Telegram. Click here to join our channel and stay updated with the latest news.

Next