Advertisement
ರಾಜ್ಯದಲ್ಲಿ ಸಿಎಂ ಬದಲಾವಣೆ, ಹೆಚ್ಚುವರಿಯಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಕೂಗು ಕೇಳಿ ಬರುತ್ತಿರುವುದರಿಂದ ಕಾಂಗ್ರೆಸ್‌ನಲ್ಲಿ ಬಣ-ಬಣಗಳ ನಡುವೆ ನಡೆದಿರುವ ಜಟಾಪಟಿ ಹಿನ್ನೆಲೆಯಲ್ಲಿ “ಉದಯವಾಣಿ’ ಗೆ ನೇರಾನೇರದಲ್ಲಿ ಮಾತನಾಡಿದ ಸಚಿವರು, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಕಾಲಿಡುವ ಮೊದಲೇ ನಾನು ನೋಟಿಸ್, ಉಚ್ಚಾಟನೆ ಎಲ್ಲವನ್ನೂ ನೋಡಿದ್ದೇನೆ. ನಾನು ಸತ್ಯವನ್ನೇ ಹೇಳಿದ್ದೇನೆ, ಸತ್ಯ ಹೇಳಿದ್ದಕ್ಕೆ ನೋಟಿಸ್ ಕೊಟ್ಟರೆ ಅದಕ್ಕೆ ಏನಂತ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ಸರಕಾರ ರಚನೆ ಆಗುವ ವೇಳೆ ಈ ಬಗ್ಗೆ ಚರ್ಚೆ ಆಗಿತ್ತಾ?
ವಿಧಾನಸಭಾ ಚುನಾವಣೆ ಅನಂತರ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ಬಳಿಕ ಸರಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಸಹಜವಾಗಿಯೇ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಆಗಿರುತ್ತವೆ. ಆ ಸಂದರ್ಭದಲ್ಲಿ ಮೂರ್‍ನಾಲ್ಕು ಡಿಸಿಎಂ ಹುದ್ದೆಗಳು ಬೇಡ, ನಾನೊಬ್ಬನೇ ಡಿಸಿಎಂ ಆಗಿರುತ್ತೇನೆ ಎಂಬ ಷರತ್ತನ್ನು ಶಿವಕುಮಾರ್ ಹಾಕಿರಲೂಬಹುದು. ಆದರೆ ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು ಇದ್ದಂತೆ, ಪರಿಸ್ಥಿತಿಗೆ ತಕ್ಕಂತೆ ಕೆಲವೊಂದು ಬದಲಾವಣೆ ಹಾಗೂ ನಿರ್ಣಯಗಳು ಆಗಬೇಕಾಗುತ್ತದೆ.ಜಾತಿ, ಹಣ ಹಾಗೂ ಅಧಿಕಾರ ಒಬ್ಬನೇ ವ್ಯಕ್ತಿ ಬಳಿ ಇರಬಾರದು, ಒಂದು ವೇಳೆ ಈ ಮೂರು ಒಂದೇ ಕಡೆ ಸೇರಿದರೆ ಆ ವ್ಯಕ್ತಿಗೆ ತಲೆ ನಿಲ್ಲಲ್ಲ. ಅಸಹಾಯಕ ಸಮುದಾಯಗಳಲ್ಲಿ ಬದಲಾವಣೆ ಆಗುವುದಿಲ್ಲ.
ಎರಡೂವರೆ ವರ್ಷ ಸಿದ್ದರಾಮಯ್ಯ, ಅನಂತರ ಡಿ.ಕೆ.ಶಿವಕುಮಾರ್ ಸಿಎಂ ಎಂಬ ಮಾತುಕತೆ ನಿಜವೇ?
ಈ ಬಗ್ಗೆ ಹೈಕಮಾಂಡ್ ಹಂತದಲ್ಲಿ ಚರ್ಚೆ- ಒಪ್ಪಂದ ಆಗಿದ್ದರೂ ಆಗಿರಬಹುದು. ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಭರವಸೆ ಕೊಟ್ಟಿದ್ದರೂ ಕೊಟ್ಟಿರಬಹುದು. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಸರಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ “ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಮುಂದುವರಿಯಲಿದ್ದಾರೆ’ ಎಂದು ದಿಲ್ಲಿಯಲ್ಲಿ ಘೋಷಿಸಿದ್ದು ನಿಮ್ಮ ಮಾಧ್ಯಮಗಳಲ್ಲೇ ಬಂದಿದೆ. ಆ ಪ್ರಕಾರ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಲ್ಲವೇ? ಹೈಕಮಾಂಡ್ ನಡುವೆ ಚರ್ಚೆ ಆಗಿದ್ದರೆ ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡಬಹುದು, ಆದರೆ ಈಗ ಸಂಸತ್ ಚುನಾವಣೆ ಮುಗಿದಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೆಂಬ ಬೇಡಿಕೆ ಸಹಜವಾದದ್ದು.
ಸಮುದಾಯಕ್ಕೊಂದು ಡಿಸಿಎಂ ಎಂಬ ಚರ್ಚೆಯೂ ಇದೆ, ಇವೆಲ್ಲವೂ ನೈಜ ಬೇಡಿಕೆಯೋ? ಡಿ.ಕೆ.ಶಿವಕುಮಾರ್‌ಗೆ ಕಡಿವಾಣ ಹಾಕುವ ಯತ್ನವೋ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಲವು ಸಮುದಾಯಗಳು ಬೆಂಬಲಿಸಿದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಿದರೆ ಒಂದು ರೀತಿ ಗೌರವ ಬರುತ್ತದೆ, ಆ ಸಮಾಜಗಳು ಸದಾ ಪಕ್ಷದ ಪರವಾಗಿ ನಿಲ್ಲುತ್ತವೆ ಎಂಬ ಮಾತನ್ನು ಹೇಳಿದ್ದೇನೆ ಹೊರತು ಡಿ.ಕೆ.ಶಿವಕುಮಾರ್‌ಗೆ ಕಡಿವಾಣ ಹಾಕುವುದು, ಮೂಗುದಾರ ಹಾಕುವ ದುರುದ್ದೇಶವಂತೂ ಇದರಲ್ಲಿ ಇಲ್ಲವೇ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಪಕ್ಷವನ್ನು ಬೆಂಬಲಿಸಿದ ಸಮಾಜಗಳಿಗೆ ಪ್ರಾತಿನಿಧ್ಯ ಕೊಡುವುದು ಸೂಕ್ತವಲ್ಲವೇ? ಈ ಬಗ್ಗೆ ಹೈಕಮಾಂಡ್‌ಗೆ ಏನು ಹೇಳಬೇಕೋ ಹೇಳಿದ್ದೇನೆ, ಮಾಡಿದರೆ ಮಾಡಲಿ, ಬಿಟ್ಟರೆ ಬಿಡಲಿ, ಮಾಡಿದರೂ ಸಂತೋಷ, ಮಾಡದಿದ್ದರೂ ಸಂತೋಷ, ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ, ಮುಂದಿನ ಸಲ ಚುನಾವಣೆಗೂ ಸ್ಪರ್ಧಿಸಲ್ಲ. ನೀನು ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ಹೈಕಮಾಂಡ್ ಹೇಳಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಧ್ಯಕ್ಷ ಸ್ಥಾನವಹಿಸಿಕೊಂಡು ಪಕ್ಷ ಸಂಘಟನೆಗೂ ಸಿದ್ಧನಿದ್ದೇನೆ.
ನಿಮ್ಮೊಬ್ಬರದೇ ಈ ವಿಷಯದಲ್ಲಿ ಗಟ್ಟಿ ಧ್ವನಿ ಇದೆ, ಬೇರೆಯವರು ಏಕೆ ಮೌನ?
ಆ ರೀತಿ ಇಲ್ಲವೇ ಇಲ್ಲ, ಸಚಿವರಾದ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಡಾ|ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಹಾಗೂ ಡಾ|ಜಿ.ಪರಮೇಶ್ವರ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಜತೆಗೆ ಹಲವು ಶಾಸಕರ ಸಹಮತವೂ ಇದೆ. ಇದರಲ್ಲಿ ನಾನೊಬ್ಬನೇ ಮಾತ ನಾಡುತ್ತಿದ್ದೇನೆ ಎಂಬ ಭಾವನೆ ತಪ್ಪು. ಸಂಪುಟದ ಬಹುತೇಕ ಸಚಿವರ ಅಭಿಪ್ರಾಯ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಪರವಾಗಿದೆ. ಇದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ.
ಇದರ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೆ ಶೋಕಾಸ್ ನೋಟಿಸ್ ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಎಚ್ಚರಿಕೆ ಕೊಟ್ಟಿದ್ದರಲ್ಲಾ?
ಅಯ್ಯೋ… ಕಾಂಗ್ರೆಸ್‌ನಲ್ಲಿ ನೋಟಿಸ್ ನನಗೆ ಮಾಮೂಲಿ ಸಾರ್, ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಕಾಲಿಡುವ ಮೊದಲೇ ನಾನು 1984, 1994 ಹಾಗೂ 2004 ರಲ್ಲಿ ನೋಟಿಸ್, ಉಚ್ಚಾಟನೆ ಎಲ್ಲ ನೋಡಿದ್ದೇನೆ. ನೋಟಿಸ್ ನನಗೆ ಮಾಮೂಲಿ ಆಗಿದೆ. ಸತ್ಯ ಹೇಳಿದ್ದಕ್ಕೆ ನೋಟಿಸ್ ಕೊಡುವುದಾದರೆ ಕೊಡಲಿ, ನಾನು ಏನೂ ತಪ್ಪು ಹೇಳಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕಾದ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಿದ್ದು ಮಾತ್ರ ತಪ್ಪು ಅಷ್ಟೆ. ಆದರೆ ನಾನು ಹೇಳಿರುವ ಸಂಗತಿಗಳಲ್ಲಿ ಯಾವುದೂ ತಪ್ಪು ಇಲ್ಲ. ಪಕ್ಷದ ಶಿಸ್ತು ಎಲ್ಲರಿಗೂ ಅನ್ವಯ ಆಗಬೇಕು ಅಲ್ಲವೇ?
ಚಂದ್ರಶೇಖರ ಸ್ವಾಮೀಜಿ ಜತೆ ಗುದ್ದಾಟ ಸರಿಯೇ?
ನೋಡಿ, ಸ್ವಾಮೀಜಿಗಳನ್ನು 2ನೇ ದೇವರೆಂದು ಭಾವಿಸಿರುವ ವ್ಯಕ್ತಿ ನಾನು. ಸ್ವಾಮೀಜಿಗಳು ಸ್ವಾಮೀಜಿಗಳಾಗಿಯೇ ಇರಬೇಕು, ರಾಜಕಾರಣಿ ಆಗಬಾರದು. ಗೌರವ ಉಳಿಸಿಕೊಳ್ಳಬೇಕು. ರಾಜಕಾರ ಣದ ವಿಷಯದಲ್ಲಿ ತಲೆ ಹಾಕಿದರೆ ಅವರಿಗೆ ಗೌರವ ಕಡಿಮೆ ಆಗುತ್ತದೆ. ಅದರಲ್ಲೂ ಸಿಎಂ- ಡಿಸಿಎಂ ಸಮ್ಮುಖದಲ್ಲೇ ಆ ಸ್ವಾಮೀಜಿ ಆ ರೀತಿ ಹೇಳಿದ್ದು ಸರಿಯಲ್ಲ, ಅದು ಮುಜುಗರ ತಂದಿತು.
ಡಿಸಿಎಂ ಹುದ್ದೆಗೆ ಸಂವಿಧಾನದ ಮಾನ್ಯತೆ ಇಲ್ಲ, ಮೂರಲ್ಲದಿದ್ದರೆ ಮೂವತ್ಮೂರು ಡಿಸಿಎಂ ಮಾಡಿಕೊಳ್ಳಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರಲ್ಲಾ?
ಹೌದು ಆ ಹುದ್ದೆಗೆ ಯಾವುದೇ ಸಂವಿಧಾನದ ಮಾನ್ಯತೆ ಇಲ್ಲ, ಡಿ.ಕೆ.ಸುರೇಶ್ ಮಾತ್ರವಲ್ಲ, ನಾನೂ ಆ ಮಾತು ಹೇಳಿದ್ದೇನೆ, ಯಾವುದೇ ಹೆಚ್ಚುವರಿ ಅಧಿಕಾರ ಇಲ್ಲ. ಒಂದು ಗೌರವ ಸೂಚಕ ಹುದ್ದೆ ಮಾತ್ರ ಅದು ಅಷ್ಟೇ. ಆದರೆ ಸುರೇಶ್ ಮಾತಿನಲ್ಲಿ ವ್ಯಂಗ್ಯವಿದೆ.
ಉದಯವಾಣಿ ಸಂದರ್ಶನ
ಎಂ.ಎನ್.ಗುರುಮೂರ್ತಿ