Advertisement
ಮತ್ತೂಂದು ಚಿಟ್‌ಫಂಡ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಚಿಟ್‌ಫಂಡ್ ಕಂಪೆನಿಗಳು ಎಷ್ಟೇ ಮೋಸ ಮಾಡಿದರೂ ಜನರು ಬುದ್ಧಿ ಕಲಿತುಕೊಳ್ಳುವುದಿಲ್ಲ ಎನ್ನುವುದು ಬೆಂಗಳೂರಿನಲ್ಲಿ ಬಯಲಾಗಿರುವ ಈ ಪ್ರಕರಣದಿಂದ ಮತ್ತೂಮ್ಮೆ ಸಾಬೀತಾಗಿದೆ. ತ್ರಿಪುರ ಚಿಟ್ ಫಂಡ್ ಕಂಪೆನಿ ಎಂಬ ಸಂಸ್ಥೆ ನಾಲ್ಕು ರಾಜ್ಯಗಳ 30000ಕ್ಕೂ ಅಧಿಕ ಗ್ರಾಹಕರಿಗೆ ಸುಮಾರು 280 ಕೋ. ರೂ. ವಂಚಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ಕಂಪೆನಿಯ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ ಇರುವುದರಿಂದ ಮೋಸ ಹೋದವರ ಸಂಖ್ಯೆ ಮತ್ತು ಮೋಸದ ಮೊತ್ತ ಇನ್ನೂ ಹೆಚ್ಚಿರಲಿಕ್ಕೂ ಸಾಕು. ಸದ್ಯಕ್ಕೆ ಸಿಕ್ಕಿರುವ ಲೆಕ್ಕ ಇಷ್ಟು.
ವಿತ್ತೀಯ ಅರಿವಿನ ಕೊರತೆಯೂ ಚಿಟ್‌ಫಂಡ್‌ಗಳಂಥ ದಗಾ ಕಂಪೆನಿಗಳ ವ್ಯವಹಾರಕ್ಕೆ ಪೂರಕ ವಾತಾವರಣ ಸೃಷ್ಟಿಸಿಕೊಡುತ್ತದೆ. ಈಗಲೂ ಗ್ರಾಮೀಣ ಭಾಗಗಳ ಜನರು ಬ್ಯಾಂಕುಗಳಿಗಿಂತಲೂ ಹೆಚ್ಚಾಗಿ ಖಾಸಗಿ ವ್ಯಕ್ತಿಗಳು ನಡೆಸುವ ಹಣಕಾಸಿನ ವಹಿವಾಟುಗಳ ಮೇಲೆಯೇ ಹೆಚ್ಚು ಭರವಸೆ ಹೊಂದಿದ್ದಾರೆ. ಚಿಟ್‌ಫಂಡ್ ವ್ಯವಹಾರಗಳನ್ನು ನಿಯಂತ್ರಿಸಲು ಚಿಟ್‌ಫಂಡ್ ಕಾಯಿದೆ 1982 ಇದೆ. ಶಾರದಾ ಮತ್ತು ರೋಸ್‌ವ್ಯಾಲಿ ವಂಚನೆ ಕಾಂಡಗಳು ಬಯಲಾದ ಬಳಿಕ ಕೇಂದ್ರ ಈ ಕಾಯಿದೆಗೆ ಬದಲಾಗಿ ಅನಿಯಂತ್ರಿತ ಠೇವಣಿ ಸ್ಕೀಂಗಳು ಮತ್ತು ಚಿಟ್‌ಫಂಡ್ ವ್ಯವಹಾರಗಳನ್ನು ನಿಷೇಧಿಸುವ ಕರಡು ಕಾಯಿದೆಯನ್ನು ರಚಿಸಿದ್ದರೂ ಅದಿನ್ನೂ ಶಾಸನವಾಗಿ ಜಾರಿಗೆ ಬಂದಿಲ್ಲ. ಲೋಕಸಭೆಯಲ್ಲಿ ಮಂಡನೆಯಾಗಿರುವ ಕಾಯಿದೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ.
Related Articles
ಚಿಟ್‌ಫಂಡ್ ವಂಚನೆಗಳು ಬೆಳಕಿಗೆ ಬಂದ ಬಳಿಕ ಸರಕಾರಗಳು ಸಂತ್ರಸ್ತರಿಗೆ ಪರಿಹಾರ ನೀಡಲು ಒಂದಿಷ್ಟು ಮೊತ್ತ ಎತ್ತಿಡುವುದರಿಂದ ಈ ಪೀಡೆ ನಿವಾರಣೆಯಾಗದು. ಪಶ್ಚಿಮ ಬಂಗಾಲ ಸರಕಾರ 30,000 ಕೋ. ರೂ. ವಂಚನೆ ನಡೆದಾಗ 500 ಕೋ. ರೂ. ಎತ್ತಿಟ್ಟು ನಗೆಪಾಟಲಿಗೀಡಾದದ್ದನ್ನು ನೆನಪಿಸಿಕೊಳ್ಳಬಹುದು. ಅಲ್ಲದೆ ಜನರ ತೆರಿಗೆ ಹಣವನ್ನು ಇಂಥ ಕೆಲಸಗಳಿಗೆ ಬಳಸುವುದು ಸರಿಯೇ ಎಂಬ ನೈತಿಕತೆಯ ಪ್ರಶ್ನೆಯೂ ಇಲ್ಲಿದೆ. ಇದರ ಬದಲು ಚಿಟ್‌ಫಂಡ್ ಮತ್ತು ಪಾಂಜಿ ಸ್ಕೀಂಗಳ ವಿರುದ್ಧ ಕಠಿನ ನಿಯಮಗಳನ್ನು ರೂಪಿಸುವುದೇ ಸರಿಯಾದ ಕ್ರಮ. ಸರ್ವರಿಗೂ ಬ್ಯಾಂಕ್ ಸೇವೆ, ಎಲ್ಲರಿಗೂ ವಿತ್ತೀಯ ಸೇರ್ಪಡೆ ಎಂಬ ಮಹೋನ್ನತ ಯೋಜನೆಗಳನ್ನು ಜಾರಿಗೊಳಿಸು ತ್ತಿರುವಾಗ ಇಂಥ ವಂಚನೆಗಳು ನಡೆಯುತ್ತಿರುವುದು ಆರೋಗ್ಯಕರವಲ್ಲ.
Advertisement