ರಾ. ರವಿಬಾಬು
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದ ಒಡಲು ಭರ್ತಿ ಆಗುತ್ತಿರುವುದು ಸಾರ್ವಜನಿಕರು, ಅನ್ನದಾತರ ಸಂತಸಕ್ಕೆ ಕಾರಣವಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಜಿಲ್ಲೆಯ ಜನರು ಲಕ್ಕವಳ್ಳಿಯ ಭದ್ರಾ ಡ್ಯಾಂನತ್ತ ಚಿತ್ತ ಹರಿಸುವುದು ಸಾಮಾನ್ಯ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ತುಂಬಿದರೆ ದಾವಣಗೆರೆ ಜಿಲ್ಲೆಯ ರೈತರು, ಜನರ ಬದುಕು ಸುಭದ್ರ. ಭದ್ರಾ ತುಂಬದೇ ಹೋದಲ್ಲಿ ಸಾಕಷ್ಟು ಜನರ ಬದುಕು ಛಿದ್ರವಾಗಿರುವ ಉದಾಹರಣೆಗಳು ಸಾಕಷ್ಟಿವೆ.
ದಾವಣಗೆರೆ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಅಚ್ಚುಕಟ್ಟು ಪ್ರದೇಶ ಅವಲಂಬಿಸಿರುವುದೇ ಭದ್ರಾ ಜಲಾಶಯವನ್ನು. ಕೃಷಿಗೆ ಮಾತ್ರವಲ್ಲ ಕುಡಿಯುವ ನೀರು, ಕೈಗಾರಿಕೆಗಳಿಗೆ ಜೀವನಾಡಿ ಭದ್ರೆಯೇ ಮೂಲ ಆಸರೆ. ಭದ್ರಾ ಜಲಾಶಯ ತುಂಬಿ ನಾಲೆಯಲ್ಲಿ ನೀರು ಹರಿದಾಗಲೇ ರೈತರ ಬದುಕು ಹಸನು. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಭದ್ರಾ ಜಲಾಶಯ ತುಂಬುತ್ತದೆ. ಆದರೆ ಈ ವರ್ಷ ಆಗಸ್ಟ್‌ಗೂ ಮುನ್ನವೇ ಭದ್ರಾ ಜಲಾಶಯ ತುಂಬುತ್ತಿದೆ. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ ಅಂತ್ಯಕ್ಕೆ 182 ಅಡಿ ನೀರಿದೆ.ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಲೆಕ್ಕ ಹಾಕಿದರೆ ಒಂದರೆಡು ದಿನಗಳಲ್ಲಿ ಭರ್ತಿ ಆಗಲಿದೆ. ಭದ್ರೆಯ ಒಡಲು ತುಂಬುತ್ತಿರುವುದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.
65 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಆಧಾರ: ಜಿಲ್ಲೆಯಲ್ಲಿ ಭದ್ರೆಯ ನೀರು ನಂಬಿಯೇ ಭತ್ತ, ಕಬ್ಬು ಬೆಳೆಯಲಾಗುತ್ತದೆ. ಅತಿ ಹೆಚ್ಚು ಎಂದರೆ 65,947 ಹೆಕ್ಟೇರ್ ಅಚ್ಚುಕಟ್ಟು ಜಿಲ್ಲೆಯಲ್ಲಿದೆ. ದಾವಣಗೆರೆ ತಾಲೂಕಿನಲ್ಲಿ 18,110, ಹರಿಹರದಲ್ಲಿ 23,787, ಹೊನ್ನಾಳಿಯಲ್ಲಿ 10,150, ನ್ಯಾಮತಿಯಲ್ಲಿ 10,910, ಚನ್ನಗಿರಿಯಲ್ಲಿ 2,890 ಒಳಗೊಂಡಂತೆ 65,947 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ. ದಾವಣಗೆರೆ ತಾಲೂಕಿನಲ್ಲಿ1,500, ಹರಿಹರದಲ್ಲಿ 84, ಹೊನ್ನಾಳಿಯಲ್ಲಿ 55, ನ್ಯಾಮತಿಯಲ್ಲಿ10, ಚನ್ನಗಿರಿಯಲ್ಲಿ 65 ಹೆಕ್ಟೇರ್ ಸೇರಿದಂತೆ 1714 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತದೆ.
ಭತ್ತ ಮತ್ತು ಕಬ್ಬು ಬೆಳೆಗಾಗಿ ಮಾತ್ರವಲ್ಲ, ಸಾವಿರಾರು ಹೆಕ್ಟೇರ್‌ನಲ್ಲಿನ ತೋಟಗಾರಿಕಾ ಬೆಳೆಗಳಿಗೆ ಭದ್ರಾ ನೀರೇ ಆಸರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ ವಿಜಯನಗರ, ಗದಗ ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಮೂಲವೇ ಭದ್ರ ಜಲಾಶಯ. ಹಾಗಾಗಿಯೇ ಭದ್ರಾ ಜಲಾಶಯ ಜಿಲ್ಲೆಯ ಜನರ ಜೀವನಾಡಿ.
184 ಕಿಮೀ ಉದ್ದದ ನಾಲೆ: ಜಿಲ್ಲೆಯಲ್ಲಿ ಒಟ್ಟಾರೆ 184.20 ಕಿಲೋ ಮೀಟರ್‌ನಷ್ಟು ಭದ್ರಾ ಮುಖ್ಯ ನಾಲೆ ಇದೆ. ಚನ್ನಗಿರಿಯಲ್ಲಿ 41.80, ದಾವಣಗೆರೆಯಲ್ಲಿ 58.70, ಹರಿಹರದಲ್ಲಿ 19.70, ಹೊನ್ನಾಳಿಯಲ್ಲಿ 64 ಕಿಲೋ ಮೀಟರ್‌ನಷ್ಟು ಮುಖ್ಯ ನಾಲೆ ಇದೆ. ಮುಖ್ಯನಾಲೆಗೆ ಹೊಂದಿಕೊಂಡಂತೆ ಸಂಪರ್ಕ ನಾಲೆ ನೂರಾರು ಕಿಲೋಮೀಟರ್‌ನಷ್ಟಿದೆ. ಭದ್ರಾ ಜಲಾಶಯ ತುಂಬಿದರೆ ಮಾತ್ರವೇ ನಾಲೆಯಲ್ಲಿ ನೀರು. ಹೊಲಗದ್ದೆಗಳಲ್ಲಿ ಹಸಿರು ಎನ್ನುವ ವಾತಾವರಣ ನಿರ್ಮಾಣ ಆಗುತ್ತದೆ.
ಭದ್ರಾ ಜಲಾಶಯ ತುಂಬಿದರೆ ಈ ಭಾಗದ ಜನರು ಬಾಗಿನ ಅರ್ಪಿಸುವ ಸಂಪ್ರದಾಯ ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ಭದ್ರೆಯ ಮೇಲಿನ ಅಭಿಮಾನಕ್ಕೆ ಸಾಕ್ಷಿ. ಅಂತಹ ಭದ್ರಾ ಜಲಾಶಯ ಈ ವರ್ಷವೂ ತುಂಬುತ್ತಿರುವುದು ರೈತರು, ಸಾರ್ವಜನಿಕರು, ಕೈಗಾರಿಕೆಗಳ ಪಾಲಿಗೆ ಶುಭ ಸೂಚನೆಯೇ ಸರಿ.