Advertisement
ದಾವಣಗೆರೆ : ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗುರುವಾರ (ಸೆ. 2) ಪ್ರಥಮ ಬಾರಿಗೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಗೆ ಆಗಮಿಸುತ್ತಿರುವ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿನ ಅಭಿವೃದ್ಧಿ ಕಾರ್ಯಗಳ ಘೋಷಣೆ ಮಾಡುವರೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಗರಿಗೆದರಿದೆ.
Related Articles
Advertisement
ಆದರೆ, ಸಾರ್ವಜನಿಕರಿಗೆ ಹೊರೆಯಾಗದ ರೀತಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬುದು ಸಾರ್ವಜನಿಕರ ಅಭಿಲಾಷೆ. ಮುಖ್ಯಮಂತ್ರಿಗಳು ಸರ್ಕಾರ ದಿಂದಲೇ ವೈದ್ಯಕೀಯ ಕಾಲೇಜು ಪ್ರಾರಂಭಿಸುವತ್ತ ಚಿತ್ತ ಹರಿಸುವರೇ ಎಂಬುದನ್ನ ಕಾದು ನೋಡುವಂತಾಗಿದೆ.
ಮೆಕ್ಕೆಜೋಳದ ಕಣಜ ಖ್ಯಾತಿಯ ದಾವಣಗೆರೆಯಲ್ಲಿ ಸಂಸ್ಕರಣಾ ಘಟಕ ಪ್ರಾರಂಭಿಸಬೇಕು ಎಂಬ ಅನ್ನದಾತರ ಒತ್ತಾಯ ದಶಕಗಳಿಂದ ಕೇಳಿ ಬರುತ್ತಲೇ ಇದೆ. ಯಾವುದೇ ಸರ್ಕಾರ ಈವರೆಗೂ ಮೆಕ್ಕೆಜೋಳ ಬೆಳೆಗಾರರ ಬೇಡಿಕೆಗೆ ಸ್ಪಂದಿಸುವತ್ತ ಕಾರ್ಯೋನ್ಮುಖವಾಗಿಲ್ಲ.
ರೈತರ ಬಗ್ಗೆ ಅಪಾರ ಕಾಳಜಿಯಿಂದ ಮಾತನಾಡುವ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಿರುವ, ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ನಾಡ ದೊರೆ ಬೇಡಿಕೆ ಈಡೇರಿಸಬಹುದೇ ಎಂಬ ಆಸೆ ಕೃಷಿಕರ ವಲಯದಲ್ಲಿದೆ. ಶಾಶ್ವತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಜಗಳೂರು ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಆ ಭಾಗದ ರೈತಾಪಿ ವರ್ಗ ಹೊಲಗಳಿಗೆ ನೀರು ಕಾಣುವ ದಿನಗಳು ಹತ್ತಿರದಲ್ಲಿವೆ.
ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಾಗಿದೆ. ಅದಕ್ಕೆ ಪೂರಕ ವಾದ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿದೆ. ಮುಖ್ಯಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆ ಕುರಿತಾದ ಸರ್ಕಾರದ ನಿಲುವಿನ ಪ್ರಕಟಣೆ ಮಾಡಿಯಾರೇಎಂಬುದರನಿರೀಕ್ಷೆಯಲ್ಲಿ ಜಗಳೂರು ಜನರು, ರೈತರು, ಮುಖಂಡರು ಇದ್ದಾರೆ.
ವಿಮಾನ ನಿಲ್ದಾಣ, ಸ್ಮಾರ್ಟ್‌ಸಿಟಿ ಯೋಜನೆಗೆ ಚುರುಕು, ಪ್ರವಾಸೋದ್ಯಮ ಅಭಿವೃದ್ಧಿ, ಹರಿಹರ ಸಮೀಪ 2ಜಿ ಎಥೆನಾಲ್, ಯೂರಿಯ ಕಾರ್ಖಾನೆ, ಏತ ನೀರಾವರಿ ಯೋಜನೆ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಕಾಯಕಲ್ಪದ ನಿರೀಕ್ಷೆಯಲ್ಲೇ ಇವೆ. ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಅಗತ್ಯವಾಗಿರುವ ಕಾರ್ಯಗಳಿಗೆ ಚಾಲನೆ ನೀಡುವರೇ ಎಂಬುದನ್ನ ಕಾದು ನೋಡುವಂತಾಗಿದೆ.