ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಐ ಆ್ಯಮ್ ಜಯಲಕ್ಷ್ಮೀ ಬ್ರೈಡಲ್ ಡೆಸ್ಟಿನೇಷನ್ ಬಿಜೈ ಮಂಗಳೂರು, ಕೆಎಂಎಫ್ ನಂದಿನಿ, ಜಿ.ಎಲ್.ಆಚಾರ್ಯ ಜುವೆಲರ್ಸ್ ಸಹಯೋಗದಲ್ಲಿ ಉದಯವಾಣಿ ಡಾಟ್ ಕಾಂ ಆಯೋಜಿಸಿದ “ನಮ್ಮನೆ ಕೃಷ್ಣ’ ರೀಲ್ಸ್ (Nammane Krishna Reels) ಸ್ಪರ್ಧೆಯ ವಿಜೇತರಿಗೆ ಶುಕ್ರವಾರ (ಸೆ.27) ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಹೊಟೇಲ್‌ನಲ್ಲಿ ಬಹುಮಾನ ವಿತರಿಸಲಾಯಿತು.
ಐ ಆ್ಯಮ್ ಜಯಲಕ್ಷ್ಮೀ ಬ್ರೈಡಲ್ ಡೆಸ್ಟಿನೇಷನ್ ಮಂಗಳೂರು ಇದರ ಬ್ರ್ಯಾಂಚ್ ಮುಖ್ಯಸ್ಥರಾದ ರಾಜೇಂದ್ರ ಉಳ್ಳಾಲ್ ಮಾತನಾಡಿ, ಪುಟಾಣಿಗಳ ಇಂತಹ ಸ್ಪರ್ಧಾ ಕಾರ್ಯಕ್ರಮದ ಹಿಂದೆ ತಂದೆ-ತಾಯಿಯ ಶ್ರಮ ಅಪಾರವಾಗಿದೆ. ತುಣುಕು ವೀಡಿಯೋಗಳ ಹಿಂದಿನ ಶ್ರಮ ವರ್ಣಿಸಲು ಅಸಾಧ್ಯವಾದುದು. ಇಂತಹ ಕಾರ್ಯಕ್ರಮಗಳು ಉದಯವಾಣಿ ಡಿಜಿಟಲ್ ಮೂಲಕ ಮತ್ತಷ್ಟು ನಡೆಯುವಂತಾಗಲಿ ಎಂದು ಹಾರೈಸಿದರು.
ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಶ್ರೀಕೃಷ್ಣ ಬೆಣ್ಣೆ ಕದ್ದ ಪರಿಣಾಮ “ನಂದಿನಿ’ ಗೆ ಮತ್ತಷ್ಟು ಪ್ರಾಶಸ್ತ್ಯ ಸಿಕ್ಕಿದೆ. ಇತ್ತೀಚೆಗಷ್ಟೇ ತಿರುಪತಿ ಸಾನ್ನಿಧ್ಯದಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿರುವುದರಿಂದ ಮತ್ತಷ್ಟು ಖ್ಯಾತಿ ಸಿಕ್ಕಿದೆ. ಈಗಾಗಲೇ 350 ಟನ್‌ಗಳಷ್ಟು ತುಪ್ಪ ತಿರುಪತಿಗೆ ಪೂರೈಕೆ ಮಾಡಲಾಗುತ್ತಿದೆ. ಮಕ್ಕಳ ಈ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಆ್ಯಡ್ ಐಡಿಯಾ ಇದರ ಮ್ಯಾನೇಜಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಮಾತನಾಡಿ, ಮಾಧ್ಯಮದ ಪ್ರಕಾರಗಳು ಡಿಜಿಟಲ್ ಮಾಧ್ಯಮದ ಮೂಲಕ ಮತ್ತಷ್ಟು ಖ್ಯಾತಿ ಗಳಿಸುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಉದಯವಾಣಿ ಡಿಜಿಟಲ್ ಮಾಧ್ಯಮ ಮತ್ತಷ್ಟು ಎತ್ತರಕ್ಕೆ ಏರುವಂತಾಗಲಿ ಎಂದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ವಿನೋದ್ ಕುಮಾರ್ ಮಾತನಾಡಿ, ಮಕ್ಕಳಿಗೆ ಈ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಉದಯವಾಣಿ ಡಾಟ್ ಕಾಂ ಉತ್ತಮ ವೇದಿಕೆ ಒದಗಿಸಿದೆ. ಸಂತೋಷ, ಸಂಸ್ಕೃತಿ, ಆಚಾರ-ವಿಚಾರ, ಪ್ರೀತಿ ಹಾಗೂ ಶ್ರಮ ಪ್ರತಿಯೊಂದು ರೀಲ್ಸ್‌ನಲ್ಲಿಯೂ ಕಂಡುಬಂದಿದೆ. ತೆರೆ ಹಿಂದಿನ ಪೋಷಕರ ಪರಿಶ್ರಮವೂ ಕಂಡುಬರುತ್ತಿದೆ. ಉತ್ಸಾಹ, ಶೃದ್ಧೆ ಹಾಗೂ ಉತ್ತಮ ಛಾಯಾಚಿತ್ರ ಕೌಶಲಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸ್ಪರ್ಧೆಗೆ ಭಾಗವಹಿಸುವುದೇ ವಿಜಯದ ಸಂಕೇತವಾಗಿದೆ ಎಂದರು.
ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಬಂಧಕಿ ಉಷಾರಾಣಿ ಕಾಮತ್ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.
ಬಹುಮಾನ ವಿಜೇತರ ವಿವರ
ಸುಗುಣಾ ಎಸ್.ಕೋಟ್ಯಾನ್ (ಪ್ರಥಮ), ಲಿಷಾನ್ ರೈ(ದ್ವಿತೀಯ), ಊರ್ವಿ ಆರ್.ಪೂಜಾರಿ(ತೃತೀಯ).
ಮೆಚ್ಚುಗೆ ಗಳಿಸಿದ ರೀಲ್ಸ್‌ಗಳು
ವೇದಾಂತ್ ವಿಕಾಸ್ ಬಳೇರಿ, ಚಿಯಾ ಎನ್.ಬಂಗೇರ, ಅರ್ಥ ಸಮರ್ಥ ಶೆಟ್ಟಿ, ಸ್ಕಂದಾ ಎಸ್.ಮೂಲ್ಯ, ನಿಶ್ವಿತ್ ಶೆಟ್ಟಿ, ಸನ್ನಿಧಿ ಎನ್.ಭಟ್, ಶ್ರೀಯಾನ್ ಯು.ಆರ್., ದಿಯಾನ್ಶ್ ಎಸ್., ಆಶ್ವಿ ರೈ, ಸವಿನ್ ಎಸ್.ಶೆಟ್ಟಿ, ಲಿನಿಶ್ ಎಲ್.ಎಸ್., ರಿದ್ಧಿ ಕಾಮತ್.
ಈ ರೀಲ್ಸ್ ಮಾಡುವುದರ ಹಿಂದೆ ಪತ್ನಿಯ ಶ್ರಮ ಅತ್ಯಧಿಕವಾಗಿತ್ತು. ಇದಕ್ಕಾಗಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಶ್ರಮಿಸಿದ್ದೆವು. ಪ್ರಶಸ್ತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಆದರೆ ಪ್ರಥಮ ಪ್ರಶಸ್ತಿ ಬಂದಿರುವುದು ಮತ್ತಷ್ಟು ಖುಷಿ ನೀಡಿದೆ.
-ಶರಣ್ ಪಿ., ಅರ್ಪಿತಾ (ಪ್ರಥಮ ಬಹುಮಾನ ವಿಜೇತರ ಹೆತ್ತವರು)
ಇನ್‌ಸ್ಟಾಗ್ರಾಂ ಮೂಲಕ ವಿವಿಧ ರೀತಿಯ ರೀಲ್ಸ್‌ಗಳನ್ನು ಮಾಡುತ್ತಿದ್ದೆವು. ಈ ವೇಳೆ ಉದಯವಾಣಿಯ ರೀಲ್ಸ್ ಸ್ಫರ್ಧೆಯ ಬಗ್ಗೆ ಗಮನಕ್ಕೆ ಬಂದು. ಅನಂತರ ಇದಕ್ಕಾಗಿ ಒಂದು ವೀಡಿಯೋ ತುಣುಕು ಮಾಡಿ ಕಳುಹಿಸಿದೆವು. ಕೆಲವು ದಿನಗಳಲ್ಲಿ ನಮ್ಮ ವೀಡಿಯೋ ಆನ್‌ಲೈನ್‌ನಲ್ಲಿ ಭಿತ್ತಾರಗೊಂಡಿದ್ದು, ಖುಷಿ ನೀಡಿತು.
-ಶೈಲೇಷ್ ಪಿ., ಅಕ್ಷತಾ ಕೆ., (ದ್ವಿತೀಯ ಬಹುಮಾನ ವಿಜೇತರ ಹೆತ್ತವರು)
ಸ್ವಂತ ಪರಿಕಲ್ಪನೆಯಡಿ ಈ ರೀಲ್ಸ್ ಮಾಡಿಕೊಂಡಿದ್ದೇವೆ. ಈ ಕಾರ್ಯಕ್ರಮದ ಮೂಲಕ ಸ್ಫರ್ಧಾ ಮನೋಭಾವ ಬೆಳೆದಿದೆ.
-ರತ್ನಾಕರ ಪೂಜಾರಿ, ಉಷಾ (ತೃತೀಯ ಬಹುಮಾನ ವಿಜೇತರ ಹೆತ್ತವರು)