Advertisement

Udayavani Campaign:10 ಕಿ.ಮೀ. ನಡೆಯುವ ಮಕ್ಕಳು!ಹಂಜಾ, ಎಡ್ಮಲೆ ಭಾಗದ ಕಾಡಿನ ಕಥೆ…

11:26 AM Jun 26, 2024 | Team Udayavani |

ಕುಂದಾಪುರ: ನಕ್ಸಲ್‌ ಬಾಧಿತ ಗ್ರಾಮವೆಂಬ ಹಣೆಪಟ್ಟಿ ಹೊತ್ತಿರುವ, ಪಶ್ಚಿಮ ಘಟ್ಟದ ತಪ್ಪಲಿನ ಮಡಾಮಕ್ಕಿ ಗ್ರಾಮದ ಮಕ್ಕಳಿಗೆ ಕಲಿಕೆಗಿಂತಲೂ ಬೆಳಗ್ಗೆ ಮನೆಯಿಂದ ಶಾಲೆಗೆ, ಸಂಜೆ ಶಾಲೆಯಿಂದ ಮನೆಗೆ ಹೋಗುವುದೇ ಬಲು ದೊಡ್ಡ ಸಾಹಸದ ಕೆಲಸ. ಕೆಲವು ಊರಿನ ಮಕ್ಕಳಿಗಂತೂ ನಿತ್ಯ ಸಂಜೆ ಶಾಲೆಯಿಂದ ಮನೆಗೆ 10-12 ಕಿ.ಮೀ. ನಡೆದುಕೊಂಡೇ ಹೋಗಲೇಬೇಕಾದ ಅನಿವಾರ್ಯ
ಪರಿಸ್ಥಿತಿಯಿದೆ.

Advertisement

ಮಡಾಮಕ್ಕಿ ಗ್ರಾಮದ ಹಂಜಾ, ಎಡ್ಮಲೆ, ಕಾರಿಮನೆ, ಕಾಸನಮಕ್ಕಿಯ ಮಕ್ಕಳು ಪ್ರೌಢಶಾಲೆ ಬೇಕಾದರೆ ಆರ್ಡಿಗೆ ಹೋಗಬೇಕು. ಅವರು ಬೆಳ ಗ್ಗೆ ಹಂಜದಿಂದ 5 ಕಿ.ಮೀ. ನಡೆದುಕೊಂಡೇ ಮಡಾಮಕ್ಕಿ ತಲುಪಬೇಕು. ಮಡಾಮಕ್ಕಿ ಯಿಂದ ಆರ್ಡಿಗೆ ಬೆಳಗ್ಗೆ ಒಂದು ಖಾಸಗಿ ಬಸ್‌ ಇದೆ. ಅದರಲ್ಲಿ 5 ಕಿ.ಮೀ. ಸಾಗಿ ಆರ್ಡಿ ತಲುಪಬೇಕು. ಆದರೆ, ಸಂಜೆ ಆರ್ಡಿಯಿಂದ ಮಡಾ ಮಕ್ಕಿಗೆ ಬಸ್ಸಿಲ್ಲ. ಅವರು ಮಣ ಭಾರದ ಬ್ಯಾಗ್‌ ಹೊತ್ತು ಆರ್ಡಿಯಿಂದ ಮಡಾಮಕ್ಕಿಗೆ, ಅಲ್ಲಿಂದ ಹಂಜಕ್ಕೆ ಒಟ್ಟು ಹತ್ತು ಕಿ.ಮೀ. ನಡೆಯಬೇಕು. ಬರುವಾಗ ದಾರಿಯಲ್ಲಿ ಸಿಗುವ ವಾಹನಗಳಿಗೆ ಕೈ ಹಿಡಿಯುತ್ತಾರೆ. ಯಾರಾದರೂ ನಿಲ್ಲಿಸಿದರೆ ಉಂಟು! ಮಡಾಮಕ್ಕಿವರೆಗೆ ಕೆಲವೊಮ್ಮೆ ರಿಕ್ಷಾ ಸಿಗುತ್ತದೆ. ಆದರೆ, ಮಡಾಮಕ್ಕಿಯಿಂದ ಹಂಜಕ್ಕೆ ರಿಕ್ಷಾ ಕೂಡಾ ಇಲ್ಲ. ಯಾಕೆಂದರೆ ಈ ಒಳ ರಸ್ತೆ ರಿಕ್ಷಾ ಕೂಡಾ ಓಡಾಡಲಾಗದಷ್ಟು ಹಾಳಾಗಿದೆ.

ಬೆಳಗ್ಗೆ 1 ಬಸ್‌, ಸಂಜೆ ಬಸ್ಸೇ ಇಲ್ಲ!
ಹಂಜಾ, ಕಾರಿಮನೆ, ಎಡ್ಮಲೆ ಸುತ್ತಮುತ್ತಲಿನ 6-7 ಕಿ.ಮೀ. ಆಸುಪಾಸಿನ ಮಕ್ಕಳು ಬಸ್‌ ಹತ್ತಬೇಕಾದರೆ ಮಡಾಮಕ್ಕಿಗೆ ಹೋಗಬೇಕು. ಅದು ಖಾಸಗಿ ಬಸ್‌ ಮಾತ್ರ. ಹೆಬ್ರಿ ಹಾಗೂ ಕುಂದಾಪುರಕ್ಕೆ ಬೆಳಗ್ಗಿನಿಂದ ಮಧ್ಯಾಹ್ನದವರಗೆ ಸೀಮಿತ ಸಂಖ್ಯೆಯ ಬಸ್‌ ಇದೆ. ಇನ್ನು ಸೋಮೇಶ್ವರ ಮಾರ್ಗವಾಗಿ ಹೆಬ್ರಿಗೆ ಹೋಗಲು ಮಡಾಮಕ್ಕಿಯಿಂದ ಮಧ್ಯಾಹ್ನ ನಂತರ ಯಾವುದೇ ಬಸ್‌ ಇಲ್ಲ. ಕುಂದಾಪುರ- ಹಾಲಾಡಿ- ಗೋಳಿಯಂಗಡಿ – ಬೆಳ್ವೆ – ಮಡಾಮಕ್ಕಿ – ಮಾಂಡಿ ಮುರುಕೈ- ಸೋಮೇಶ್ವರ -ಹೆಬ್ರಿ ಮಾರ್ಗದಲ್ಲಿ
ಇನ್ನಷ್ಟು ಬಸ್‌ಗಳು ಸಂಚರಿಸಲಿ ಎನ್ನುವುದು ಈ ಭಾಗದ ಜನರ ಬಹುಮುಖ್ಯ ಬೇಡಿಕೆಯಾಗಿದೆ.

ಮನೆಗೊಬ್ಬರು ಬಂದು ನಿಲ್ಲಬೇಕು…
ಆರ್ಡಿಯಿಂದ ಮಡಾಮಕ್ಕಿಗೆ ಹೇಗೋ ಬಂದು ಅಲ್ಲಿಂದ ಐದು ಕಿ.ಮೀ ನಡೆದು ಮನೆ ಸೇರು ವುದು ಎಂದರೆ ಕತ್ತಲಾಗಿ ಬಿಡುತ್ತದೆ. ಹೀಗಾಗಿ ಇಲ್ಲಿನ ಪ್ರತಿ ಮನೆಯವರು ಮಕ್ಕಳು ಸಂಜೆ ವಾಪಾಸು ಬರುವಾಗ ಅವರನ್ನು ಕರೆದುಕೊಂಡು ಬರಲು ಅರ್ಧ ದಾರಿಯವರೆಗೆ ಹೋಗಲೇಬೇಕಾಗಿದೆ. ಕೆಲವು ಮಕ್ಕಳಂತೂ ದಾರಿಯಲ್ಲಿ ಯಾರಾದರೂ ಬೈಕ್‌ನವರು ಸಿಕ್ಕರೆ ಅವರನ್ನು ಅಡ್ಡಹಾಕಿ, ಕರ್ಕೊಂಡು ಹೋಗಿ ಅನ್ನುವುದಾಗಿ ಕೇಳಬೇಕಾದ ಸ್ಥಿತಿ.

ಇದು ಬರೀ 50 ಮಕ್ಕಳ ಕಥೆಯಲ್ಲ!
ಮಡಾಮಕ್ಕಿ, ಕಾಸನಮಕ್ಕಿ, ಹಂಜಾ, ಎಡ್ಮಲೆ, ಕಾರಿಮನೆ, ಕುಂಟಮಕ್ಕಿ, ನಡುಬೆಟ್ಟು, ಮಾರ್ಮಣ್ಣು, ಕಬ್ಬಿನಾಲೆ, ಶಿರಂಗೂರು ಭಾಗದ ಮಕ್ಕಳು ಪ್ರೌಢಶಾಲೆಗೆ ಆರ್ಡಿ ಅಥವಾ ಹೆಬ್ರಿಗೆ ಹೋಗಬೇಕು. ಇನ್ನು ಪಿಯುಸಿ, ಪದವಿಗೆ ಹಾಲಾಡಿ, ಗೋಳಿಯಂಗಡಿ, ಹೆಬ್ರಿ, ಕುಂದಾಪುರ, ಕೋಟೇಶ್ವರ, ಬಿದ್ಕಲ್‌ಕಟ್ಟೆಯ ಐಟಿಐ ಕಾಲೇಜಿಗೆ ಹೋಗುವವರು ಇದ್ದಾರೆ. ಒಟ್ಟಾರೆ 50-60 ಮಕ್ಕಳು
ಬೇರೆ ಬೇರೆ ಕಡೆಗೆ ಮಡಾಮಕ್ಕಿಯಿಂದ ವ್ಯಾಸಂಗಕ್ಕೆ ತೆರಳುವವರು ಇದ್ದಾರೆ. ಸರಿಯಾದ ಸಮಯಕ್ಕೆ ಬಸ್ಸಿಲ್ಲದೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸಂಜೆಯ ಬಸ್‌ ನಲ್ಲಂತೂ ನಿಲ್ಲಲು ಜಾಗವಿಲ್ಲದ ಸ್ಥಿತಿ, ನೇತಾಡಿಕೊಂಡೇ ಬರಬೇಕಾಗಿದೆ. ಕೆಲವು ದಿನವಂತೂ ಕೊನೆಯ ಬಸ್‌ ಇದ್ದರೆ ಆಯಿತು, ಇಲ್ಲದಿದ್ದರೂ ಆಯಿತು ಅನ್ನುವ ಪರಿಸ್ಥಿತಿ. ಆ ಬಸ್ಸನ್ನು ನಂಬಿಕೊಂಡು ಕುಳಿತುಕೊಳ್ಳುವಂತಿಲ್ಲ.

Advertisement

ಕೆಸರುಮಯ ರಸ್ತೆಯಲ್ಲಿ ನಡೆಯುವುದೇ ಕಷ್ಟಕರ…
ನಮಗೆ ಹಂಜಾ ಭಾಗದಿಂದ ಆರ್ಡಿ ಪ್ರೌಢಶಾಲೆಗೆ ಹೋಗಬೇಕು. ಒಟ್ಟು 10 ಕಿ.ಮೀ. ದೂರವಿದೆ. ಅದರಲ್ಲಿ 5 ಕಿ.ಮೀ. ನಡೆದುಕೊಂಡು ಹೋಗಿ, ಮಡಾಮಕ್ಕಿಗೆ ಹೋಗಬೇಕು. ಅದಕ್ಕೆ ಮನೆಯಿಂದ 7.15ಗೆ ಹೊರಡಬೇಕು. ಮಡಾಮಕ್ಕಿಯಲ್ಲಿ ಮತ್ತೆ ಮುಕ್ಕಾಲು ಗಂಟೆ ಬಸ್‌, ರಿಕ್ಷಾಕ್ಕಾಗಿ ಕಾಯಬೇಕು. ಮಳೆಗಾಲದಲ್ಲಿ ರಸ್ತೆಯೆಲ್ಲ ಕೆಸರುಮಯ. ಶಾಲಾ – ಕಾಲೇಜಿನ 20-25 ಮಂದಿ ವಿದ್ಯಾರ್ಥಿಗಳಿದ್ದಾರೆ. ನಡೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಬಸ್‌ಗಿಂತಲೂ ಮೊದಲು ನಮ್ಮ ಈ ರಸ್ತೆಯೊಂದು ಅಭಿವೃದ್ಧಿಯಾಗಲಿ. ಮಡಾಮಕ್ಕಿಗೆ ಬೆಳಗ್ಗೆ 8 ಅಥವಾ 8.15 ಕ್ಕೆ ಹಾಗೂ ಸಂಜೆ 4 ಗಂಟೆಗೆ ಬಸ್‌ ಬಿಟ್ಟರೆ ನಮಗೆ ತುಂಬಾ ಅನುಕೂಲವಾಗಲಿದೆ ಎನ್ನುವುದಾಗಿ ಹಂಜಾ, ಕಾರಿಮನೆ ಭಾಗದಿಂದ ಆರ್ಡಿ ಪ್ರೌಢಶಾಲೆಗೆ ಹೋಗುವ 10 ನೇ ತರಗತಿ
ವಿದ್ಯಾರ್ಥಿನಿ ಸಾರಿಕಾ ತಮ್ಮ ಸಮಸ್ಯೆ, ಬಸ್‌ ಬೇಡಿಕೆ ವ್ಯಕ್ತಪಡಿಸುವುದು ಹೀಗೆ.

ಮುಂದಿನ ದಿನಗಳಲ್ಲಿ ಹೋರಾಟ
ನಾವು ಸಾಕಷ್ಟು ಬಾರಿ ಮಡಾಮಕ್ಕಿ ಭಾಗಕ್ಕೆ ಹೆಚ್ಚುವರಿ ಬಸ್‌, ಮುಖ್ಯವಾಗಿ ಒಂದೆರಡು ಆದರೂ ಕೆಎಸ್‌ಆರ್‌ ಟಿಸಿ ಬಸ್‌ ಆರಂಭಿಸಿ ಎಂದು ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ಆದರೆ ಈವರೆಗೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು.
*ಸುಮಂತ್‌ ಶೆಟ್ಟಿ ಹಂಜಾ,
ಎನ್‌ಎಸ್‌ಯುಐನ ಜಿಲ್ಲಾ ಕಾರ್ಯದರ್ಶಿ

ಕೆಎಸ್‌ ಆರ್‌ ಟಿಸಿ ಬಸ್‌ ಬೇಡಿಕೆ
ಶಾಲಾ – ಕಾಲೇಜು ಮಕ್ಕಳ ಅನುಕೂಲಕ್ಕಾಗಿ ಕುಂದಾಪುರ – ಮಡಾಮಕ್ಕಿ – ಆಗುಂಬೆ ಮಾರ್ಗವಾಗಿ ಒಂದು ಕೆಎಸ್‌ ಆರ್‌ಟಿಸಿ ಬಸ್‌ ಹಾಗೂ ಹೆಬ್ರಿ- ಆಗುಂಬೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸನ್ನು ಮಡಾಮಕ್ಕಿ ಮಾರ್ಗವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಿದರೆ ಇಲ್ಲಿ ಮಕ್ಕಳಿಗೆ, ಗ್ರಾಮಸ್ಥರಿಗೆ ವಿಮಾನ ಬಂದಷ್ಟೇ ಖುಷಿಯಾಗುವುದರಲ್ಲಿ ಸಂಶಯವಿಲ್ಲ.

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next