Advertisement

ಉದಯವಾಣಿ ರೈತಸೇತು: ವೈಜ್ಞಾನಿಕ ಕ್ರಮದಿಂದ ಉತ್ತಮ ಲಾಭ

09:10 PM Aug 12, 2020 | mahesh |

ಉಡುಪಿ: ಕರಾವಳಿಯಲ್ಲಿ ಗೋಡಂಬಿ ಬಿಟ್ಟರೆ ತೋಟಗಾರಿಕೆ ಬೆಳೆಯಾಗಿ ತೆಂಗು ಗುರುತಿಸಿಕೊಂಡಿದೆ. ತೆಂಗಿನ ತೋಟ ಅಭಿವೃದ್ಧಿಪಡಿಸುವಾಗ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡುವುದರ ಜತೆಗೆ ವೈಜ್ಞಾನಿಕ ಕ್ರಮ ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಉತ್ಪಾದನೆ ಮಾಡಿ ಅಧಿಕ ಇಳುವರಿ ಸಿಗಲಿದೆ. ವಿವಿಧ ಮಣ್ಣಿನಲ್ಲಿ ಬೆಳೆಯಬಹುದುತೆಂಗನ್ನು ವಿವಿಧ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ನೀರು ಬಸಿದು ಹೋಗುವ ಆಳವಾದ ಮರಳು ಮಿಶ್ರಿತ ಗೋಡು, ಜಂಬಿಟ್ಟಿಗೆ ಮತ್ತು ಕೆಂಪುಗೋಡು ಮಣ್ಣು ತೆಂಗನ್ನು ಬೆಳೆಸಲು ಯೋಗ್ಯವಾಗಿದೆ. ಜೇಡಿ ಮಣ್ಣು ಮತ್ತು ನೀರು ನಿಲ್ಲುವ ಪ್ರದೇಶಗಳಲ್ಲಿ ತೆಂಗು ಹುಲುಸಾಗಿ ಬೆಳೆಯುವುದಿಲ್ಲ. ಇದು ಉಷ್ಣವಲಯದ ಬೆಳೆಯಾಗಿದ್ದು, ಹೆಚ್ಚು ಬೆಳಕು ಬೇಕು. ಉತ್ತಮ ಇಳುವರಿಗೆ ಬೇಸಗೆ ಕಾಲದಲ್ಲಿ ನೀರಾವರಿ ಅತ್ಯಗತ್ಯ.

Advertisement

ಯಾವಾಗ ನಾಟಿ?
ಮಳೆಗಾಲದಲ್ಲಿ ಪ್ರತಿವರ್ಷ 80-100 ಕಾಯಿ ಬಿಡುವ 20-40 ವರ್ಷದ ಆರೋಗ್ಯವಾದ ಮರಗಳಿಂದ ಗೋಲಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿತ್ತನೆಗೆ ಆಯ್ಕೆ ಮಾಡಬೇಕು. ಅಕ್ಟೋಬರ್‌ನಿಂದ ಮಾರ್ಚ್‌ ವರೆಗೆ ಬರುವ ಕಾಯಿಗಳನ್ನು ಬಿತ್ತನೆಗೆ ಉಪಯೋಗಿಸಬೇಕು. ನಾಟಿ ಮಾಡಲು ಜೂನ್‌ -ಜುಲೈ ತಿಂಗಳು ಸೂಕ್ತವಾದ ಸಮಯ.

ಆರೈಕೆ ಹೇಗಿರಬೇಕು?
ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ 5-10 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಇಳುವರಿ ಕೊಡುವ ಮರಗಳಿಗೆ ದಿನಕ್ಕೆ 40ರಿಂದ 50 ಲೀ. ನೀರು ಒದಗಿಸಬೇಕು. ಗಿಡದ ಸುತ್ತಲೂ 1.50 ಮೀ.ನಿಂದ 2 ಮೀ. ಸುತ್ತಳತೆ ಪಾತಿಗಳನ್ನು ಮಾಡಿ, ಪಾತಿಯಲ್ಲಿ ಗೊಬ್ಬರ ಮತ್ತು ನೀರು ಕೊಡುವುದು ಉತ್ತಮ.

ಮಿಶ್ರ ಬೆಳೆ
ತೆಂಗು ಬೆಳೆಯ ಮಧ್ಯೆ ಪ್ರದೇಶಕ್ಕನುಗುಣವಾಗಿ ದ್ವಿದಳ ಧಾನ್ಯ, ತರಕಾರಿ ಬೆಳೆ ಹಾಗೂ ಅರಿಶಿನ, ಶುಂಠಿ ಬೆಳೆಗಳನ್ನು ಪ್ರಾರಂಭದ 10 ವರ್ಷಗಳವರೆಗೆ ಬೆಳೆಸಬಹುದು. ಜತೆಗೆ ಬಾಳೆ, ಪಪಾಯ, ಅನಾನಸ್‌, ಹಿಪ್ಪುನೇರಳೆ, ಕೋಕೊ, ಕರಿಮೆಣಸು, ದಾಲ್ಚಿನ್ನಿ, ಹಿಪ್ಪಲಿ, ಮತ್ತಿ, ಕಾಫಿ ಬೆಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಸ ಬಹುದು.

ಉತ್ತಮ ಇಳುವರಿಗೆ ಪೊಟ್ಯಾಶಿಯಂ ಹಾಗೂ ಸುಣ್ಣವನ್ನು ಮಣ್ಣಿಗೆ ಸೇರಿಸಬೇಕು. 20 ವರ್ಷದ ತೆಂಗಿನ ಮರಕ್ಕೆ ವರ್ಷಕ್ಕೆ 4 ಕೆ.ಜಿ. ಹಾಗೂ 10ಕ್ಕಿಂತ ಕಡಿಮೆ ವರ್ಷದ ಮರಕ್ಕೆ 2 ಕೆ.ಜಿ. ವರ್ಷದಲ್ಲಿ ಎರಡು ಬಾರಿ ಪೊಟ್ಯಾಶಿಯಂ ಮಣ್ಣಿಗೆ ಸೇರ್ಪಡೆ ಮಾಡಬೇಕು. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ. ಸುಣ್ಣವನ್ನು ಹಾಕುವ ಮೂಲಕ ಹುಳುಗಳಿಂದ ರಕ್ಷಣೆ ಪಡೆಯಲು ಸಾಧ್ಯ.
-ಡಾ| ಜಯಪ್ರಕಾಶ,  ಮಣ್ಣು ವಿಜ್ಞಾನಿ , ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

Advertisement

ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ 08202563923 ಸಂಪರ್ಕಿಸಿ.

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ

ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.

ವಾಟ್ಸಪ್‌ ಸಂಖ್ಯೆ 76187 74529

Advertisement

Udayavani is now on Telegram. Click here to join our channel and stay updated with the latest news.

Next