ಹೊಸದಿಲ್ಲಿ : ಕೈಗೆಟಕುವ ದರಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ ಕೈಗೊಳ್ಳಬೇಕೆಂಬ ನಿಮ್ಮ ಬಹುದಿನಗಳ ಕನಸು ಈಗಿನ್ನು ಶೀಘ್ರವೇ ಈಡೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಡಾನ್ (“ಉಡೇ ದೇಶ್ ಕಾ ಆಮ್ ನಾಗರಿಕ್’) ಯೋಜನೆಯ ಮೂರನೇ ಹಂತದಡಿ ಅಂತಾರಾಷ್ಟ್ರೀಯ ವಾಯು ಮಾರ್ಗಗಳ ಪಟ್ಟಿ ಅಂತಿಮಗೊಳ್ಳುತ್ತಿದೆ.
ಮೂರನೇ ಹಂತದ ಉಡಾನ್ ಸ್ಕೀಮಿನಡಿ ಸರಕಾರ ಈಗಾಗಲೇ 100ಕ್ಕೂ ಅಧಿಕ ಪ್ರಸ್ತಾವಗಳನ್ನು ಸ್ವೀಕರಿಸಿದೆ. ಈಗ ದೊರಕಿರುವ ಮಾಹಿತಿಗಳ ಪ್ರಕಾರ ಉಡಾನ್ ಯೋಜನೆಯಡಿ ಅಸ್ಸಾಂ ಗೆ ಅಂತಾರಾಷ್ಟ್ರೀಯ ವಿಮಾನಯಾನ ಸಂಪರ್ಕ ಲಭಿಸಲಿದೆ. ಅಂತೆಯೇ ಅಸ್ಸಾಂನಿಂದ ಉಡಾನ್ ಯೋಜನೆಯಡಿ ಬ್ಯಾಂಕಾಕ್, ಥಾಯ್‌ಲ್ಯಾಂಡ್ ಮತ್ತು ಕಾಠ್ಮಂಡು ಗೆ ವಿದೇಶ ವಿಮಾನ ಯಾನ ಕೈಗೊಳ್ಳಬಹುದಾಗಿದೆ.
ಇದೇ ರೀತಿ ಬಿಹಾರ ವಿಮಾನ ನಿಲ್ದಾಣಗಳಿಂದಲೂ ನೇಪಾಲ, ಬಾಂಗ್ಲಾದೇಶ, ಮ್ಯಾನ್ ಮಾರ್‌ಗೆ ಅಂತಾರಾಷ್ಟ್ರೀಯ ವಿಮಾನ ಯಾನ ಕೈಗೊಳ್ಳಬಹುದಾಗಿರುತ್ತದೆ. ಅಂತೆಯೆ ಚೆನ್ನೈನಿಂದ ಸಿಂಗಾಪುರಕ್ಕೆ ವಿದೇಶ ವಿಮಾನಯಾನ ಕೈಗೊಳ್ಳಬಹುದಾಗಿರುತ್ತದೆ.
ಉಡಾನ್ ಯೋಜನೆಗೆ 2016ರಲ್ಲಿ ಚಾಲನೆ ನೀಡಲಾಗಿತ್ತು. ಇದರಿಂದಾಗಿ ಸಾಮಾನ್ಯ ಜನರು ರಿಯಾಯಿತಿ ದರದ (ಸಹಾಯಧನದ) ಟಿಕೆಟ್‌ಗಳಲ್ಲಿ ವಿಮಾನ ಯಾನ ಕೈಗೊಳ್ಳಬಹುದಾಗಿದೆ. ದೇಶದ ಸಣ್ಣ ಪಟ್ಟಗಳನ್ನು ವೈಮಾನಿಕವಾಗಿ ಜೋಡಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ಮೂಲ ಉದ್ದೇಶ ದೇಶದ ಮುಖ್ಯ ನಗರಗಳನ್ನು ಎರಡನೇ ಮತ್ತು ಮೂರನೇ ವರ್ಗದ ನಗರಗಳೊಂದಿಗೆ ಕೇವಲ 2,500 ರೂ ವೆಚ್ಚದಲ್ಲಿ ಒಂದು ತಾಸಿನ ವಿಮಾನಯಾನದ ಮೂಲಕ ಸಂಪರ್ಕಿಸುವುದೇ ಆಗಿದೆ.
2017ರ ಮಾರ್ಚ್‌ನಲ್ಲಿ ನಡೆಸಲಾದ ಮೊದಲ ಹಂತದ ಬಿಡ್ಡಿಂಗ್ ನಲ್ಲಿ ಐದು ವಿಮಾನಯಾನ ಸಂಸ್ಥೆಗಳಿಗೆ 128 ಪ್ರಾದೇಶಿಕ ಮಾರ್ಗಗಳಲ್ಲಿ ಹಾರಾಟ ನಡೆಸುವುದಕ್ಕೆ ಅನುಮತಿ ನೀಡಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎರಡನೇ ಹಂತದದಲ್ಲಿ 15 ವಿಮಾನಯಾನ ಸಂಸ್ಥೆಗಳಿಗೆ 325 ಪ್ರಾದೇಶಿಕ ಮಾರ್ಗಗಳಲ್ಲಿ ಹಾರಾಟ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.