ರಾಜಸ್ಥಾನ: ಉದಯಪುರದಲ್ಲಿ ಹಾಡಹಗಲೇ ಟೈಲರ್ ಕನ್ನಯ್ಯಲಾಲ್ ಅವರನ್ನು ಪೈಶಾಚಿಕ ರೀತಿಯಲ್ಲಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಗುರುವಾರ (ಜೂನ್ 30) ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಉದಯಪುರದಲ್ಲಿ ವಿವಿಧ ಹಿಂದೂ ಸಂಘಟನೆಗಳ ಸಾವಿರಾರು ಮಂದಿ ನ್ಯಾಯ ಕೊಡಿಸಿ ಎಂದು ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭೀಬತ್ಸ ಘಟನೆ ನಡೆದ ಸ್ಥಳದತ್ತ ಪ್ರತಿಭಟನಾಕಾರರು ತೆರಳಿದ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿರುವುದಾಗಿ ವರದಿ ವಿವರಿಸಿದೆ. ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ಫ್ಯೂ ಇದ್ದಾಗ ಪ್ರತಿಭಟನೆ ನಡೆಸಿದ್ದು ಹೇಗೆ?
ಕನ್ನಯ್ಯಲಾಲ್ ಹತ್ಯೆಯ ನಂತರ ರಾಜಸ್ಥಾನದ ಉದಯಪುರ ಸೇರಿದಂತೆ ಹಲವು ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆದರೂ ಮೆರವಣಿಗೆಗೆ ಅವಕಾಶ ಹೇಗೆ ನೀಡಲಾಯಿತು ಎಂದು ಪ್ರಶ್ನೆ ಮೂಡಿರುವುದಾಗಿ ವರದಿ ತಿಳಿಸಿದೆ. ಉದಯಪುರದಲ್ಲಿ ಎಲ್ಲಾ ಅಂಗಡಿ, ಮುಂಗಟ್ಟು ಬಂದ್ ಆಗಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.