Advertisement

ಬೈಂದೂರು, ಕಾರವಾರದಲ್ಲಿ ಉಡಾನ್‌ ನಿಲ್ದಾಣ: ಶೆಟ್ಟರ್‌

11:27 PM Mar 21, 2021 | Team Udayavani |

ಮಂಗಳೂರು: ಉಡಾನ್‌ ಯೋಜನೆಯಡಿ ಬೈಂದೂರು ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ಚಿಂತನೆ ಇದೆ ಎಂದು ಮಧ್ಯಮ ಮತ್ತು ಭಾರೀ ಕೈಗಾರಿಕೆ ಖಾತೆಯ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

Advertisement

ಬೆಂಗಳೂರು  ಕೇಂದ್ರಿತವಾಗಿದ್ದ ಕೈಗಾರಿಕೆಗಳನ್ನು 2-3ನೇ ಹಂತದ ನಗರಗಳಿಗೂ ವಿಸ್ತರಿಸಲು ಸರಕಾರ ಆದ್ಯತೆ ನೀಡಲಿದೆ. ಇದರಿಂದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಕೂಡ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಫೆಡರೇಶನ್‌ ಆಫ್‌ ಇಂಡಿಯನ್‌ ಚೇಂಬರ್ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ (ಫಿಕ್ಕಿ) ವತಿಯಿಂದ ನಗರದಲ್ಲಿ ರವಿವಾರ ಆಯೋಜಿಸಲಾದ “ಕರ್ನಾಟಕ ಕೋಸ್ಟ್‌ಲೈನ್‌ ಬಿಸಿನೆಸ್‌ ಕಾನ್‌ಕ್ಲೇವ್‌’ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಗರು ಶ್ರಮಜೀವಿಗಳು. ಹೀಗಾಗಿ ಕರಾವಳಿ ಶೈಕ್ಷಣಿಕ, ಆರ್ಥಿಕ ಪ್ರಗತಿ ಕಾಣುತ್ತಿದೆ. ಪ್ರವಾಸೋದ್ಯಮ ಕ್ಷೇತ್ರ ದಲ್ಲಿ ಕರಾವಳಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾಗಿದೆ. ಉತ್ತರ ಕನ್ನಡದ ಬೇಲೆಕೇರಿ ಬಂದರನ್ನು ಮೇಲ್ದರ್ಜೆಗೇರಿಸ ಲಾಗುವುದು ಎಂದರು.

ಬೆಳ್ತಂಗಡಿ, ಪುತ್ತೂರುಗಳಲ್ಲಿ ಉದ್ಯಮ :

Advertisement

ಉದ್ಯಮ ಸ್ಥಾಪನೆಗಾಗಿ ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ 200 ಎಕರೆ ಭೂಸ್ವಾಧೀನ ಮಾಡಲು ಈಗಾ ಗಲೇ ಸೂಚಿಸಲಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಲ್ಯಾಂಡ್‌ ಬ್ಯಾಂಕ್‌ಗಳನ್ನು ರಚಿಸಲಾಗುವುದು ಎಂದು ಜಗದೀಶ್‌ ಶೆಟ್ಟರ್‌ ತಿಳಿಸಿದರು.

“ಫಿಕ್ಕಿ’ ಕರ್ನಾಟಕ ಘಟಕದ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಭಾಗದಲ್ಲೂ ಬೃಹತ್‌ ವಾಣಿಜ್ಯ ವಲಯ ನಿರ್ಮಾಣ ಮಾಡುವ ಅಗತ್ಯವಿದೆ ಎಂದರು. ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ಮಂಗಳೂರು ಬಂದರು ವ್ಯಾಪ್ತಿ ಅಭಿವೃದ್ಧಿಗೆ 3,500 ಕೋ.ರೂ. ವಿನಿಯೋಗಿಸಿದರೆ ಮಂಗಳೂರು ಅದ್ವಿತೀಯ ನಗರವಾಗಿ ಮೂಡಿಬರಲಿದೆ ಎಂದರು. ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್‌ ಮಾತನಾಡಿ, ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ಯೋಜನೆಗೆ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುವುದು. ಉಪ್ಪುನೀರು ಸಂಸ್ಕರಣ ಘಟಕ ಶೀಘ್ರ ಪೂರ್ಣವಾಗಲಿದೆ ಎಂದರು.

ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಮಾತನಾಡಿ, ಕಳೆದ 2 ವರ್ಷಗಳಲ್ಲಿ ದ.ಕ ಜಿಲ್ಲೆಯ 6 ಕೈಗಾರಿಕೆಗಳ 582 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ ಎಂದರು. ಕರಾವಳಿಯ ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ವಿವಿಧ ಸಂಸ್ಥೆಯ ಪ್ರಮುಖರನ್ನು ಸಮ್ಮಾನಿಸಲಾಯಿತು.

ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌ ಅವರು ವಂದಿಸಿದರು. ಡಾ| ಸುಧೀರ್‌ ರಾಜ್‌ ಕೆ. ಕಾರ್ಯಕ್ರಮ ನಿರೂಪಿಸಿದರು.

ಗ್ರಾಮಾಂತರ ಭಾಗದಲ್ಲಿ ಉದ್ಯಮ: ಸಂಸದ ನಳಿನ್‌ :

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸುಳ್ಯ, ಪುತ್ತೂರು ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಉದ್ಯಮಗಳಿಗೆ ಅವಕಾಶ ಕಲ್ಪಿಸಿಕೊಡ ಬೇಕಾಗಿದೆ. ಧಾರ್ಮಿಕ, ಬೀಚ್‌ ಪ್ರವಾಸೋದ್ಯಮ ಹಾಗೂ ಮೆಡಿಕಲ್‌ ಟೂರಿಸಂ ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕಿದೆ. ಆಟೋಮೊಬೈಲ್‌, ಫುಡ್‌ ಪಾರ್ಕ್‌, ಪೆಟ್ರೋಲಿಯಂ ಸಂಬಂಧಿತ ಉದ್ದಿಮೆಗಳಿಗೆ ಕರಾವಳಿಯಲ್ಲಿ ಇನ್ನಷ್ಟು ಅವಕಾಶವಿದೆ. ಜಿಲ್ಲೆಯಲ್ಲಿ ಉದ್ಯಮಗಳಿಗಾಗಿ 2ಸಾವಿರ ಎಕರೆ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next