ಕೊಪ್ಪಳ: ಜಿಲ್ಲೆಗೆ ಘೋಷಣೆಯಾಗಿರುವ ಉಡಾನ್ ಯೋಜನೆಯನ್ನು ಉಳಿಸಿಕೊಳ್ಳುವ ಕುರಿತಂತೆ ಜಿಲ್ಲೆಯ ಪ್ರಮುಖರು ಸಭೆ ನಡೆಸಿ ಸಕಾರಾತ್ಮಕ ಚಿಂತನೆಯೊಂದಿಗೆ ಮುಂದಡಿ ಇಟ್ಟಿದ್ದಾರೆ. ಇದಕ್ಕೆ ಎಂಎಸ್‌ಪಿಎಲ್ ಕಂಪನಿಯು ಸಕಾರಾತ್ಮಕ ಸ್ಪಂದನೆ ತೋರುವ ಅಗತ್ಯವಿದೆ. ಇದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವೇಗ ಸಿಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾದವು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಡಾನ್ ಯೋಜನೆಯ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸಕಾರಾತ್ಮಕ ಮಾತುಗಳು ಪ್ರಸ್ತಾಪಕ್ಕೆ ಬಂದವು.
ಆರಂಭದಲ್ಲಿ ಹಿರಿಯ ವಕೀಲ ಆಸೀಫ್ ಅಲಿ ಮಾತನಾಡಿ, ಉಡಾನ್ ಯೋಜನೆಯು ಜಿಲ್ಲೆಗೆ ಘೋಷಣೆಯಾಗಿ ಮೂರು ವರ್ಷ ಗತಿಸಿವೆ. ಯೋಜನೆಯ ಅನುಷ್ಠಾನ ಆಗುವಲ್ಲಿ ವಿಳಂಬವಾಗಿದ್ದಕ್ಕೆ ನಾವೆಲ್ಲ ಸೇರಿ ಜಿಲ್ಲೆಗೆ ಮಂಜೂರಾದ ಯೋಜನೆ ಉಳಿಸಿಕೊಳ್ಳಬೇಕಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ವೇಗ ಸಿಗಲಿದೆ. ಜನರು ಕೂಡ ಯೋಜನೆ ಯಾವ ಹಂತದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎನ್ನುವ ಗೊಂದಲದಲ್ಲಿದ್ದಾರೆ. ಅಗತ್ಯವಿದ್ದರೆ ಸರ್ಕಾರದ ಮಟ್ಟದಲ್ಲಿ ನಾವು ಒತ್ತಾಯ ಮಾಡಿ ಅನುದಾನ ಸೇರಿ ಇತರೆ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ ಮಾಡಲಿದ್ದೇವೆ ಎಂದರು.
ಹಿರಿಯ ವಕೀಲ ಆರ್.ಬಿ. ಪಾನಘಂಟಿ ಮಾತನಾಡಿ, ಉಡಾನ್ ಯೋಜನೆಯು ಯಾವ ಕಾರಣಕ್ಕೆ ವಿಳಂಬವಾಗುತ್ತಿದೆಯೂ ಗೊತ್ತಾಗುತ್ತಿಲ್ಲ. ಇದನ್ನು ಕೇವಲ ಲಾಭದಾಯಕವಾಗಿ ನೋಡದೆ ಇಲ್ಲಿನ ಕೈಗಾರಿಕೆಗಳು, ಪ್ರವಾಸಿ ತಾಣಗಳಗಳ ದೂರದೃಷ್ಟಿಇಟ್ಟುಕೊಂಡು ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಚರ್ಚೆ ಮಾಡಬೇಕಿದೆ. ಕೊಪ್ಪಳ ಜಿಲ್ಲೆಯ ಜನರು ಹೋರಾಟದಲ್ಲಿ ಯಾವತ್ತು ಮುಂಚೂಣಿಯಲ್ಲಿದ್ದಾರೆ ಎಂದರು.
ಎಲ್ಲರ ಅಭಿಪ್ರಾಯದ ಬಳಿಕ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಮಾತನಾಡಿ, ಉಡಾನ್ ಯೋಜನೆಯ ಕುರಿತು ಚರ್ಚೆ ನಡೆದಿದೆ. ಇಲ್ಲಿನ ಜನರಲ್ಲಿ ಯೋಜನೆ ಜಾರಿಗೆ ಆಸಕ್ತಿಯ ಜೊತೆಗೆ ಪ್ರೋತ್ಸಾಹ ಹೆಚ್ಚಿದೆ. ಯೋಜನೆ ಅನುಷ್ಠಾನಕ್ಕೆ ವಿವಿಧ ಆಯಾಮದಲ್ಲಿಸಮಾಲೋಚನೆ ಮಾಡಬೇಕಿದೆ. ವಿವಿಧ ಇಲಾಖೆಗಳ ಸಮ್ಮತಿಯ ಜೊತೆಗೆ ಆರ್ಥಿಕ ಇಲಾಖೆ ಸಮ್ಮತಿಯುಬಹುಮುಖ್ಯವಾಗಿದೆ. ಜೊತೆಗೆ ಸರ್ಕಾರವೇ ವಿಮಾನ ನಿಲ್ದಾಣ ನಿರ್ವಹಣೆ ಮಾಡಲ್ಲ. ಈಗಿರುವ ಎಂಎಸ್‌ಪಿಎಲ್ ಕಂಪನಿಯೇ ನಿರ್ವಹಿಸಬೇಕಿದೆ. ಅಗತ್ಯ ಸೌಲಭ್ಯ ಸರ್ಕಾರದಿಂದ ಕಲ್ಪಿಸಬೇಕಾಗುತ್ತದೆ. ಕಂಪನಿಗೆ ಉಡಾನ್ ಯೋಜನೆಯಡಿ ಅನುಷ್ಟಾನಕ್ಕೆ ಏನೇಲ್ಲಾ ಬೇಡಿಕೆಯಿವೆ. ಅವುಗಳ ಕುರಿತು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಿ. ನಾವು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಈ ಹಿಂದೆಯೂ ಕಂಪನಿಯಿಂದ ಪ್ರಸ್ತಾವನೆ ಕೇಳಿದ್ದೆವು ಅವರು ಸಲ್ಲಿಸಿಲ್ಲ. ಯೋಜನೆಯ ಅನುಷ್ಠಾನದಲ್ಲಿ ಕಂಪನಿಯ ನಿಲುವೇನು? ಎಂದರಲ್ಲದೇ, ಕಂಪನಿ ಸಹ ಸಕಾರಾತ್ಮಕ ಸ್ಪಂದಿಸಬೇಕಾಗಿದೆ ಎಂದರು.
ಎಂಎಸ್‌ಪಿಎಲ್ ಕಂಪನಿ ಪ್ರತಿನಿಧಿ ಪ್ರಭು ಮಾತನಾಡಿ, 140 ಕಿಮೀ ಅಂತರದಲ್ಲಿ ಹುಬ್ಬಳ್ಳಿ ಹಾಗೂ ತೋರಣಗಲ್ ಬಳಿ ಎರಡು ವಿಮಾನ ನಿಲ್ದಾಣಗಳಿವೆ. ಹಾಗಾಗಿ ಎರಡೂ ನಿಲ್ದಾಣಕ್ಕೆ ಇಲ್ಲಿನ ಜನತೆ ರಸ್ತೆ ಮೂಲಕವೇ ಒಂದು ಗಂಟೆಯೊಳಗೆ ವಿಮಾನ ನಿಲ್ದಾಣ ತಲುಪಬಹುದು. ಇದೆಲ್ಲ ಸಾಧ್ಯತೆಗಳಿವೆ ಎಂದರಲ್ಲದೇ, ಇಲ್ಲಿ ವಿಮಾನ ನಿಲ್ದಾಣದ ಅಗತ್ಯವೆನಿಸಲ್ಲ ಎಂಬ ಮಾತನ್ನಾಡಿದರು.
ಸಭೆಯಲ್ಲಿ ಶ್ರೀನಿವಾಸ್ ಗುಪ್ತಾ, ಕೆ.ಎಂ. ಸೈಯದ್, ಪೀರಾ ಹುಸೇನ್ ಹೊಸಳ್ಳಿ, ಡಾ| ಕೆ.ಜಿ. ಕುಲಕರ್ಣಿ, ಬಸವರಾಜ ಬಳ್ಳೊಳ್ಳಿ, ಮಹೇಶ ಮುದಗಲ್, ಪ್ರವೀಣ ಮೆಹ್ತಾ, ಸಿದ್ದಣ್ಣ ನಾಲ್ವಾಡ್, ಶಾಹೀದ್ ತಹಶೀಲ್ದಾರ್, ಅಲೀಮುದ್ದೀನ್, ಸಂಜಯ ಕೊತಬಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.