ಕಾಪು: ಉಚ್ಚಿಲ ಪಣಿಯೂರು ಮುದರಂಗಡಿ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯತ್ತ ಚಾಚಿರುವ ಗಿಡ ಮರಗಳ ಪೊದೆ, ಇಕ್ಕೆಲಗಳ ಚರಂಡಿಯನ್ನು ಶುಚಿಗೊಳಿಸುವತ್ತ ಲೋಕೋಪಯೋಗಿ ಇಲಾಖೆ ಕೊನೆಗೂ ಗಮನಹರಿಸಿದೆ.
ಉಚ್ಚಿಲದಿಂದ ಮುದರಂಗಡಿ ವರೆಗಿನ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಜೆಸಿಬಿ ಮೂಲಕ ಶುಚಿತ್ವ ಕಾಮಗಾರಿ ಭರದಿಂದ ಸಾಗುತ್ತಿದೆ. ಮಳೆ ಪ್ರಮಾಣವೂ ಕಡಿಮೆಯಾಗಿರುವುದ ರಿಂದ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗಿದೆ.
ಆದರೆ ಕೆಲವು ಕಡೆಗಳಲ್ಲಿ ಮಾತ್ರ ಈ ಇಕ್ಕೆಲಗಳ ಚರಂಡಿ ಬಿಡಿಸುವ ಮತ್ತು ಪೊದೆ ಕಡಿಯುವ ಕೆಲಸಗಳು ಕಾಟಾಚಾರಕ್ಕೆ ಮಾತ್ರ ಎಂಬಂತೆ ನಡೆಯುತ್ತಿದ್ದು, ಇದರಿಂದ ಜನರಿಗೆ ಉಪಯೋಗವಾಗುವ ಬದಲು ತೊಂದರೆಯೇ ಹೆಚ್ಚು ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಇಲ್ಲಿನ ರಸ್ತೆ ಪಕ್ಕದ ತ್ಯಾಜ್ಯದಿಂದಾಗಿ ಎದುರಾಗುತ್ತಿರುವ ಅಸಹನೀಯ ಪರಿಸ್ಥಿತಿ ಮತ್ತು ಪೊದೆ-ಗಿಡಗಳು ಬೆಳೆದು ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಉದಯವಾಣಿಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು.
ಉಚ್ಚಿಲ – ಪಣಿಯೂರು ರಸ್ತೆಯ ಕೆಲವೆಡೆ ಮತ್ತೆ ಮನೆ ತ್ಯಾಜ್ಯಗಳು, ಪ್ಲಾಸ್ಟಿಕ್ -ಕೊಳಚೆ ಮುಂತಾದ ಅಸಹ್ಯ ಸೊತ್ತುಗಳು ಚರಂಡಿಯಲ್ಲಿ ಶೇಖರಣೆಯಾಗುತ್ತಿದ್ದು, ಇದನ್ನು ತಂದು ಎಸೆಯುವ ಇಂತಹ ಅನಾಗರಿಕ ಪ್ರವೃತ್ತಿಯ ಜನರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಇಲಾಖೆಗಳನ್ನು ಆಗ್ರಹಿಸಿದ್ದಾರೆ.