Advertisement

ಮೂರು ವರ್ಷದಲ್ಲಿ 25ಕ್ಕೂ ಅಧಿಕ ಅಪಘಾತ: 9 ಸಾವು

12:33 PM Apr 30, 2022 | Team Udayavani |

ಕಾಪು: ರಾ. ಹೆ. 66ರ ಉಚ್ಚಿಲ ಜಂಕ್ಷನ್‌ ನಿರಂತರ ಅಪಘಾತದ ತಾಣವಾಗಿ ಗುರುತಿಸಲ್ಪಡುತ್ತಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಯ ವೇಳೆ ತೆರೆಯಲಾಗಿದ್ದ ಮೂಳೂರು ಮತ್ತು ಎರ್ಮಾಳು ಜಂಕ್ಷನ್‌ (ಡೈವರ್ಷನ್‌) ಜತೆಗೆ ಜನರ ಬೇಡಿಕೆಯ ಮೇರೆಗೆ ಉಚ್ಚಿಲ – ಪಣಿಯೂರು ರಸ್ತೆ ಜತೆ ಸೇರುವ ಜಂಕ್ಷನ್‌ನಲ್ಲಿ ಪ್ರತ್ಯೇಕವಾಗಿ ಡೈವರ್ಷನ್‌ ತೆರೆದುಕೊಡಲಾಗಿದೆ. ಇಲ್ಲಿ ನಾಲ್ಕೂ ದಿಕ್ಕುಗಳಿಂದ ವಾಹನಗಳು ಏಕಕಾಲಕ್ಕೆ ಸಾಗಿ ಬಂದು ಹೆದ್ದಾರಿಯನ್ನು ಪ್ರವೇಶಿಸು ತ್ತಿರುವ ಪರಿಣಾಮ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

Advertisement

ರಾ. ಹೆ. 66ರ ಉಚ್ಚಿಲ ಜಂಕ್ಷನ್‌ನ ಆಸುಪಾಸಿನಲ್ಲಿ 2019ರಿಂದ 2021 ರವೆರೆಗೆ 20 ಅಪಘಾತಗಳು ಸಂಭವಿಸಿದ್ದು ಅದರಲ್ಲಿ 8 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. 32 ವಾಹನಗಳು ಜಖಂಗೊಂಡಿವೆ. 2022ರಲ್ಲೂ ಐದು ಅಪಘಾತಗಳು ಸಂಭವಿಸಿದ್ದು ಓರ್ವ ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗದೆ ವಾಹನಗಳು ಜಖಂಗೊಂಡು, ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಬಹಳಷ್ಟಿವೆ.

ಉಪಯುಕ್ತ ಜಂಕ್ಷನ್‌

ಉಚ್ಚಿಲ ಜಂಕ್ಷನ್‌ ಹಲವು ಊರುಗಳಿಗೆ ಸಂಪರ್ಕ ಒದಗಿಸಿ ಕೊಡುವ ಮುಖ್ಯ ಪ್ರದೇಶವಾಗಿದೆ. ಎಲ್ಲೂರು, ಪಣಿಯೂರಿನಿಂದ ಉಡುಪಿ ಮತ್ತು ಮಂಗಳೂರಿಗೆ ತೆರಳುವ ವಾಹನಗಳು, ಎರ್ಮಾಳು, ಮೂಳೂರು, ಉಚ್ಚಿಲದಿಂದ ವಿವಿಧೆಡೆಗೆ ತೆರಳುವ ವಾಹನಗಳು, ಉಚ್ಚಿಲ ಕರಾವಳಿ ಭಾಗದಿಂದ ಉಡುಪಿ ಮತ್ತು ಮಂಗಳೂರಿಗೆ ತೆರಳುವ ವಾಹನ ಸವಾರರು ಈ ಜಂಕ್ಷನ್‌ ಅನ್ನು ಬಹಳವಾಗಿ ಅವಲಂಬಿಸಿದ್ದಾರೆ. ಈ ಹಿಂದೆ ಉಚ್ಚಿಲ ಜಂಕ್ಷನ್‌ ತೆರೆಯುವ ಮುನ್ನ ಈ ಎಲ್ಲ ಕಡೆಗಳಿಂದ ಬರುವ ವಾಹನ ಸವಾರರು ಉಡುಪಿಗೆ ತೆರಳುವವರು ಮತ್ತು ಮಂಗಳೂರಿಗೆ ತೆರಳುವವರು ಮೂಳೂರು ಅಥವಾ ಎರ್ಮಾಳು ಜಂಕ್ಷನ್‌ನ್ನು ಅವಲಂಬಿಸುವಂತಾಗಿತ್ತು.

ಅಪಘಾತ ಇಳಿಮುಖ ಸಾಧ್ಯತೆ

Advertisement

ಅವೈಜ್ಞಾನಿಕ ಚತುಷ್ಪಥ ಕಾಮಗಾರಿ ಮತ್ತು ಸರ್ವಿಸ್‌ ರಸ್ತೆಯ ಕೊರತೆಯಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುವಂತಾಗಿದೆ. ಸ್ಥಳೀಯಾಡಳಿತ, ರಿಕ್ಷಾ ಚಾಲಕರ ಸಹಿತವಾಗಿ ವಾಹನ ಸವಾರರ ನಿರಂತರ ಒತ್ತಡ ಮತ್ತು ಸ್ಥಳೀಯರ ಪ್ರತಿಭಟನ ಎಚ್ಚರಿಕೆಯ ಬಳಿಕ ಉಚ್ಚಿಲದಲ್ಲಿ ಕೊನೆಗೂ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡು ಸರ್ವಿಸ್‌ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಆರಂಭಗೊಂಡ ಬಳಿಕ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗುವ ನಿರೀಕ್ಷೆಯಿದೆ.

ಅನುದಾನ ಕೋರಿ ಪತ್ರ

ಸುಸಜ್ಜಿತ ಸಂತೆ ಮಾರ್ಕೆಟ್‌ ಮತ್ತುಮೀನು ಮಾರ್ಕೆಟ್‌ ನಿರ್ಮಾಣಕ್ಕೆ ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಸರಕಾರ, ಶಾಸಕರು ಮತ್ತು ಮೀನುಗಾರಿಕಾ ಇಲಾಖೆಗೆ ಅನುದಾನ ಕೋರಿ ಪತ್ರ ಬರೆಯಲಾಗುವುದು. ಆ ಮೂಲಕ ಜಂಕ್ಷನ್‌ನಲ್ಲಿ ಕಾಡುತ್ತಿರುವ ಟ್ರಾಫಿಕ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. -ಕುಶಾಲಿನಿ ವಿ.ಎಸ್, ಪಿಡಿಒ, ಉಚ್ಚಿಲ ಗ್ರಾ.ಪಂ.

ಸಮಸ್ಯೆ ನಿಯಂತ್ರಿಸಲು ಕ್ರಮ

ಸಿಗ್ನಲ್‌ ಅಳವಡಿಕೆ, ಹಂಪ್ಸ್‌ ಅಳವಡಿಕೆ ಅಸಾಧ್ಯ. ಹೆದ್ದಾರಿಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್‌ ಗಳನ್ನು ಇರಿಸಿ ವೇಗ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಗ್ರಾ.ಪಂ., ಹೆದ್ದಾರಿ ಇಲಾಖೆ, ಗುತ್ತಿಗೆದಾರರು, ಪಿಡಬ್ಲ್ಯುಡಿ ಇಲಾಖೆ ಸಹಿತವಾಗಿ ಸಂಬಂಧಪಟ್ಟವರ ಜತೆಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. -ಅಶೋಕ್‌ ಕುಮಾರ್‌, ಪಡುಬಿದ್ರಿ ಪಿಎಸ್‌ಐ

ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next