ಕಾಪು: ಉಚ್ಚಿಲ ಶ್ರೀ ಮಹಾ ಲಕ್ಷ್ಮೀ ದೇವಸ್ಥಾನದಲ್ಲಿ ಅ. 15ರಿಂದ 24ರ ವರೆಗೆ ನಡೆಯಲಿರುವ 2ನೇ ವರ್ಷದ ಉಚ್ಚಿಲ ದಸರಾ ಸಂಭ್ರಮದ ಪೂರ್ವಭಾವಿ ಸಮಾಲೋಚನ ಸಭೆಯು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಅವರು ಮಾತನಾಡಿ, ಈ ಕ್ಷೇತ್ರವು ಜೀರ್ಣೋದ್ಧಾರದ ಬಳಿಕ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಬಾರಿಯ ದಸರಾ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ದೊರಕಬೇಕಿದೆ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಚ್ಚಿಲ ಕ್ಷೇತ್ರದ ಜೀರ್ಣೋದ್ಧಾರ, ದಸರಾ ಉತ್ಸವದ ಬಳಿಕ ಮೊಗವೀರ ಸಮಾಜದ ಶಕ್ತಿ ವೃದ್ಧಿಯಾಗಿದೆ. ದಸರಾ ಸಹಿತ ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಸರ್ವರೂ ಭಾಗವಹಿಸುವ ಎಂದರು.
ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ದೇಗುಲದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಬಗ್ವಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು, ಊರ್ವ ಮಾರಿಯಮ್ಮ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಲಕ್ಷ್ಮಣ್ ಕೋಡಿಕಲ್, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಶ್ರೀಪತಿ ಭಟ್ ಉಚ್ಚಿಲ, ಮೋಹನ್ ಬೇಂಗ್ರೆ ಮಂಗಳೂರು, ಚೇತನ್ ಬೇಂಗ್ರೆ, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರಾ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ್ ಸುವರ್ಣ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ಸತೀಶ್ ಅಮೀನ್ ಪಡುಕರೆ ಕಾರ್ಯಕ್ರಮ ನಿರೂಪಿಸಿದರು.
ವಿಶೇಷತೆಗಳು
ಉಚ್ಚಿಲ ದಸರಾ ವೇಳೆ ಯುವ ದಸರಾ, ಸಾಂಸ್ಕೃತಿಕ ಉತ್ಸವ, ಸುಡು ಮದ್ದು ಪ್ರದರ್ಶನ ನಡೆಯಲಿದೆ. ಈ ಬಾರಿ ಉಚ್ಚಿಲದಿಂದ ಎರ್ಮಾಳುವರೆಗೆ, ಎರ್ಮಾಳಿನಿಂದ ಕಾಪು ಲೈಟ್ ಹೌಸ್ ವರೆಗೆ ವೈಭವದ ಶೋಭಾಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.