Advertisement

Uchila: ಚರಂಡಿಗೆ ಬಿದ್ದು ಒದ್ದಾಡಿದ ಕಾಡುಕೋಣ ರಕ್ಷಣೆ

12:34 AM Nov 08, 2023 | Team Udayavani |

ಕಾಪು: ಕಾಡು ಬಿಟ್ಟು ನಾಡಿಗೆ ಬಂದು ಚರಂಡಿಗೆ ಬಿದ್ದು ಹೊರಬರಲಾಗದೇ ಒದ್ದಾಡಿದ ಕಾಡುಕೋಣವನ್ನು ಸಕಾಲಿಕ ಕಾರ್ಯಾಚರಣೆ ಮೂಲಕ ರಕ್ಷಿಸಿದ ಘಟನೆ ಉಚ್ಚಿಲದಲ್ಲಿ ನಡೆದಿದೆ.

Advertisement

ಸುಮಾರು ಆರು ವರ್ಷ ಪ್ರಾಯದ ಕಾಡುಕೋಣ ಸೋಮವಾರ ರಾತ್ರಿ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ಚರಂಡಿ ಹೊಂಡಕ್ಕೆ ಬಿದ್ದಿದ್ದು ಹೊರ ಬರಲಾಗದೇ ಒದ್ದಾಡಿದೆ. ಅದನ್ನು ಗಮನಿಸಿದ ದೇವಸ್ಥಾನದ ಸಿಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅವರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾತ್ರಿ ಕಾಡುಕೋಣವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಆರಂಭಿಸಿದರು. ಸಹಾಯಕ ಅರಣ್ಯ ಸಂಕ್ಷರಣಾಧಿಕಾರಿ ಕ್ಲಿಫರ್ಡ್‌ ಲೋಬೋ, ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ, ಗುರುರಾಜ್‌ ಕೆ., ಗಸ್ತು ಅರಣ್ಯಾಧಿಕಾರಿಗಳಾದ ಅಭಿಲಾಷ್‌, ಮಂಜುನಾಥ್‌ ನಾಯಕ್‌, ಚರಣ್‌ ಜೋಗಿ, ಚಾಲಕ ಜಾಯ್‌ ಮುತುವರ್ಜಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಿಬಂದಿ ಸಹಕರಿಸಿದ್ದರು.

ಕಾಡುಕೋಣ ಸಂಪೂರ್ಣ ಹೆದರಿದ್ದು ಹಗಲಿನಲ್ಲಿ ಕಾರ್ಯಾಚರಣೆ ನಡೆಸಿದರೆ ಜನರಿಗೆ ತೊಂದರೆಯಾಗುವ ಭೀತಿಯಿಂದ ರಾತ್ರಿ ವೇಳೆಯಲ್ಲಿ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಗಿದೆ. ಜೆಸಿಬಿ ಮೂಲಕ ಹೊಂಡದ ಸುತ್ತಲಿನ ಮಣ್ಣನ್ನು ಬದಿಗೆ ಸರಿಸಿ ಕಾಡುಕೋಣಕ್ಕೆ ಮೇಲಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್‌ ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next