ಕಾಪು: ಉಚ್ಚಿಲ ದಸರಾದಲ್ಲಿ ಎಳೆಯರ ಪ್ರತಿಭೆಯನ್ನು ಅರಳಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ನವರಾತ್ರಿ, ದಸರಾ ಮೂಲಕ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಅಮ್ಮನವರು ನಾಡಿನ ಜನತೆಗೆ ಹೊಸ ಶಕ್ತಿಯನ್ನು ತುಂಬಲಿ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಹೇಳಿದರು.
ಉಚ್ಚಿಲ ದಸರಾ-2023 ಅಂಗವಾಗಿ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ವತಿಯಿಂದ ರವಿವಾರ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಿದ್ದ ನಾಡಹಬ್ಬ ದಸರಾ-ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಉಚ್ಚಿಲದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಮಾತನಾಡಿ, ದಸರಾವನ್ನು ಎಲ್ಲರ ಹಬ್ಬವನ್ನಾಗಿ ಆಚರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ದಸರಾ ಉತ್ಸವದ ಸಂಭ್ರಮ ಹೆಚ್ಚಿಸು ವಲ್ಲಿ ಮಹಾಲಕ್ಷ್ಮೀ ಬ್ಯಾಂಕ್‌ನ ಕೊಡುಗೆಯೂ ಅಪಾರ. ಮೊಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊಗವೀರರನ್ನು ಕೆಟಗರಿ ಒಂದಕ್ಕೆ ಸೇರಿಸಿದ ಕಾರಣ ಉತ್ತಮ ಅವಕಾಶ ದೊರೆತಂತಾಗಿದೆ ಎಂದರು.
ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಯಶ್‌ಪಾಲ್ ಎ. ಸುವರ್ಣ ಪ್ರಸ್ತಾವನೆಗೈದು, ಹಿರಿಯರ ವಿಭಾಗ (1ರಿಂದ 4ನೇ ತರಗತಿ), ಪ್ರಾಥಮಿಕ ವಿಭಾಗ (5ರಿಂದ 7), ಹೈಸ್ಕೂಲು ವಿಭಾಗ (8ರಿಂದ 10) ಮತ್ತು ಕಾಲೇಜು ವಿಭಾಗ (ಪದವಿಪೂರ್ವ ಮತ್ತು ಪದವಿ) ಹಾಗೂ ಸಾರ್ವಜನಿಕ ಮುಕ್ತ ವಿಭಾಗಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯ 500ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 3 ದಿನದೊಳಗೆ ತೀರ್ಪು ಪ್ರಕಟಿಸಿ ಬ್ಯಾಂಕ್‌ನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ರಾಜ್ಯ ಗಂಗಾ ಮತಸ್ಥ ಸಂಘದ ಅಧ್ಯಕ್ಷ ಮೌಲಾಲಿ, ಶ್ರೀ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಗಳೂರಿನ ಮಾಜಿ ಮೇಯರ್ ಭಾಸ್ಕರ ಮೊಲಿ ಮುಖ್ಯ ಅತಿಥಿಗಳಾಗಿದ್ದರು.
ಚಿತ್ರಕಲಾ ಸ್ಪರ್ಧೆಯ ತೀರ್ಪು ಗಾರರಾದ ರಮೇಶ್ ಕಿದಿಯೂರು, ಶ್ರೀಧರ್ ತೊಟ್ಟಂ, ಶೇಖರ್ ಅವರನ್ನು ಗೌರವಿಸಲಾಯಿತು.
ಸತೀಶ್ ಶೆಟ್ಟಿ ಕಲ್ಯಾಣಪುರ ಕಾರ್ಯಕ್ರಮ ನಿರೂಪಿಸಿದರು. ಯತೀಶ್ ಕೋಟ್ಯಾನ್ ವಂದಿಸಿದರು.