ಉತ್ತರಾಖಂಡ್: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ (ಫೆ.06) ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ 2024) ಮಸೂದೆಯನ್ನು ಮಂಡಿಸಿದ್ದಾರೆ.
ಇದನ್ನೂ ಓದಿ:Santhosh Patil Case; ಸಿದ್ದರಾಮಯ್ಯ ಸೇರಿ 4 ಕಾಂಗ್ರೆಸ್ ನಾಯಕರಿಗೆ ದಂಡ ವಿಧಿಸಿದ ಹೈಕೋರ್ಟ್
ಸೋಮವಾರದಿಂದ ಉತ್ತರಾಖಂಡ್ ವಿಧಾನಸಭೆಯಲ್ಲಿ ನಾಲ್ಕು ದಿನಗಳ ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಇಂದು ಕಾಂಗ್ರೆಸ್ ಶಾಸಕರ ವಿರೋಧದ ನಡುವೆ ಬಿಜೆಪಿ ಶಾಸಕರ ವಂದೇ ಮಾತರಂ, ಜೈಶ್ರೀರಾಮ್ ಘೋಷಣೆ ನಡುವೆಯೇ ಸಿಎಂ ಪುಷ್ಕರ್ ಸಿಂಗ್ ಯುಸಿಸಿ ಮಸೂದೆಯನ್ನು ಮಂಡಿಸಿದರು. ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು 2ಗಂಟೆಗೆ ಮುಂದೂಡಿದರು.
ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಬಣ್ಣಿಸಿದ್ದು, ಇದರೊಂದಿಗೆ ಬಿಜೆಪಿ ಆಡಳಿತವಿರುವ ಉತ್ತರಾಖಂಡ್ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.
ಕಳೆದ ಭಾನುವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಮಡ್ ಸಚಿವ ಸಂಪುಟವು ನಡೆಸಿದ ಸಭೆಯಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ನೀಡಲು ನಿರ್ಣಯ ಕೈಗೊಂಡಿತ್ತು. ದೇವಭೂಮಿ ಉತ್ತರಾಖಂಡ್ ಜನತೆಗೆ ಸಮಾನ ಹಕ್ಕನ್ನು ನೀಡಲು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಗಳವಾರ ಕಲಾಪದಲ್ಲಿ ಮಂಡಿಸಲಾಗುವುದು ಎಂದು ಸಿಎಂ ಧಾಮಿ ಎಕ್ಸ್ ನಲ್ಲಿ ತಿಳಿಸಿದ್ದರು.
ನಾಲ್ಕು ಸಂಪುಟಗಳಲ್ಲಿ 740 ಪುಟಗಳಿರುವ ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐದು ಸದಸ್ಯರ ಸಮಿತಿಯು ಫೆಬ್ರವರಿ 2 ರಂದು ಮುಖ್ಯಮಂತ್ರಿ ಧಾಮಿ ಅವರಿಗೆ ಸಲ್ಲಿಸಿತ್ತು.
ಯುಸಿಸಿ ಜಾರಿಯಾದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಈವರೆಗೂ ಆಯಾಯ ಧರ್ಮಗಳು ಆಯಾಯ ವೈಯಕ್ತಿಕ ಕಾನೂನು ಕ್ರಮಗಳನ್ನು ಅನುಸರಿಸುತ್ತಿದ್ದವು. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಮಸೂದೆ ಮಂಡನೆಯಾದರೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ.